ವಿಜಯಪುರ ಪುರಸಭೆ 
ರಾಜ್ಯ

ವಿಜಯಪುರ ಪುರಸಭೆಯಲ್ಲಿ ಕಂದಾಯ ಲೂಟಿ? / VIJAYAPUR

ವಿಜಯಪುರ : ಸರ್ಕಾರಕ್ಕೆ ತೆರಿಗೆ ಪಾವತಿಸಿದವರೆ ಮೂರ್ಖರು ಎಂಬವಾತಾವರಣ ಪಟ್ಟಣದ ಪುರಸಭೆಯಲ್ಲಿ ನಿಮಾರ್ಣವಾಗಿದೆ. ಹತ್ತಾರು ವರ್ಷಗಳಿಂದ ನಿಯತ್ತಾಗಿ ಕಂದಾಯ ಪಾವತಿಸುತ್ತಿರುವ ನಾಗರಿಕರು, ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಈಗ ಎರಡನೇ ಬಾರಿ ದಂಡದ ಸಮೇತ ಪಾವತಿಸುವಂತಾಗಿದೆ.
ರಸೀದಿ ಇಲ್ಲದಿದ್ದರೆ ನೀವು "ಡಿಫಾಲ್ಟರ್​'! : ಪ್ರತಿ ವರ್ಷ ಏಪ್ರಿಲ್​ನಲ್ಲಿ ರಿಯಾಯಿತಿ ಆಸೆಯಿಂದ ಕಂದಾಯ ಪಾವತಿಸುವ ಜನರಿಗೆ ಪುರಸಭೆ ಅಧಿಕಾರಿಗಳು ಬಾಕಿಯ ಭೂತ ಬಿಡುತ್ತಿದ್ದಾರೆ. ಕಳೆದ ಸಾಲಿನ ರಸೀದಿ ತೋರಿಸಿದರೂ ಒಪ್ಪದ ಸಿಬ್ಬಂದಿ, ನಮ್ಮ ಲೆಡ್ಜರ್​ನಲ್ಲಿ 10 ವರ್ಷಗಳ ಬಾಕಿ ಇದೆ. ಹಳೆಯ ಎಲ್ಲ ರಸೀದಿ ತಂದುಕೊಡಿ. ಇಲ್ಲವಾದರೆ ಬಡ್ಡಿ ಸಮೇತ ಕಟ್ಟಿ ಎಂದು ದೌರ್ಜನ್ಯ ಎಸಗುತ್ತಿದ್ದಾರೆ. ಮನೆ ಪತ್ರಗಳಂತೆ ರಸೀದಿಗಳನ್ನು ದಶಕಗಳ ಕಾಲ ಜೋಪಾನ ಮಾಡದಿದ್ದಲ್ಲಿ ನಾಗರಿಕರು ಮತ್ತೆ ತೆರಿಗೆ ಕಟ್ಟಬೇಕಾದ ಅನಿವಾರ್ಯತೆ ಎದುರಾಗಿದೆ.
ಬ್ಯಾಂಕಿನಲ್ಲಿ ಜಮಾ, ಪುರಸಭೆಯಲ್ಲಿ ಮಾಯ! : ವಿಜಯಪುರ ಪುರಸಭೆಯಲ್ಲಿ ಜನರು ಬ್ಯಾಂಕ್​ ಅಥವಾ ನೆಫ್ಟ್​ (ಓಇಈಖಿ) ಮೂಲಕ ಪಾವತಿಸಿದ ಹಣದ ವಿವರಗಳೇ ಸಿಗುತ್ತಿಲ್ಲ. ಬ್ಯಾಂಕ್​ನಲ್ಲಿ ಹಣ ಜಮೆಯಾದ ಕೂಡಲೇ ಮೊಬೈಲ್​ಗೆ ಮೆಸೇಜ್​ ಬರುತ್ತದೆ. ಆದರೆ ಪುರಸಭೆಯ ಖಾತೆಯಲ್ಲಿ ಅದು ಜಮೆಯಾಗದಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.
ನಾಗರಿಕರ ಆಕ್ರೋಶ : ಡಿಜಿಟಲ್​ ಯುಗದಲ್ಲಿ ಬ್ಯಾಂಕ್​ ವಿವರ ಸಿಗದಿರುವುದು ಸೋಜಿಗ. ಈ ಅವ್ಯವಸ್ಥೆಗೆ ಹೊಣೆ ಯಾರು?. ಮಾಜಿ ಅಧ್ಯಕ್ಷರು ಮತ್ತು ಸದಸ್ಯರ ಖಾತೆಗಳಲ್ಲಿಯೂ ಇದೇ ರೀತಿ ಆಗಿದೆ.ಅವರ ಪರಿಸ್ಥಿತಿಯೇ ಹೀಗಾದರೆ, ಇನ್ನೂ ಜನ ಸಾಮಾನ್ಯರಪಾಡೇನು? ಎಂಬುದು ನಿವಾಸಿ ಎಂ.ಮುರಳೀಧರ್​ ಅವರ ಪ್ರಶ್ನೆಯಾಗಿದೆ.
ಸ್ಮಶಾನಕ್ಕೆ ಹೋದ ಹೆಣದಂತೆ! : ಪುರಸಭೆಯ ಸದಸ್ಯರೊಬ್ಬರು ಹೇಳಿರುವ ಮಾತು ಇಲ್ಲಿನ ನೈಜ ಸ್ಥಿತಿ ಬಿಚ್ಚಿಡುತ್ತದೆ. ಒಮ್ಮೆ ಹಣ ಕಟ್ಟಿದ ಮೇಲೆ ರಸೀದಿ ಮಿಸ್​ ಆದ್ರೆ ಮುಗೀತು. ಆ ಹಣ ಮರಳಿ ಸಿಗುವುದು ಅಸಾಧ್ಯ ಎನ್ನುವ ಉಡಾಫೆ ಉತ್ತರಗಳು ಆಡಳಿತ ಮಂಡಳಿ ಅಮಾನವೀಯತೆಗೆ ಸಾಕ್ಷಿಯಾಗಿವೆ. ಈ ಹಿಂದೆ ಮಾಜಿ ಅಧ್ಯಕ್ಷ ಎ.ಒ.ಸತೀಶ್​ ಕುಮಾರ್​ ಮತ್ತು ಸಿ.ಎಂ.ರಾಮ್​ ಅವರು ಧರಣಿ ನಡೆಸಿದ್ದರೂ, ಇಲ್ಲಿನ ಅಧಿಕಾರಿಗಳ ಮೊಂಡುತನ ಮಾತ್ರ ಕಡಿಮೆಯಾಗಿಲ್ಲ ಎಂದು ಪುರಸಭೆ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಎಂ ಸತೀಶ್​ ಕುಮಾರ್​ ಹೇಳಿದರು.
ಮುಖ್ಯ ಅಧಿಕಾರಿಗಳ ಸಬೂಬು : ಪುರಸಭೆ ಮುಖ್ಯಾಧಿಕಾರಿ ಸತ್ಯನಾರಾಯಣ ಅವರು ಜನರ ಪರವಾಗಿ ನಿಲ್ಲುವ ಬದಲು, ರಸೀದಿ ಕಳೆದುಕೊಂಡರೆ ನಾವು ಜವಾಬ್ದಾರರಲ್ಲ ಎಂಬ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಹಳೆಯ ಬಾಕಿ ಇದ್ದರೂ ಪ್ರಸಕ್ತ ಸಾಲಿನ ಹಣ ಪಡೆದಿದ್ದು ಅಧಿಕಾರಿಗಳ ತಪ್ಪಲ್ಲವೇ? ಎಂಬ ಪ್ರಶ್ನೆಗೆ ಮಾತ್ರ ಅವರ ಬಳಿ ಉತ್ತರವಿಲ್ಲ.
ಅನ್ಯಾಯಕ್ಕೆ ನ್ಯಾಯ ಕೊಡಿಸಿ : ಪಕ್ಕದ ಗ್ರಾಪಂಗಳಲ್ಲಿ ತೆರಿಗೆ ಕಟ್ಟಿದ ತಕ್ಷಣ ಮೊಬೈಲ್​ಗೆ ಸಂದೇಶ ಬರುವ ತಂತ್ರಜ್ಞಾನವಿರುವಾಗ, ಪಟ್ಟಣದ ಪುರಸಭೆ ಮಾತ್ರ ಇನ್ನೂ ಲೆಡ್ಜರ್​ ಕಾಲದಲ್ಲಿಯೇ ಉಳಿದಿರುವುದು ವಿಪರ್ಯಾಸ. ಜಿಲ್ಲಾಡಳಿತ ಈ ಕೂಡಲೇ ಎಚ್ಚೆತ್ತುಕೊಂಡು ಹತ್ತು ವರ್ಷಗಳ ಬ್ಯಾಂಕ್​ ದಾಖಲೆ ಪರಿಶೀಲಿಸಿ ಸಾರ್ವಜನಿಕರಿಗೆ ಆಗಿರುವ ಅನ್ಯಾಯ ಸರಿಪಡಿಸಬೇಕಿದೆ.

ಕಂದಾಯ ಅವ್ಯವಸ್ಥೆಗಳ ಬಗ್ಗೆ ಮುಖ್ಯಾಧಿಕಾರಿ, ಜಿಲ್ಲಾ ನಗರ ಕೋಶದ ಯೋಜನಾಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು.

— > ಎಸ್​. ಭವ್ಯಾಮಹೇಶ್​, ಅಧ್ಯೆ, ವಿಜಯಪುರ ಪುರಸಭೆ