ಬೆಂಗಳೂರು&ಕಲಬುರಗಿ ಮಧ್ಯೆ ಸ್ಟಾರ್ಏರ್ ವಿಮಾನಯಾನ ಸೇವೆ ಮರು ಆರಂಭಕ್ಕೆ ಬುಧವಾರ ಚಾಲನೆ ನೀಡಿದ ಕೆಕೆಆರ್ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್ ಅವರನ್ನು ಸಂಸ್ಥೆಯ ಅಧಿಕಾರಿಗಳು ಅಭಿನಂದಿಸಿದರು.
- ಪ್ರಯಾಣಿಕರಿಂದ ಉತ್ತಮ ಸ್ಪಂದನೆ
- ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿ ಆರ್ಥಿಕ ನೆರವು
ಕಲಬುರಗಿ: ಬೆಂಗಳೂರು-ಕಲಬುರಗಿ ಮಧ್ಯೆ ಸ್ಟಾರ್ಏರ್ ಸಂಸ್ಥೆಯಿಂದ ವಿಮಾನಯಾನ ಸೇವೆ ಬುಧವಾರ ಪುನರಾರಂಭವಾಗಿದ್ದು, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯು ಲೋಹದ ಹಕ್ಕಿ ಹಾರಾಟಕ್ಕೆ ಆರ್ಥಿಕ ನೆರವು ನೀಡಿದೆ.
ಕಲಬುರಗಿ ವಿಮಾನ ನಿಲ್ದಾಣದಲ್ಲಿ ಬುಧವಾರ ನಡೆದ ಸರಳ ಕಾರ್ಯಕ್ರಮದಲ್ಲಿ ಶಾಸಕರಾದ ಕನೀಜ್ ಫಾತಿಮಾ, ಎಂ.ವೈ.ಪಾಟೀಲ್ ಸಾಂಕೇತಿಕವಾಗಿ ಸ್ಟಾರ್ ಏರ್ ವಿಮಾನ ಸಂಚಾರಕ್ಕೆ ಕೇಕ್ ಕತ್ತರಿಸಿ, ಮೊದಲ ದಿನದ ಟ್ರಿಪ್ನಲ್ಲಿ ಪ್ರಯಾಣ ಮಾಡಿದ ಕೆಕೆಸಿಸಿಐ ಅಧ್ಯ ಶರಣಬಸಪ್ಪ ಪಪ್ಪಾ ಕುಟುಂಬದ ಸದ್ಯಸರಿಗೆ ಪ್ರಯಾಣದ ಟಿಕೆಟ್ ವಿತರಿಸಿ ಚಾಲನೆ ನೀಡಿದರು.
76 ಆಸನದ ಸ್ಟಾರ್ಏರ್ ವಿಮಾನವೂ ಬುಧವಾರ ಬೆಳಗ್ಗೆ 6.30ಕ್ಕೆ ಬೆಂಗಳೂರಿನಿಂದ 74 ಪ್ರಯಾಣಿಕರನ್ನು ಹೊತ್ತು, 7.40ಕ್ಕೆ ಕಲಬುರಗಿ ನಿಲ್ದಾಣಕ್ಕೆ ಬಂದಿಳಿತು. ಕಲಬುರಗಿಯಿಂದ 117 ಸಂಖ್ಯೆಯ ಸ್ಟಾರ್ ಏರ್ ವಿಮಾನ ಬೆಳಗ್ಗೆ 8.10ಕ್ಕೆ 50 ಜನರನ್ನು ಹೊತ್ತು ಬೆಂಗಳೂರಿಗೆ ಹಾರಿತು.
ಕಲಬುರಗಿಯಲ್ಲಿ ಸ್ಟಾರ್ ಏರ್ ಸಂಸ್ಥೆಯ ಏರ್ಪೋರ್ಟ್ ಮುಖ್ಯಸ್ಥ ಸಿ.ಎ.ಬೋಪಣ್ಣ ಮಾತನಾಡಿ, ಕಲಬುರಗಿ&ಬೆಂಗಳೂರು ಮಧ್ಯೆ ವಿಮಾನಯಾನಕ್ಕೆ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಮೊದಲ ದಿನವೇ ಬೆಂಗಳೂರಿನಿಂದ ಶೇ.90 ಮತ್ತು ಕಲಬುರಗಿಯಿಂದ ಶೇ.65 ಟಿಕೆಟ್ ಬುಕ್ ಆಗಿವೆ. 76 ಮತ್ತು 88 ಆಸನ ಸಾಮರ್ಥ್ಯದ ಫಾಸ್ಟೆಸ್ಟ್ ಪ್ರಯಾಣಿಕ ಸ್ನೇಹಿ ವಿಮಾನಗಳು ಸಂಚರಿಸಲಿವೆ ಎಂದರು.
ಪ್ರಸ್ತುತ ನಮ್ಮ ಸಂಸ್ಥೆಯಲ್ಲಿ 9 ವಿಮಾನಗಳಿದ್ದು, ಆಗಸ್ಟ್ ಒಳಗೆ ಇನ್ನೆರಡು ವಿಮಾನ ಬರಲಿವೆ. ಕಲಬುರಗಿ&ಮುಂಬೈ ಮಧ್ಯೆ ವಿಮಾನಕ್ಕೆ ಬೇಡಿಕೆ ಇದ್ದು, ಮದ್ಯಪ್ರಾಚ್ಯದಲ್ಲಿ ಯುದ್ಧದ ಕಾರಣ ತೈಲ ಬೆಲೆ ಹೆಚ್ಚಳವಾಗಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಬಂದಲ್ಲಿ ಮುಂದೆ ಸೇವೆ ಆರಂಭಕ್ಕೆ ಯೋಚಿಸಲಾಗುವುದು ಎಂದರು.
ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಮಾತನಾಡಿದರು. ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು, ವಿಮಾನ ನಿಲ್ದಾಣದ ನಿರ್ದೇಶಕ ಕಿಶೋರ ಕಿಲ್ಲಂಪಲ್ಲಿ, ತಹಸೀಲ್ದಾರ್ ಆನಂದಶೀಲ, ಸ್ಟಾರ್ ಏರ್ ಸಂಸ್ಥೆಯ ದಣ ಭಾರತದ ಸೇಲ್ಸ್ ಮ್ಯಾನೇಜರ್ ಅಹ್ಮದ್ ಸೊಹೇಲ್, ಏರ್ಪೋರ್ಟ್ ಎಜಿಎಂ ಕಿರಣ ಎಸ್.ಟಿ, ಕೆಕೆಸಿಸಿಐ ಕಾರ್ಯದರ್ಶಿ ಶಿವರಾಜ ಇಂಗಿನಶೆಟ್ಟಿ ಇತರರಿದ್ದರು.
ಕೇಕ್ ಕತ್ತರಿಸಿ ಚಾಲನೆ ನೀಡಿದ ಡಾ.ಅಜಯಸಿಂಗ್
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಂಗಳೂರು&ಕಲಬುರಗಿ ಮಧ್ಯೆ ಸ್ಟಾರ್ ಏರ್ ಹಾರಾಟಕ್ಕೆ ಕೇಕ್ ಕತ್ತರಿಸುವ ಮೂಲಕ ಕೆಕೆಆರ್ಡಿಬಿ ಅಧ್ಯ ಡಾ.ಅಜಯ್ಸಿಂಗ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಹಲವು ತಿಂಗಳಿನಿಂದ ಕಲಬುರಗಿ, ಬೀದರ್ಗೆ ಬೆಂಗಳೂರಿನಿಂದ ವಿಮಾನ ಸೇವೆ ಸ್ಥಗಿತಗೊಂಡಿತ್ತು. ಮಾರ್ಚ್ನಲ್ಲಿ ಕಲ್ಯಾಣ ಕರ್ನಾಟಕ ಭಾಗದ ಸಚಿವರೆಲ್ಲರೂ ಸಭೆ ನಡೆಸಿ ಮತ್ತೆ ಬೆಂಗಳೂರು&ಕಲಬುರಗಿ, ಬೆಂಗಳೂರು&ಬೀದರ್ ಮಧ್ಯೆ ವಿಮಾನ ಸೇವೆ ಪ್ರಾರಂಭಿಸಲು ನಿರ್ಧರಿಸಿದ್ದರು. ಇದಕ್ಕೆ 28.44 ಕೋಟಿ ರೂ. ತಗುಲಬಹುದೆಂದು ಅಂದಾಜಿಸಿತ್ತು. ಮಂಡಳಿ ಶೇ.80 ಅಂದರೆ ತಲಾ 22.76 ಕೋಟಿ ರೂ. ನೆರವು ನೀಡಿದ್ದು, ಉಳಿದ ಶೇ.20 ಮೊತ್ತ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಭರಿಸಲಿದೆ ಎಂದು ತಿಳಿಸಿದ್ದಾರೆ.
"
ಹಲವು ತಿಂಗಳಿಂದ ಸ್ಥಗಿತವಾಗಿದ್ದ ವಿಮಾನ ಸೇವೆಯನ್ನು ರಾಜ್ಯ ಸರ್ಕಾರ ಮತ್ತು ಕೆಕೆಆರ್ಡಿಬಿ ನೆರವಿನೊಂದಿಗೆ ಮರು ಆರಂಭವಾಗುತ್ತಿದೆ. ಮಂಡಳಿಯು ಆರ್ಥಿಕ ಸಹಾಯ ನೀಡಿದೆ. ಪ್ರವಾಸೋದ್ಯಮ, ಹೂಡಿಕೆಗೆ ಸಹಕಾರಿ ಆಗಿದೆ.
— ಇಕ್ರಮ್ ಶರೀಫ್, ಜಿಲ್ಲಾಧಿಕಾರಿ