ಒಳಮೀಸಲು ಮತ್ತು ಜಾತಿ ವರ್ಗೀಕರಣ ಮರು ಪರಿಶೀಲಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತ ಬಂಜಾರ ಸೇವಾ ಸಂಘದ ಕಾರ್ಯಕರ್ತರು ಕಲಬುರಗಿಯಲ್ಲಿ ಗುರುವಾರ ಬೃಹತ್​ ಪ್ರತಿಭಟನೆ ನಡೆಸಿದರು. ನಾಮದೇವ ರಾಠೋಡ, ವಿಠ್ಠಲ್​ ಜಾಧವ್​, ಪ್ರೇಮಕುಮಾರ ರಾಠೋಡ, ಲತಾ ರಾಠೋಡ, ರವಿ ರಾಠೋಡ, ಶಂಕರ ಚವ್ಹಾಣ್​, ಆಕಾಶ ರಾಠೋಡ, ಸುರೇಶ ರಾಠೋಡ, ಶಾಮ ಆಡೆ, ದತ್ತು ಜಾಧವ್​ ಇತರರಿದ್ದರು. 
ರಾಜ್ಯ

ಆಂತರಿಕ ಮೀಸಲು ಮರುಪರಿಶೀಲಿಸಿ

ಜಯತೀರ್ಥ ಪಾಟೀಲ

ಪ್ರಮುಖ ಮುಖ್ಯಾಂಶಗಳು

  • ಕಲಬುರಗಿಯಲ್ಲಿ ಬಂಜಾರರ ಬೃಹತ್​ ಪ್ರತಿಭಟನೆ
  • ಅಂತಿಮ ತೀರ್ಪು ಬರೋವರೆಗೆ ಹಳೆಯ ಮೀಸಲು ಮುಂದುವರಿಸಿ
ಕಲಬುರಗಿ: ಪರಿಶಿಷ್ಟ ಜಾತಿಗಳ 101 ಸಮುದಾಯಗಳಿಗೆ ಸಮಾನ ಅವಕಾಶ ಮತ್ತು ಸಾಮಾಜಿಕ ನ್ಯಾಯ ಕಲ್ಪಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಆಂತರಿಕ ಮೀಸಲಾತಿ ಮತ್ತು ಜಾತಿ ವರ್ಗೀಕರಣ ಮರು ಪರಿಶೀಲಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತ ಬಂಜಾರ ಸೇವಾ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಬೃಹತ್​ ಪ್ರತಿಭಟನೆ ನಡೆಸಿದರು.
2025ರ ಆ.19ರಂದು ಸಚಿವ ಸಂಪುಟದ ನಿರ್ಧಾರ, 2026ರ ಮೇ 8 ಮತ್ತು 13ರಂದು ಹೊರಡಿಸಿದ ರೋಸ್ಟರ್​ ಪಾಯಿಂಟ್​ ಅಧಿಸೂಚನೆ ಹಾಗೂ ಫೆ.27ರಂದು ಆಂತರಿಕ ಮೀಸಲಾತಿ ಅನ್ವಯಿಸದೆ ನೇಮಕಾತಿ ನಡೆಸುವ ಕುರಿತ ಅಧಿಸೂಚನೆ ಮರುಪರಿಶೀಲಿಸಬೇಕು ಎಂದು ಒತ್ತಾಯಿಸಿದರು.
ಪರಿಶಿಷ್ಟ ಜಾತಿಗಳ ಉಪ-ವರ್ಗೀಕರಣಕ್ಕೆ ಸಂಬಂಧಿಸಿದ ಸುಪ್ರೀಂಕೋರ್ಟ್​ ತೀರ್ಪು ಉಲ್ಲೆಖಿಸಲಾಗಿದೆ. ಸಾಮಾಜಿಕ, ಶೈಕ್ಷಣಿಕ ಹಿಂದುಳಿದಿರುವಿಕೆ ಮತ್ತು ಉದ್ಯೋಗದಲ್ಲಿ ಸಮರ್ಪಕ ಪ್ರಾತಿನಿಧ್ಯ ಇಲ್ಲದಿರುವುದನ್ನು ಪರಿಗಣಿಸಲು ಪರಿಣಾಮಕಾರಿ ದತ್ತಾಂಶ ಅಗತ್ಯವಾಗಿದೆ. ಸಚಿವ ಸಂಪುಟ 101 ಜಾತಿಗಳನ್ನು ಎ, ಬಿ ಮತ್ತು ಸಿ ಎಂದು ಗುಂಪುಗಳಾಗಿ ವಿಂಗಡಿಸಿ ಶೇ.17ರ ಮೀಸಲಾತಿಯಲ್ಲಿ ಕ್ರಮವಾಗಿ ಶೇ.6, 6 ಮತ್ತು 5 ಹಂಚಿಕೆ ಮಾಡಲು ನಿರ್ಧರಿಸಿತು. ಈ ವರ್ಗೀಕರಣ ಸಮುದಾಯಗಳ ಹಿಂದುಳಿದಿರುವಿಕೆ ಹಾಗೂ ಪ್ರಾತಿನಿಧ್ಯಕ್ಕಿಂತ ಜನಸಂಖ್ಯೆ ಆಧರಿಸಿದೆ ಎಂದು ಆರೋಪಿಸಿದರು.
101 ಪರಿಶಿಷ್ಟ ಜಾತಿಗಳನ್ನು ಸಮರ್ಪಕ ಪ್ರಾತಿನಿಧ್ಯ ಹೊಂದದ ಮತ್ತು ಹೊಂದಿರುವ ಎರಡು ಗುಂಪುಗಳಾಗಿ ವರ್ಗೀಕರಿಸಬೇಕು. ಶೇ.15ರ ಮೀಸಲಾತಿಯಲ್ಲಿ ಎ ಗುಂಪಿಗೆ ಶೇ.1 ಮತ್ತು ಬಿಗೆ ಶೇ.14 ಹಂಚಿಕೆ ಮಾಡಬೇಕು. ಪರ್ಯಾಯವಾಗಿ ಸಿ ಗುಂಪಿನಲ್ಲಿರುವ ಬಂಜಾರ, ಭೋವಿ, ಕೊರ್ಚಾ ಮತ್ತು ಕೊರಮ ಸಮುದಾಯಗಳಿಗೆ ಶೇ.4 ಹಾಗೂ ಉಳಿದ 59 ಅಲೆಮಾರಿ ಜಾತಿಗಳಿಗೆ ಶೇ.1 ಹಂಚಿಕೆ ಮಾಡುವಂತೆ ಒತ್ತಾಯಿಸಿದರು.
ಕಡಿಮೆ ಸಂಖ್ಯೆಯ ಹುದ್ದೆಗಳಿರುವ ಸಂದರ್ಭಗಳಲ್ಲಿ ಮೂರು ಗುಂಪುಗಳಿಗೂ ನ್ಯಾಯಯುತ ಹಂಚಿಕೆ ಮಾಡಬೇಕು. ಈಗಾಗಲೇ ಆಂತರಿಕ ಮೀಸಲಾತಿ ಆಧರಿಸಿ ಹೊರಡಿಸಿರುವ ಪ್ರವೇಶ ಮತ್ತು ನೇಮಕಾತಿ ಅಧಿಸೂಚನೆ ಹಿಂಪಡೆಯಬೇಕು. ಹೈಕೋರ್ಟ್​ ಅಂತಿಮ ತೀರ್ಪು ನೀಡುವವರೆಗೆ 2026ರ ಫೆ.27ರ ಅಧಿಸೂಚನೆಯಂತೆ ಹಳೆಯ ಮಾನದಂಡದಲ್ಲಿ ನೇಮಕಾತಿ ಮತ್ತು ಪ್ರವೇಶ ಪ್ರಕ್ರಿಯೆ ಮುಂದುವರಿಸಬೇಕು ಎಂದು ಆಗ್ರಹಿಸಿದರು.
ಸರ್ಕಾರ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ವಿವಿಧ ಹಂತಗಳಲ್ಲಿ ನಿರ್ಧಾರ ಕೈಗೊಂಡಿದೆ. ಆದರೆ ಒಳಮೀಸಲು ವರ್ಗೀಕರಣ ಹಾಗೂ ಶೇಕಡಾವಾರು ಹಂಚಿಕೆ ಪ್ರಶ್ನಿಸಿದ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದ್ದು, ಅಂತಿಮ ತೀರ್ಪು ಇನ್ನೂ ಹೊರಬಂದಿಲ್ಲ ಎಂದರು.
ಪ್ರಮುಖರಾದ ನಾಮದೇವ ರಾಠೋಡ ಕರಹರಿ, ವಿಠ್ಠಲ್​ ಜಾಧವ್​, ಪ್ರೇಮಕುಮಾರ ರಾಠೋಡ, ಲತಾ ರಾಠೋಡ, ರವಿ ರಾಠೋಡ, ಶಂಕರ ಚವ್ಹಾಣ್​, ಆಕಾಶ ರಾಠೋಡ, ಸುರೇಶ ರಾಠೋಡ, ಶಾಮ ಆಡೆ, ದತ್ತು ಜಾಧವ್​, ಸುಭಾಷ ರಾಠೋಡ, ವಾಲ್ಮೀಕಿ ರಾಠೋಡ, ಶ್ರೀಮಂತ ಪವಾರ್​ ನಂದೂರ, ಸೋಮು ರಾಠೋಡ, ವಿಶಾಲ ನಾಯಕ, ಧನರಾಜ ರಾಠೋಡ, ಕರಣ ಚವ್ಹಾಣ್​, ವಿಠ್ಠಲ್​ ಪವಾರ್​ ಸೇರಿ ಸಾವಿರಾರು ಜನ ಪಾಲ್ಗೊಂಡಿದ್ದರು. ಜಿಲ್ಲಾಧಿಕಾರಿ ಮೂಲಕ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಮನವಿಪತ್ರ ಸಲ್ಲಿಸಲಾಯಿತು.
"

101 ಪರಿಶಿಷ್ಟ ಜಾತಿಗಳಿಗೂ ಸಮಾನ ಅವಕಾಶ, ಸಮಾನ ಪ್ರಾತಿನಿಧ್ಯ ಮತ್ತು ಸಾಮಾಜಿಕ ನ್ಯಾಯ ದೊರೆಯುವಂತೆ ವೈಾನಿಕ ಹಾಗೂ ದತ್ತಾಂಶದ ಆಧಾರದ ಮೇಲೆ ಆಂತರಿಕ ಮೀಸಲಾತಿ ಮತ್ತು ವರ್ಗೀಕರಣ ನೀತಿ ಕುರಿತು ಸರ್ಕಾರ ಮರುಪರಿಶೀಲಿಸಬೇಕು. ಅನ್ಯಾಯವಾದರೆ ಬಂಜಾರ ಸಮಾಜ ಬೀದಿಗಿಳಿದು ನಿರಂತರ ಹೋರಾಟ ಮಾಡಲಿದೆ.