ಚಿತ್ರ ೦೬ ಕೆ.ಎಲ್.ಆರ್. ೦೨ : ಶುಕ್ರವಾರ ರಾತ್ರಿ ನಗರಸಭೆ ವತಿಯಿಂದ ನಗರದಲ್ಲಿ ಹೋಟೆಲ್‌ಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳು
ಕೋಲಾರ ನಗರದಲ್ಲಿ ಶುಕ್ರವಾರ ರಾತ್ರಿ ನಗರಸಭೆ ಅಧಿಕಾರಿಗಳು, ಆಹಾರ ಸುರಕ್ಷಿತಾಧಿಕಾರಿ ಮತ್ತು ಆಹಾರ ಇಲಾಖೆಯ ಅಧಿಕಾರಿಗಳು ಹೋಟೆಲ್‌ಗಳ ಮೇಲೆ ದಾಳಿ ನಡೆಸಿ ಗುಣಮಟ್ಟವಿಲ್ಲದ ಮತ್ತು ಕೆಮಿಕಲ್ ಮಿಶ್ರಿತ ಆಹಾರ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದ ಹಾಗೂ ಪ್ಲಾಸ್ಟಿಕ್ ಕವರ್‌ಗಳನ್ನು ಮಾರಾಟ ಮಾಡುತ್ತಿದ್ದವರನ್ನು ಪತ್ತೆಹಚ್ಚಿ ೧೦ ಸಾವಿರಕ್ಕೂ ಹೆಚ್ಚು ದಂಡ ವಿಧಿಸಿ ಮುಂದೆ ಈ ರೀತಿ ಮಾಡಿದರೆ ಕ್ರಿಮಿನಲ್ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ನಗರಸಭೆ ಪೌರಾಯುಕ್ತ ನವೀನ್‌ಚಂದ್ರ ನೇತೃತ್ವದಲ್ಲಿ ಶುಕ್ರವಾರ ಸಂಜೆ ನಗರದಲ್ಲಿ ೪೦ಕ್ಕೂ ಹೆಚ್ಚು ಹೋಟೆಲ್ ಮತ್ತು ಅಂಗಡಿಗಳ ಮೇಲೆ ಏಕಾಏಕಿ ದಾಳಿ ನಡೆಸಿ ಕಾನೂನು ಬಾಹಿರವಾಗಿ ಮಾರಾಟ ಮಾಡುತ್ತಿದ್ದ ಪ್ಲಾಸ್ಟಿಕ್ ಕವರ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಕಬಾಬ್ ಸೆಂಟರ್‌ಗಳು, ಮಟನ್ ಹೋಟೆಲ್‌ಗಳ ಮೇಲೆ ಹೆಚ್ಚು ದಾಳಿ ನಡೆಸಿದ್ದು, ಮಟನ್‌ಗೆ ಮತ್ತು ಕಬಾಬ್‌ಗೆ ಕೇಸರಿ ಕಲರ್ ಬಳಕೆ, ಕೆಮಿಕಲ್ ಮಿಶ್ರಿತ ಟೇಸ್ಟಿಂಗ್ ಪೌಡರ್ ಮಿಶ್ರಣ ಮಾಡುತ್ತಿರುವುದನ್ನು ಪತ್ತೆಹಚ್ಚಿ ಅವರಿಗೆ ದಂಡ ವಿಧಿಸಿ ಮುಂದೆ ಹೀಗೆ ಮುಂದುವರೆದರೆ ಕ್ರಿಮಿನಲ್ ಪ್ರಕರಣವನ್ನು ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಕೋಲಾರ ನಗರದ ಹೋಟೆಲ್‌ಗಳಲ್ಲಿ ಜನರನ್ನು ಆಕರ್ಷಿಸಲು, ಮಟನ್ ಮತ್ತು ಚಿಕನ್ ಹೋಟೆಲ್‌ಗಳಲ್ಲಿ ಕೆಮಿಕಲ್ ಮಿಶ್ರಣ ಮಾಡಿ ರುಚಿರುಚಿಯಾಗಿ ಆಹಾರ ಪದಾರ್ಥಗಳನ್ನು ನೀಡುತ್ತಿದ್ದುದು ನಗರಸಭೆ ಅಧಿಕಾರಿಗಳ ಗಮನಕ್ಕೆ ಬಂದಿದ್ದು, ಹಾಗೂ ರಸ್ತೆ ಬದಿಗಳಲ್ಲಿ ಕೆಮಿಕಲ್ ಮಿಶ್ರಿತಗೊಂಡ ಚಿಕನ್ ಕಬಾಬ್‌ಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ನಗರಸಭೆಗೆ ದೂರುಗಳು ಬಂದಿದ್ದವು.
ರಸ್ತೆಬದಿಗಳಲ್ಲಿ ಸುರಕ್ಷಿತವಲ್ಲದ ಸ್ಥಳದಲ್ಲಿ ಕಬಾಬ್ ಮಾರಾಟ ಮಾಡುವುದು. ತಳ್ಳುಗಾಡಿಗಳಲ್ಲಿ ಬಜ್ಜಿ, ಬೋಂಡಾ ಮಾರಾಟ ಮಾಡುವುದು ಹೀಗೆ ವಿವಿಧ ರೀತಿಯ ಆಹಾರ ಪದಾರ್ಥಗಳನ್ನು ಬೀದಿಬದಿಗಳಲ್ಲಿ ಮಾರಾಟ ಮಾಡುತ್ತಿದ್ದುದು ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳು ಉಂಟಾಗುತ್ತಿದ್ದರು. ಕಳಪೆ ಗುಣಮಟ್ಟದ ಎಣ್ಣೆ ಸೇರಿದಂತೆ ಕಳಪೆ ಗುಣಮಟ್ಟದ ವಸ್ತುಗಳನ್ನು ಆಹಾರ ಪದಾರ್ಥಗಳಿಗೆ ಮಿಶ್ರಣ ಮಾಡಿ ಮಾರಾಟ ಮಾಡುತ್ತಿರುವುದನ್ನು ಸಾರ್ವಜನಿಕರು ನಗರಸಭೆ ಅಧಿಕಾರಿಗಳಿಗೆ ತಿಳಿಸಿದ್ದರು.
ಶುಕ್ರವಾರ ಸಂಜೆ ಸುಮಾರು ೪ ವಾಹನಗಳಲ್ಲಿ ೨೦ಕ್ಕೂ ಹೆಚ್ಚು ಅಧಿಕಾರಿಗಳ ಹೋಟೆಲ್‌ಗಳ ಮೇಲೆ ದಾಳಿ ನಡೆಸಿದಾಗ ಹೋಟೆಲ್‌ಗಳಲ್ಲಿ ಮಾರಾಟಕ್ಕಿದ್ದ ವಸ್ತುಗಳನ್ನು ಪರೀಕ್ಷಿಸಿದಾಗ ಗುಣಮಟ್ಟ ಇಲ್ಲದ ಆಹಾರಪದಾರ್ಥಗಳು ಪತ್ತೆಯಾಗಿವೆ. ಮುಂದೆ ಈ ರೀತಿ ಮಾಡದಂತೆ ಹೋಟೆಲ್ ಮಾಲೀಕರಿಗೆ ಅರಿವು ಮೂಡಿಸಿದಲ್ಲದೆ ಇದೇ ರೀತಿ ಮುಂದುವರೆದರೆ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ದಾಳಿಯಲ್ಲಿ ಆರೋಗ್ಯ ಸುರಕ್ಷಿತಾ ಅಂಕಿತ ಅಧಿಕಾರಿ ರಾಕೇಶ್, ನಗರಸಭೆ ಆರೋಗ್ಯಾಧಿಕಾರಿ ಬಿ.ಮಂಜುನಾಥ್, ಆಹಾರ ನಿರೀಕ್ಷಕ ಎ.ವಿ.ನಾರಾಯಣಸ್ವಾಮಿ ನೇತೃತ್ವದಲ್ಲಿ ೨೦ಕ್ಕೂ ಹೆಚ್ಚು ಸಿಬ್ಬಂದಿ ದಾಳಿಯಲ್ಲಿ ಭಾಗವಹಿಸಿದ್ದರು.
ನಗರಸಭೆ ಅಧಿಕಾರಿಗಳು ಸೇರಿದಂತೆ ಆಹಾರ ಇಲಾಖೆಯ ಅಧಿಕಾರಿಗಳು ದಾಳಿಯಲ್ಲಿ ಭಾಗವಹಿಸಿದ್ದೇವೆ. ಇದು ಪ್ರಾಥಾಮಿಕ ಹಂತವಾಗಿದ್ದು, ಈಗ ಹೆಚ್ಚರಿಕೆ ನೀಡುವ ಕೆಲಸವನ್ನು ಹೋಟೆಲ್ ಮಾಲೀಕರಿಗೆ ಮಾಡಿದ್ದೇವೆ. ಕೆಲವರಿಗೆ ದಂಡ ವಿಧಿಸಿದ್ದೇವೆ. ಇನ್ನು ಮುಂದೆ ಹಂತ ಹಂತವಾಗಿ ದಾಳಿ ಮಾಡಲಾಗುವುದು. ಈಗಲೇ ಎಚ್ಚೆತ್ತುಕೊಂಡು ಹೋಟೆಲ್‌ಗಳಲ್ಲಿ ಗುಣಮಟ್ಟದ ಆಹಾರ ಮತ್ತು ಗುಣಮಟ್ಟದ ವಸ್ತುಗಳನ್ನು ಮಾರಾಟ ಮಾಡಬೇಕು. ಯಾವುದೇ ಅಂಗಡಿಯಲ್ಲಿ ಪ್ಲಾಸ್ಟಿಕ್ ಮಾರಾಟ ಮಾಡಬಾರದು. ಮಾಡಿದರೆ ದಂಡ ಕಟ್ಟಬೇಕಾಗುತ್ತದೆ.
-ನವೀನ್‌ಚಂದ್ರ, ಪೌರಾಯುಕ್ತರು, ನಗರಸಭೆ, ಕೋಲಾರ.