ಸಿಹಿ ಖಾದ್ಯ ತಯಾರಿಕಾ ಘಟಕಗಳ ಮೇಲೆ ಆಹಾರ ಸುರಕ್ಷತೆ ಅಧಿಕಾರಿಗಳಿಂದ ದಾಳಿ  
ರಾಜ್ಯ

ಸಿಹಿ ಖಾದ್ಯ ತಯಾರಿಕಾ ಘಟಕಗಳ ಮೇಲೆ ದಾಳಿ

ಪ್ರಮುಖ ಮುಖ್ಯಾಂಶಗಳು

  • * 5.99 ಲಕ್ಷ ರೂ. ಮೌಲ್ಯದ ಅಹಾರ ಪದಾರ್ಥಗಳು ವಶಕ್ಕೆ
  • * ಕೆಲ ಘಟಕಗಳನ್ನು ತಾತ್ಕಾಲಿಕವಾಗಿ ಮುಚ್ಚಿಸಲಾಗಿದ್ದು, ಕೆಲವಕ್ಕೆ ನೋಟಿಸ್ ಜಾರಿ

ಬೆಂಗಳೂರು:

ಆಹಾರ ಸುರಕ್ಷತೆ ಕಾರ್ಯಾಚರಣೆ ಅಭಿಯಾನ ಮುಂದುವರಿಸಿರುವ ಆಹಾರ ಸುರಕ್ಷತೆ ಇಲಾಖೆಯು ಬೆಂಗಳೂರು ಸೇರಿ ರಾಜ್ಯಾದ್ಯಂತ ಸಿಹಿ ಖಾದ್ಯ ತಯಾರಿಕಾ ಕೇಂದ್ರೀಕೃತ ಘಟಕಗಳ ಮೇಲೆ ದಾಳಿ ನಡೆಸಿದೆ. ಈ ವೇಳೆ ಅವಧಿ ಮೀರಿದ, ತಪ್ಪು ಬ್ರ್ಯಾಂಡಿಂಗ್ ಸೇರಿ 5.99 ಲಕ್ಷ ರೂ. ಮೌಲ್ಯದ ಆಹಾರ ಪದಾರ್ಥಗಳನ್ನು ವಶಪಡಿಸಿಕೊಂಡಿದೆ.

ಸಿಹಿ ತಿಂಡಿ ತಯಾರಿಕಾ ಘಟಕಗಳಲ್ಲಿ ಆಹಾರ ಸುರಕ್ಷತೆ ಮತ್ತು ನೈರ್ಮಲ್ಯ ಮಾನದಂಡಗಳ ಪಾಲನೆಯನ್ನು ಪರಿಶೀಲಿಸುವ ಸಂಬಂಧ ಬೆಂಗಳೂರು, ಮೈಸೂರು, ದಕ್ಷಿಣ ಕನ್ನಡ, ಬೆಳಗಾವಿ, ಕಲಬುರಗಿ ಹಾಗೂ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ 16 ಘಟಕಗಳಲ್ಲಿ ತಪಾಸಣೆ ನಡೆಸಲಾಗಿದೆ.
ಈ ಸಂದರ್ಭದಲ್ಲಿ 367 ಕೆ.ಜಿ. ರೆಡಿ ಟು ಈಟ್ ಸೇವರಿಸ್, 4 ಕೆ.ಜಿ. ಕೋಕಾ ಪೌಡರ್, 4.5 ಕೆ.ಜಿ. ಕ್ರ್ಯಾಕ್ಡ್ ಕೋಕಾ ಬೀನ್ಸ್ ಹಾಗೂ 6 ಕೆ.ಜಿ. ಖೋವಾ ಹಾಗೂ 196 ಕೆ.ಜಿ. ಸೋಂಪಾ ಪುಡಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಡುಗೆ ಎಣ್ಣೆ, ತಾಜಾ ಎಣ್ಣೆ, ಮೊಸರು, ಬೇಳೆ, ಕಡಲೆ/ಚನ್ನಾ, ಜಿಲೇಬಿ, ಕೋವ ಹಾಗೂ ಟೀ ಪೌಡರ್ ಸೇರಿ ಅನೇಕ ಪದಾರ್ಥಗಳ ಮಾದರಿಗಳನ್ನು ಸಂಗ್ರಹಿಸಿ, ಅವುಗಳ ಗುಣಮಟ್ಟ ಹಾಗೂ ಆಹಾರ ಸುರಕ್ಷತಾ ಮಾನದಂಡಗಳನ್ನು ಪರಿಶೀಲಿಸುವ ಸಲುವಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಅವಧಿ ಮೀರಿದ ಉತ್ಪನ್ನಗಳು:

ತಪಾಸಣೆ ಸಂದರ್ಭದಲ್ಲಿ ಅವಧಿ ಮೀರಿದ 5 ಲೀಟರ್ ನಂದಿನಿ ಮೊಸರು ಹಾಗೂ ತಪ್ಪಾದ ಲೇಬಲಿಂಗ್ ಹೊಂದಿದ್ದ ಚಾಕೊಲೇಟ್ ಅಲಂಕಾರ ಪದಾರ್ಥಗಳ ದೊಡ್ಡ ಗಾತ್ರದ 13 ಪ್ಯಾಕೆಟ್‌ಗಳು ಮತ್ತು ಸಣ್ಣ ಗಾತ್ರದ 6 ಪ್ಯಾಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೇ, 10 ಕೆ.ಜಿ. ಚಾಕೊಲೇಟ್ ್ಲೇವರ್, 5 ಕೆ.ಜಿ. ರಸಗುಲ್ಲಾಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಈ ವೇಳೆ ಕೆಲ ಘಟಕಗಳನ್ನು ತಾತ್ಕಾಲಿಕವಾಗಿ ಮುಚ್ಚಿಸಲಾಗಿದ್ದು, ಕೆಲವು ಘಟಕಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ.

ನಿಯಮದನ್ವಯ ಕಾನೂನು ಕ್ರಮ

ಬನಾನಾ ಚಿಪ್ಸ್, ಚಕ್ಲಿ ಮಸಾಲಾ ಸೇರಿ ವಿವಿಧ ಆಹಾರ ಪದಾರ್ಥಗಳ ಸುಮಾರು 60 ಕೆ.ಜಿ. ಪ್ರಮಾಣದ ಪ್ಯಾಕೆಟ್‌ಗಳ ಮೇಲೆ ತಯಾರಕರ ಹೆಸರು ಮತ್ತು ವಿಳಾಸ, ಎ್ಎಸ್‌ಎಸ್‌ಎಐ ಪರವಾನಗಿ ಸಂಖ್ಯೆ ಸೇರಿ ಕಡ್ಡಾಯ ಲೇಬಲ್ ವಿವರಗಳನ್ನು ನಮೂದಿಸದೇ ಇರುವುದರಿಂದ ತಪ್ಪು ಬ್ರ್ಯಾಂಡಿಂಗ್ ಕಾರಣಕ್ಕೆ ವಶಪಡಿಸಿಕೊಳ್ಳಲಾಗಿದೆ. ಈ ಆಹಾರ ಪದಾರ್ಥಗಳ ಕುರಿತು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ಹಾಗೂ ಅದರಡಿ ರೂಪಿಸಲಾದ ನಿಯಮಾವಳಿಗಳನ್ವಯ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಆಯುಕ್ತ ಕೆ. ಶ್ರೀನಿವಾಸ್ ತಿಳಿಸಿದ್ದಾರೆ.