ಶಹಾಪುರ ಮತಕ್ಷೇತ್ರದ ಏವೂರು ಗ್ರಾಮದ ಸ್ವಯಂಭು ಸೋಮೇಶ್ವರ ದೇವಾಲಯದ ಮರು ನಿರ್ಮಾಣದ ನೋಟ.
- ಶಾಸಕ ಶರಣಬಸಪ್ಪ ದರ್ಶನಾಪುರ ಮಾಹಿತಿ
- ಏವೂರು ಸ್ವಯಂಭು ಸೋಮೇಶ್ವರ ದೇವಸ್ಥಾನ ಮರು ನಿರ್ಮಾಣ
ಶಹಾಪುರ: ಶಿಥಿಲಾವಸ್ಥೆ ತಲುಪಿದ್ದ ಸುರಪುರ ತಾಲೂಕಿನ ಶಹಾಪುರ ವಿಧಾನಸಭಾ ಮತಕ್ಷೇತ್ರದ ಏವೂರು ಗ್ರಾಮದಲ್ಲಿನ 11&12ನೇ ಶತಮಾನದ ಸ್ವಯಂಭು ಸೋಮೇಶ್ವರ ದೇವಸ್ಥಾನ ಸುಮಾರು ಐದು ಕೋಟಿ ರೂ. ವೆಚ್ಚದಲ್ಲಿ ಮರು ನಿರ್ಮಾಣ ಮಾಡಲಾಗುತ್ತಿದೆ ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ತಿಳಿಸಿದ್ದಾರೆ.
ಒಂದು ವರ್ಷದಿಂದ ದೇವಸ್ಥಾನ ಆವರಣದಲ್ಲಿ ವಿವಿಧ ಕಾಮಗಾರಿಗಳು ನಡೆದಿವೆ. ಈಗಾಗಲೇ 2.50 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದ್ದು, ಇನ್ನೂ 2.50 ಕೋಟಿ ರೂ. ವೆಚ್ಚದಲ್ಲಿ ಸಂಪೂರ್ಣ ನವಿಕರಣಗೊಳಿಸಿ ಗತಕಾಲದ ವೈಭವ ಮರುಕಳಿಸುವ ಮೂಲಕ ಚಾಲುಕ್ಯ ಅರಸ ಕಾಲದ ಕುರುಹು ಜೀವಂತವಾಗಿ ಉಳಿಸಿ ಮುಂದಿನ ಪೀಳಿಗೆಗೆ ಇದರ ಮಹತ್ವ ತಿಳಿಸಲಾಗುವುದು. ದೇವಾಲಯ ಸಂಪೂರ್ಣ ಬೀಳುವ ಹಂತಕ್ಕೆ ಬಂದಿರುವುದನ್ನು ಮನಗಂಡು ಗ್ರಾಮಸ್ಥರೊಂದಿಗೆ ಚರ್ಚಿಸಿ ನೀಲಿನಕ್ಷೆ ಸಿದ್ಧಪಡಿಸಿ ಮರು ನಿರ್ಮಾಣ ಕಾರ್ಯ ಆರಂಭಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಸಾವಿರ ವರ್ಷ ಹಿಂದಿನ ಈ ದೇಗುಲಕ್ಕೆ ಐತಿಹಾಸಿಕ ಹಿನ್ನೆಲೆ ಇದೆ. ಸ್ವಯಂಭು ಸೋಮೇಶ್ವರ, ಬಾವಿ ಬಸವಣ್ಣ, ಸಂಗಮೇಶ್ವರ, ಮಲ್ಲಿಕಾರ್ಜುನ, ಕಾಳಿಕಾ ದೇವಿ ಗುಡಿ, ಲಿಂಗ ಸ್ಥಾಪಿತ ಉಗ್ರಾಣ ಮಂಟಪವಲ್ಲದೆ ರಾಜ್ಯದ ಏಕೈಕ ಸುಸುಜ್ಜಿತ ಮಂಟಪ ಹೊಂದಿರುವ ಅಮೂಲ್ಯ ಶಾಸನವೂ ಇಲ್ಲಿದೆ. ಆದರೆ ಸ್ವಯಂಭು ಸೋಮೇಶ್ವರ ದೇವಸ್ಥಾನದ ಬಹುತೇಕ ಭಾಗಗಳು ನೆಲಸಮಗೊಂಡಿದ್ದವು. ಆಗಿನ ಶಿಲ್ಪಕಲೆಯನ್ನು ಹಾಗೆಯೇ ಉಳಿಸಿಕೊಂಡು ಮರು ನಿರ್ಮಾಣ ಮಾಡಲಾಗುತ್ತಿದ್ದು, ಬಹುತೇಕ ಕೆಲಸ ಪೂರ್ಣಗೊಂಡಿದೆ. ದೇವಾಲಯ ಮೇಲ್ಭಾಗದಲ್ಲಿ ನಾಲ್ಕು ಕಡೆ ಸಣ್ಣ ಸಣ್ಣ ಗೋಪುರ, ನಡುವೆ ಎತ್ತರ ಗೋಪುರದ ಕೆಲಸ ಮುಗಿದಿದೆ. ಒಳಗಡೆ ಈ ಹಿಂದೆ ಇದ್ದ ಬಸವಣ್ಣನ ಮೂರ್ತಿ ಬದಲಿಸಿ ಎಲ್ಲ ಕೆಲಸ ಮುಗಿದ ಬಳಿಕ ಸಾಂಪ್ರದಾಯಿಕ ಪೂಜೆಯೊಂದಿಗೆ ಹೊಸ ಮೂರ್ತಿ ಸ್ಥಾಪಿಸಲಾಗುವುದು ಎಂದು ದರ್ಶನಾಪುರ ತಿಳಿಸಿದ್ದಾರೆ.
ಹೆಗ್ಗಡೆ ನಾಗವರ್ಮ ನಿರ್ಮಿಸಿದ್ದ ದೇವಾಲಯ
ಏವೂರಿನ ಸ್ವಯಂಭು ಸೋಮೇಶ್ವರ ದೇವಾಲಯಕ್ಕೆ ಸಂಬಂಧಿಸಿದಂತೆ 1077&1179ರ ಅವಧಿಯ 11 ಶಾಸನಗಳಿದ್ದು, ಇವುಗಳಲ್ಲಿ 1077ರ ಸಂಸತ ಶಾಸನ ಕಲ್ಯಾಣದ ಚಾಲುಕ್ಯ ಅರಸ 6ನೆಯ ವಿಕ್ರಮಾದಿತ್ಯನ ಕಾಲದಾಗಿದ್ದು, ಸಂಧಿವಿಗ್ರಹಿ ರವಿದೇವಚಮೂಪನ ಆದೇಶದಂತೆ ಏವೂರಿನ ಹೆಗ್ಗಡೆ ನಾಗವರ್ಮ ನಿರ್ಮಿಸಿದ ಅದ್ಭುತವಾದ ಸ್ವಯಂಭು ಸೋಮೇಶ್ವರ ದೇವಾಲಯ ಇದಾಗಿದೆ.
ಮತಕ್ಷೇತ್ರದ ಏವೂರು ಗ್ರಾಮದ ಸ್ವಯಂಭು ಸೋಮೇಶ್ವರ ದೇವಸ್ಥಾನದ ಮರು ನಿರ್ಮಾಣದ ಮೊದಲ ಹಂತದ ಕೆಲಸಕ್ಕೆ ಪುರಾತತ್ವ ಇಲಾಖೆಯಿಂದ 2.50 ಕೋಟಿ ರೂ. ಒದಗಿಸಲಾಗಿದೆ. ಇನ್ನುಳಿದ ಕಾಮಗಾರಿಗಾಗಿ ಅಗತ್ಯವಿರುವ ಸುಮಾರು 2.50 ಕೋಟಿ ರೂ.ಪ್ರವಾಸೋದ್ಯಮ ಇಲಾಖೆ ಇಲ್ಲವೆ ಕೆಕೆಆರ್ಡಿಬಿಯಿಂದ ಬಿಡುಗಡೆ ಮಾಡಿಸಲಾಗುವುದು.