ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ
ಬೆಂಗಳೂರು: ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಕಳಂಕ ತರಲು ದೊಡ್ಡ ಷಡ್ಯಂತ್ರ ನಡೆದಿತ್ತು. ಹಿಂದೂಗಳ ಧಾರ್ಮಿಕ ಶ್ರದ್ಧೆಗೂ ಕೊಡಲಿ ಪೆಟ್ಟು ಕೊಡುವ ಕುತಂತ್ರ ನಡೆದಿತ್ತು. ಇದರ ಹಿಂದಿರುವ ಕೈಗಳ ಬಗ್ಗೆ ತನಿಖೆ ಆಗಲೆಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ.
ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ, ಒಂದು ದಿನ ಮೊದಲು ತನಿಖೆ ಅವಶ್ಯಕತೆ ಇಲ್ಲ ಎಂದಿದ್ದರು. ಆದರೆ ಪಟ್ಟಭದ್ರ ಹಿತಾಸಕ್ತಿಗಳು ಅವರನ್ನು ಭೇಟಿ ಮಾಡಿದ ನಂತರ ಎಸ್‌ಐಟಿ ತನಿಖೆಗೆ ಆದೇಶಿಸಿದ್ದರು. ಬೀದಿಯಲ್ಲಿ ಹೋಗುವವರು ಹೇಳಿದರೆಂದು ಯಾವುದನ್ನೂ ಪರಾಮರ್ಶೆ ಮಾಡದೆ ಎಸ್‌ಐಟಿ ತನಿಖೆಗೆ ಆದೇಶ ಹೊರಡಿಸಿದರು. ಇದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು.
ಧರ್ಮಸ್ಥಳದ ವಿರುದ್ಧ ಕುತಂತ್ರ ಮಾಡಲು ನೂರಾರು ಕೋಟಿ ರೂ. ಬಳಕೆ ಮಾಡಿರುವುದು ಬೆಳಕಿಗೆ ಬಂದಿದೆ. ವಿದೇಶಿ ಶಕ್ತಿಗಳ ಕೈವಾಡದ ಬಗ್ಗೆಯೂ ತನಿಖೆಯೂ ಆಗಬೇಕಿದೆ. ಕಾಂಗ್ರೆಸ್ ಸರ್ಕಾರ ಷಡ್ಯಂತ್ರಗಳಿಗೆ ಶಕ್ತಿ ತುಂಬುವ ಕೆಲಸ ಮಾಡಿರುವುದು ನಮಗೆ ನೋವು ತಂದಿದೆ. ಯಾರ್ಯಾರು ಇದರ ಹಿಂದಿದ್ದರು? ಯಾರ್ಯಾರು ಬಂಡವಾಳ ಹಾಕಿದ್ದರು? ಅಂದಿನ ಸಿಎಂ ಯಾಕೆ ಕಣ್ಮುಚ್ಚಿ ಎಸ್‌ಐಟಿಗೆ ಕೊಟ್ಟರು- ಇವೆಲ್ಲವೂ ಸತ್ಯಾಸತ್ಯತೆ ಹೊರಕ್ಕೆ ಬರಬೇಕು ಎಂಬುದು ನಾಡಿನ ಜನರ ಮತ್ತು ಹಿಂದೂಗಳ ಒತ್ತಾಯವಾಗಿದೆ ಎಂದು ವಿಜಯೇಂದ್ರ ಹೇಳಿದರು.