Reuse agricultural waste to protect soil 
ರಾಜ್ಯ

ಮಣ್ಣಿನ ರಕ್ಷಣೆಗೆ ಕೃಷಿ ತ್ಯಾಜ್ಯ ಮರು ಬಳಸಿ

ತಿಪಟೂರು: ಎಲ್ಲ ಬಗೆಯ ಕೃಷಿ ತ್ಯಾಜ್ಯಗಳನ್ನು ಮರು ಬಳಕೆ ಮಾಡುವುದರಿಂದ ಮಣ್ಣಿನ ಆರೋಗ್ಯ ಹೆಚ್ಚುತ್ತದೆ ಎಂದು ಕೊನೇಹಳ್ಳಿಯ ಕೃಷಿ ವಿಜ್ಞಾನಿ ಡಾ.ದರ್ಶನ್​ ಹೇಳಿದರು.
ತಾಲೂಕಿನ ಕಿಬ್ಬನಹಳ್ಳಿ ಹೋಬಳಿ ಬೀರಸಂದ್ರದಲ್ಲಿ ಆಯೋಜಿಸಿದ್ದ ಖೇತ್​ ಬಚಾವೋ ಆಂದೋಲನ ಮತ್ತು ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನ ಯೋಜನೆಯಡಿ ರೈತರಿಗೆ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾವಯವ ಕೃಷಿಯಲ್ಲಿ ಗಮನಿಸಬೇಕಾದ ಅಂಶಗಳೆಂದರೆ ಕಡಿಮೆ ಉಳುಮೆ, ಸಾವಯವ ಗೊಬ್ಬರಗಳ ಬಳಕೆ, ಹಸಿರೆಲೆ ಗೊಬ್ಬರಗಿಡಗಳನ್ನು ಬೆಳೆಸಿ ಮಣ್ಣಿಗೆ ಸೇರಿಸುವುದು, ಪೊಷಕಾಂಶ ಪೂರೈಕೆಗೆ ಜೈವಿಕ ಗೊಬ್ಬರಗಳ ಬಳಸುವುದು, ಕಳೆ ನಿಯಂತ್ರಿಸಲು ಮಣ್ಣಿನ ತೇವಾಂಶ ಕಾಪಾಡಲು ಹಾಗೂ ಜೈವಿಕಕ್ರಿಯೆ ಹೆಚ್ಚಿಸಲು ಹೊದಿಕೆ ಬೆಳೆ ಅಥವಾ ಹೊದಿಕೆಯನ್ನ ಬಳಸುವುದರಿಂದ ಮಣ್ಣಿನ ಆರೋಗ್ಯವನ್ನು ಕಾಪಾಡುವುದರ ಮೂಲಕ ಸುಸ್ಥಿರ ಇಳುವರಿ ಪಡೆಯಬಹುದು ಎಂದರು.
ಸಹಾಯಕ ಕೃಷಿ ನಿರ್ದೇಶಕ ಡಾ.ಎಂ.ಪಿ.ಪವನ್​, ರಾಸಾಯನಿಕ ಗೊಬ್ಬರಗಳ ಹಾಗೂ ಪೀಡೆನಾಶಕಗಳ ಬಳಕೆಯಿಂದ ನೈಸರ್ಗಿಕ ಸಂಪನ್ಮೂಲಗಳಾದ ಭೂಮಿ, ನೀರು, ಸಸ್ಯ ಮತ್ತು ಪ್ರಾಣಿ ಸಂಕುಲಗಳು ಮಲಿನಗೊಳ್ಳುತ್ತಲಿವೆ. ರಾಸಾಯನಿಕ ಕೃಷಿ ಪದ್ಧತಿಯಿಂದ ಮಣ್ಣಿನ ಭೌತಿಕ, ರಾಸಾಯನಿಕ ಹಾಗೂ ಜೈವಿಕಗುಣ ಧರ್ಮಗಳು ಕ್ಷೀಣಿಸುತ್ತಿದೆ. ಮಣ್ಣಿನ ಫಲವತ್ತತೆ ಮತ್ತು ಉತ್ಪಾದಕತೆ ಕುಂಠಿತಗೊಂಡಿದೆ. ಇದಕ್ಕೆ ಚೈತನ್ಯ ತುಂಬಲು ಸಾವಯವ ಕೃಷಿ ಸೂಕ್ತ ಎಂದರು.
ಪ್ರಗತಿಪರ ರೈತ ಮೋಹನ್​ ಮಾತನಾಡಿ, ಬೀಜಾಮೃತದಿಂದ ಬಿತ್ತನೆ ಬೀಜಗಳ ಕಾರ್ಯಕ್ಷಮತೆ ಹೆಚ್ಚಾಗುತ್ತದೆ. ಬೀಜದ ಮೂಲಕ ಹರಡುವ ರೋಗಗಳನ್ನು ತಡೆಗಟ್ಟಬಹುದು. ನಾಟಿ ಮಾಡುವ ಸಸಿಗಳನ್ನು ಕೂಡ ಬೀಜಾಮೃತದಿಂದ ನಂತರ ನಾಟಿ ಮಾಡಬಹುದು ಎಂದರು.