Revival of important projects 
ರಾಜ್ಯ

ಮಹತ್ವದ ಯೋಜನೆಗಳಿಗೆ ಮರುಜೀವ

ತುಮಕೂರು ಡೆಸ್ಕ್
ತಿಪಟೂರು: ತಡೆಹಿಡಿಯಲಾಗಿದ್ದ ಮಹತ್ವದ ಯೋಜನೆಗಳಿಗೆ ಮರುಜೀವ ನೀಡಲಾಗುತ್ತಿದೆ ಎಂದು ಶಾಸಕ ಕೆ.ಷಡಕ್ಷರಿ ಹೇಳಿದರು.
ನಗರದ ಅಮಾನಿಕೆರೆ ದುರಸ್ತಿ, ಮತ್ತು ನವೀಕರಣ ಕಾಮಗಾರಿಗೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, 2018ರಲ್ಲಿ ಅಂದಾಜು 3 ಕೋಟಿ ರೂ. ವೆಚ್ಚದಲ್ಲಿ ಕೆರೆ ಏರಿ ದುರಸ್ತಿ ಕಾಮಗಾರಿಗೆ ಕಾರ್ಯಾದೇಶ ನೀಡಲಾಗಿತ್ತು. ಆದರೆ ಕಾರಣಾಂತರಗಳಿಂದ ಕಾಮಗಾರಿಗಳು ನನೆಗುದಿಗೆ ಬಿದ್ದಿದ್ದವು. ಇದೀಗ ತಡೆಹಿಡಿಯಲಾಗಿದ್ದ ಕಾಮಗಾರಿಗಳಿಗೆ ಮರುಜೀವ ನೀಡುವ ಪ್ರಯತ್ನ ನಡೆದಿದೆ ಎಂದರು.
2018ರಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ಮುಗಿಯಲಿದ್ದ ಕೆರೆ ಏರಿ ದುರಸ್ತಿ ಮತ್ತು ನವೀಕರಣಕ್ಕೆ ಈಗ 5 ಕೋಟಿ ರೂ. ವೆಚ್ಚವಾಗಲಿದೆ. ಇದೇ ರೀತಿ 7.5 ಕೋಟಿ ವೆಚ್ಚದ ಶಾಪಿಂಗ್​ ಕಾಂಪ್ಲೆಕ್ಸ್​ ಅಂದಾಜು 10 ಕೋಟಿ ರೂ. ದಾಟಲಿದೆ. 7ರಿಂದ 8 ಕೋಟಿ ರೂ.ವೆಚ್ಚದಲ್ಲಿ ಬೋಟಿಂಗ್​, ಕ್ಯಾಂಟೀನ್​ ವ್ಯವಸ್ಥೆಯೊಂದಿಗೆ ಕೆರೆ ಸೌಂದಯೀರ್ಕರಣ ಕಾಮಗಾರಿ ನಡೆಯಲಿದೆ ಮತ್ತು ಜಿಲ್ಲೆಯಲ್ಲೇ ಅತೀ ದೊಡ್ಡ ಗಾಜಿನ ಮನೆ ನಿಮಾರ್ಣ ಮಾಡಲಾಗುವುದು ಎಂದರು.
ಸಣ್ಣ ನೀರಾವರಿ ಇಲಾಖೆಯ ಸಹಾಯಕ ನಿರ್ದೇಶಕ ಎನ್​.ದೊಡ್ಡಯ್ಯ ಮಾತನಾಡಿ, ಅಮಾನಿಕೆರೆಯಲ್ಲಿ 1,100 ಮೀಟರ್​ ಉದ್ದದ ಏರಿಯನ್ನು ಇಲಾಖಾ ಮಾನದಂಡಗಳಂತೆ ಹಾರ್ಟಿಂಗ್​ ಮತ್ತು ಕೇಸಿಂಗ್​ನಿಂದ ಅಭಿವೃದ್ಧಿ, ಕೆರೆಯ ಏರಿಗೆ ರಿವಿಟ್​ಮೆಂಟ್​ ಮತ್ತು ಟರ್ಫಿಂಗ್​ ಅಳವಡಿಕೆ, ಸೋಪಾನಗಳ ನಿಮಾರ್ಣ, ಫೆನ್ಸಿಂಗ್​ ದುರಸ್ತಿ ಕಾಮಗಾರಿ ಮತ್ತು ಏರಿಯ ಮೇಲ್ಬಾಗದ ವಾಕಿಂಗ್​ಪಾಥ್​ ದುರಸ್ತಿ ಕಾಮಗಾರಿ ಕೈಗೊಳ್ಳಲಾಗುವುದು. ಇದರಿಂದ ಕೆರೆ ಸುತ್ತಲಿನ ಪ್ರದೇಶಗಳಿಗೆ ಕೆರೆ ನೀರು ಸೋರಿಕೆ ತಡೆಗಟ್ಟಿದಂತಾಗುತ್ತೆ ಎಂದರು.
ತಾಪಂ ಮಾಜಿ ಅಧ್ಯಕ್ಷ ನ್ಯಾಕೇನಹಳ್ಳಿ ಸುರೇಶ್​, ಸಣ್ಣ ನೀರಾವರಿ ಇಲಾಖೆಯ ಸಹಾಯಕ ನಿರ್ದೇಶಕ ಎನ್​.ದೊಡ್ಡಯ್ಯ, ನಗರಾಯುಕ್ತ ವಿಶ್ವೇಶ್ವರ ಬದರಗಡೆ, ಇಂಜಿನಿಯರ್​ ವಿನಯ್​, ಗುತ್ತಿಗೆದಾರ ಗೌರೀಶ್​ ಇದ್ದರು.