Revival of ancestral traditions
ಬಿತ್ತಿದ ಬೆಳೆಗಳು ಒಣಗುವ ಭೀತಿ, ಕೆರೆ-ಕಟ್ಟೆಗಳು ಬತ್ತಿದ ಆತಂಕ, ಜಾನುವಾರುಗಳಿಗೆ ಮೇವು ಮತ್ತು ನೀರಿನ ಕೊರತೆ ಹೀಗೆ ಹಲವು ಸಮಸ್ಯೆಗಳನ್ನು ತಂದೊಡ್ಡಿದ ಮಳೆರಾಯ ರೈತರನ್ನು ಆತಂಕಕ್ಕೀಡು ಮಾಡಿದ್ದಾನೆ. ರೈತ ಕುಟುಂಬಗಳು ಮಳೆಯನ್ನೇ ನೆಚ್ಚಿಕೊಂಡು ಜೀವನ ನಡೆಸುತ್ತಿದ್ದು, ಉಪಕಸುಬುಗಳಿಗೂ ಸಹ ವರುಣದೇವ ಬೇಕೆ ಬೇಕು.
ಪ್ರಸ್ತುತ ಮೋಡ ಬಂದರೂ ಮಳೆಯಾಗದಿದ್ದರೆ ಸರ್ಕಾರಗಳು ಮೋಡ ಬಿತ್ತನೆ ಕಾರ್ಯ ಮಾಡುವ ಮೂಲಕ ಮಳೆ ಬೀಳಿಸುವ ತಂತ್ರಜ್ಞಾನ ಬಳಸಿಕೊಳ್ಳುತ್ತಿವೆ. ಆದರೆ, ಹಳೆ ಸಂಪ್ರದಾಯಗಳು ತುಸು ಭಿನ್ನವಾಗಿದ್ದು, ಜನರ ಗಮನ ಸೆಳೆಯುತ್ತವೆ. ಮಳೆಗಾಗಿ ಹೋಬಳಿಯ ಗುಲ್ಲಹಳ್ಳಿ ಗ್ರಾಪಂ ವ್ಯಾಪ್ತಿಯ ಕೊತ್ತೂರು ಮತ್ತು ದೊಡ್ಡೂರು ಗ್ರಾಮದಲ್ಲಿ ಪೂರ್ವಿಕರ ಸಂಪ್ರದಾಯದಂತೆ ಪಾರಂಪರಿಕ ಪದ್ಧತಿಗಳನ್ನು ಮತ್ತೆ ಜೀವಂತಗೊಳಿಸುತ್ತಿದ್ದಾರೆ.
ಹಿಂದೆ ಮಳೆ ಬಾರದಾಗ ಹಿರಿಯರು ಊರಿನಲ್ಲಿ ಕೋಲಾಟ ಆಯೋಜಿಸಿ ಮಳೆರಾಯನಿಗೆ ಪೂಜೆ ಸಲ್ಲಿಸುತ್ತಿದ್ದರು. ಕೋಲಾಟ ಮುಗಿದ ದಿನವೇ ರಾತ್ರಿ ಮಳೆ ಬರುತ್ತಿತ್ತು ಎಂಬುದು ಹಿರಿಯರ ನಂಬಿಕೆ. ಆ ಸಂಪ್ರದಾಯವನ್ನು ಇಂದಿನ ಪೀಳಿಗೆಗೆ ಪರಿಚಯಿಸಿ, ನಮ್ಮ ಸಂಸತಿ ಉಳಿಸುವ ಉದ್ದೇಶದಿಂದ ಮತ್ತೆ ಕೋಲಾಟ ನಡೆಸುತ್ತಿದ್ದೇವೆ.
ಕೋಲಾಟ ಮೂಲಕ "ಮಳೆರಾಯಣ್ಣ"ನನ್ನು ಊರಿನಾದ್ಯಂತ ಮೆರವಣಿಗೆ ಮೂಲಕ ಕರೆದುಕೊಂಡು ಹೋಗಿ ವಿಶೇಷ ಪೂಜೆ ಸಲ್ಲಿಸುವುದು ಸಂಪ್ರದಾಯವಾಗಿತ್ತು. ಈ ಆಚರಣೆ ಮಾಡಿದರೆ ಮಳೆ ಬರುತ್ತದೆ ಎಂಬುದು ಹಿರಿಯರ ನಂಬಿಕೆಯಾಗಿತ್ತು. ಈಗ ಅದೇ ನಂಬಿಕೆ ಮುಂದುವರಿಸಿಕೊಂಡು ಗ್ರಾಮಸ್ಥರು ಮತ್ತು ರೈತರು ಮತ್ತೆ ಕೋಲಾಟ ಆಯೋಜಿಸಿ, ಮಳೆರಾಯನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮಕ್ಕಳು, ಯುವಕರು, ಮಹಿಳೆಯರು ಮತ್ತು ಹಿರಿಯರು ಒಟ್ಟಾಗಿ ಭಾಗವಹಿಸುತ್ತಿರುವುದು ಗ್ರಾಮೀಣ ಸಂಸತಿ ಮತ್ತು ಪರಂಪರೆ ಉಳಿವಿಗೆ ಸಾಕ್ಷಿಯಾಗಿದೆ.
ಆಧುನಿಕ ಯುಗದಲ್ಲಿ ಪೂರ್ವಿಕರ ಆಚರಣೆ ಮರೆಯದೆ, ಮುಂದಿನ ಪೀಳಿಗೆಗೆ ಪರಿಚಯಿಸುವ ಪ್ರಯತ್ನ ನಡೆಯುತ್ತಿರುವುದು ವಿಶೇಷವಾಗಿದೆ. ಮಳೆಯ ನಿರೀಕ್ಷೆಯಲ್ಲಿರುವ ರೈತರು ಪ್ರಕೃತಿಯ ಕೃಪೆಗಾಗಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದು, ಶೀಘ್ರ ಉತ್ತಮ ಮಳೆಯಾಗಿ ರೈತರ ಬದುಕಿನಲ್ಲಿ ನೆಮ್ಮದಿ ಮೂಡಲಿ ಎಂಬುದು ಈ ಸಂಪ್ರದಾಯದ ಉದ್ದೇಶವಾಗಿದೆ.
ರೈತ ಮುಖಂಡರಾದ ವೆಂಕಟಪ್ಪ ಭೈರಪ್ಪ, ನಾರಾಯಣಪ್ಪ, ತಿಮ್ಮರಾಯಪ್ಪ, ಚಿನ್ನಯ್ಯಪ್ಪ, ಶಂಕರಪ್ಪ, ಲಕ್ಷಿ$್ಮಪತಿ, ದೊಡ್ಡೂರು ಅಂಗಡಿ ನಾಗರಾಜ್, ಸೊನ್ನಪ್ಪ, ತಿಮ್ಮಣ್ಣ ಮತ್ತಿರರು ಇದ್ದರು.