- ಶಾಸಕ ಶರಣಗೌಡ ಕಂದಕೂರ ಆಗ್ರಹ
- ಸುಳ್ಳಿನಿಂದ ಕೂಡಿದ ಆರೋಗ್ಯ ಸಚಿವರ ಮಾಹಿತಿ
ಯಾದಗಿರಿ: ಗಿರಿ ಜಿಲ್ಲೆಯ ತಮ್ಮ ಮತೇತ್ರ ಗುರುಮಠಕಲ್ ಸೇರಿ ವಿವಿಧೆಡೆ ಇರುವ ಐದು ಸಿಎಚ್ಸಿ ಆಸ್ಪತ್ರೆ ಮುಚ್ಚುವ ನಿರ್ಧಾರ ಸರ್ಕಾರ ಮರು ಪರಿಶೀಲಿಸಬೇಕು ಎಂದು ಜೆಡಿಎಸ್ ಶಾಸಕ ಶರಣಗೌಡ ಕಂದಕೂರ ಒತ್ತಾಯಿಸಿದರು.
ಅಧಿವೇಶನದಲ್ಲಿ ಮಂಗಳವಾರ ಆರೋಗ್ಯ, ಅಬಕಾರಿ ಮತ್ತು ಪೊಲೀಸ್ ಇಲಾಖೆ ಜಿಲ್ಲೆಗೆ ಸಂಬಂಧಪಟ್ಟಂತೆಯೆ ಕೈಗೊಳ್ಳಬೇಕಾದ ಪ್ರಮುಖ ವಿಷಯಗಳನ್ನು ಸವಿಸ್ತಾರವಾಗಿ ಮಾತನಾಡುವ ಮೂಲಕ ಗಮನ ಸೆಳೆದರು.
ಮೊದಲೇ ನಮ್ಮ ಜಿಲ್ಲೆಯಲ್ಲಿ ಗುಳೆ ಹೋಗುವ ಜನರು ಹೆಚ್ಚು. ಅದರಲ್ಲೂ ಆರೋಗ್ಯ ಸಂಬಂಧಿತ ವಿವಿಧ ರೋಗಗಳಿಂದ ಬಳಲುವವರು ಹೆಚ್ಚು. ಹೀಗಿರಬೇಕಾದರೆ ಗ್ರಾಮೀಣ ಪ್ರದೇಶದಲ್ಲಿರುವ ಸಿಎಚ್ಸಿ, ಪಿಎಚ್ಸಿ ಆಸ್ಪತ್ರೆ ಬಂದ್ ಮಾಡಲು ಮುಂದಾದರೆ ನಮ್ಮ ಜನರ ಆರೋಗ್ಯದ ಗತಿ ಏನಾಗಬೇಡ. ಹಳ್ಳಿ ಬಿಟ್ಟು ಗುರುಮಠಕಲ್ ಬಂದು ಚಿಕಿತ್ಸೆ ಪಡೆಯರಿ ಎಂದರೆ ಜನರಿಗೆ ಆಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು.
ಹಿಂದೆ ಡಾ.ಎ.ಬಿ.ಮಲಕರೆಡ್ಡಿ ಅವರು ಆರೋಗ್ಯ ಮಂತ್ರಿಗಳಿದ್ದಾಗ, ನಮ್ಮ ತಂದೆ ನಾಗನಗೌಡರು ಜಿಪಂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯರಿದ್ದಾಗ ಕೆಲ ಊರುಗಳಿಗೆ ಸಿಎಚ್ಸಿ ಮತ್ತು ಪಿಎಚ್ಸಿ ಆಸ್ಪತ್ರೆಗಳು ಮಂಜೂರು ಮಾಡಿಸಿದ್ದರು. ಅವುಗಳನ್ನು ನೀವು ಬಂದ್ ಮಾಡಿದರೆ ಜನರು ಸುಮ್ಮನ್ನೆ ಇರುವುದಿಲ್ಲ. ತಂದೆ ತಂದರು, ಮಗ ಬಂದ್ ಮಾಡಿದರೆಂದು ನಮ್ಮ ಮೇಲೆ ತಪ್ಪು ತಿಳೀದುಕೊಳ್ಳುತ್ತಾರೆ. ಅದಕ್ಕೆ ಅದನ್ನು ಪರಿಶೀಲನೆ ಮಾಡಿ, ಇಲ್ಲವೆಂದರೆ ಬರುವ ಸೋಮವಾರ ಓಟಿಂಗ್ಗೆ ಹಾಕಿ ಎಂದು ಶಾಸಕ ಕಂದಕೂರ ಸರ್ಕಾರದ ನಡೆಯನ್ನು ತರಾಟೆಗೆ ತೆಗೆದುಕೊಂಡರು.
ಮೂವತ್ತು ಹೆರಿಗೆ ಮಾಡಬೇಕೆಂಬ ಕಂಡಿಷನ್ ಹಾಕಿದ್ದೀರಿ, ಅಷ್ಟು ಹೆರಿಗೆ ಮಾಡಿಸಲು ಸೌಲಭ್ಯಗಳೇ ನೀಡಿಲ್ಲ. ಮೊದಲು ಹೆರಿಗೆಗಾಗಿ ಬೇಕಾಗುವ ಸೌಲಭ್ಯ ನೀಡಿ ಎಂದು ಆರೋಗ್ಯ ಸಚಿವರಿಗೆ ಒತ್ತಾಯಿಸಿದರು. ಗುರುಮಠಕಲ್ ಸೇರಿ ಜಿಲ್ಲೆಗೆ ಇಂದಿಗೂ ಔಷಧಿಗಳ ಸರಬರಾಜು ಆಗಿಲ್ಲ. ನೀವು ನೀಡಿದ ಮಾಹಿತಿ ಸುಳ್ಳು ಇದೆ ಎಂದು ಶಾಸಕ ಕಂದಕೂರ ತಿರುಗೆಟು ನೀಡಿದರು. ಈ ವೇಳೆ ಮಾತನಾಡಿದ ಆರೋಗ್ಯ ಸಚಿವ ದಿನೇಶ ಗುಂಡುರಾವ್ ಅವರು ಈ ಎಲ್ಲ ಬೇಡಿಕೆ ಪರಿಶೀಲಿಸುವುದಾಗಿ ಭರವಸೆ ನೀಡಿದರು.
ಕೆಎಸ್ಆರ್ಪಿ ಬಟಾಲಿನ್ ಸ್ಥಾಪಿಸಿ
ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೆಎಸ್ಆರ್ಪಿ ಬಟಾಲಿನ್ ಸ್ಥಾಪನೆ ಮಾಡುವುದು ಬಹಳ ಅಗತ್ಯವಿದೆ. ಅದನ್ನು ರಾಯಚೂರಿನಲ್ಲಿ ಸ್ಥಾಪಿಸಲು ಈಗಾಗಲೇ 30 ಜನ ಶಾಸಕರು ಪತ್ರ ಕೊಟ್ಟಿದ್ದೇವೆ. 175 ಎಕರೆ ಜಾಗವೂ ನೀಡುವುದಾಗಿ ಹೇಳಿದ್ದೇವೆ. ಕಳೆದ ಅಧಿವೇಶನದಲ್ಲೂ ಈ ಬಗ್ಗೆ ಪ್ರಸ್ತಾವಿಸಿದ್ದೆ, ಗೃಹ ಸಚಿವರಿಗೂ ಭೇಟಿ ಮಾಡಿ ವಿಷಯ ಗಮನಕ್ಕೆ ತರಲಾಗಿದೆ. ಅನುದಾನ ಬೇಕಿದ್ದರೇ ಕೆಕೆಆರ್ಡಿಬಿ ಮೈಕ್ರೋ ಯೋಜನೆಯಡಿ ನೀಡಲು ಸಿದ್ದರಿದ್ದೇವೆ ಎಂದು ಹೇಳಿದ ಶಾಸಕರಿಗೆ ಉತ್ತರಿಸಿದ ಗೃಹ ಸಚಿವ ಡಾ.ಪರಮೇಶ್ವರ, ಬೇಡಿಕೆಗೆ ಸರ್ಕಾರ ಸ್ಪಂದಿಸಿದೆ. ಆರ್ಥಿಕ ಇಲಾಖೆಯಿಂದ ಅನುಮೋದನೆ ಸಿಕ್ಕ ಕೂಡಲೇ ಅದನ್ನು ಕಾರ್ಯಗತ ಮಾಡುವುದಾಗಿ ಭರವಸೆ ನೀಡಿದರು.