ವಿಜಯವಾಣಿ-ಸಾಹಿತ್ಯ ಪ್ರಕಾಶನ ದೀಪಾವಳಿ ಕಥಾ ಸ್ಪರ್ಧೆ ಫಲಿತಾಂಶ ಪ್ರಕಟ 
ರಾಜ್ಯ

ವಿಜಯವಾಣಿ-ಸಾಹಿತ್ಯ ಪ್ರಕಾಶನ ದೀಪಾವಳಿ ಕಥಾ ಸ್ಪರ್ಧೆ ಫಲಿತಾಂಶ ಪ್ರಕಟ: ಸಾವಿರಕ್ಕೂ ಅಧಿಕ ಕಥೆಗಳ ನಡುವೆ ಮಿಂಚಿದ 6 ಕಥೆಗಳು!

ವಿಜಯವಾಣಿ ಸುದ್ದಿಜಾಲ, ಬೆಂಗಳೂರು: ‘ವಿಜಯವಾಣಿ- ಸಾಹಿತ್ಯ ಪ್ರಕಾಶನ ದೀಪಾವಳಿ ಕಥಾ ಸ್ಪರ್ಧೆ 2026’ರ ಫಲಿತಾಂಶ ಪ್ರಕಟವಾಗಿದೆ. ಶ್ರೀನಿವಾಸ ಸಂಡೂರು ಅವರ ‘ಗಂಟೆ ಹತ್ತು’ ಕಥೆ 20 ಸಾವಿರ ರೂ. ಮೊತ್ತದ ಪ್ರಥಮ ಬಹುಮಾನಕ್ಕೆ ಪಾತ್ರವಾಗಿದೆ. ಪ್ರಕಾಶ ಕಕ್ಕನವರ ಅವರ ‘ಹೋಟೆಲ್ ಹನಿಬೇರ್’ ಕಥೆ 15 ಸಾವಿರ ರೂ. ಮೊತ್ತದ ದ್ವಿತೀಯ ಬಹುಮಾನ ಪಡೆದಿದ್ದು, ಬಿ.ಎನ್. ಮಲ್ಲೇಶ್ ಅವರ ‘ಸತ್ತವನ ಬೆನ್ನು ಹತ್ತಿ’ ಕಥೆ 10,000 ರೂ. ಮೊತ್ತದ ತೃತೀಯ ಬಹುಮಾನಕ್ಕೆ ಭಾಜನವಾಗಿದೆ. ಇದಲ್ಲದೆ, ನಾಗೇಶ ಕುಲಕರ್ಣಿ ಅವರ ‘ಪೂತನೀ’, ನಾಗರಾಜ ವೈದ್ಯ ಅವರ ‘ಸಾಕ್ಷಿ’ ಮತ್ತು ಪ್ರವೀಣ್ ಕುಮಾರ್ ಅವರ ‘ಮಾಯಾವಿ ಪೇಂಟಿಂಗ್’ ಕಥೆಗಳು ತೀರ್ಪಗಾರರ ಮೆಚ್ಚುಗೆ ಪಡೆದಿವೆ.

ಹಿರಿಯ ವಿದ್ವಾಂಸ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ, ಖ್ಯಾತ ಲೇಖಕಿ ಡಾ. ಮಾನಸಾ ಕೀಳಂಬಿ ತೀರ್ಪಗಾರರಾಗಿದ್ದರು. ಸ್ಪರ್ಧೆಗೆ ಈ ಬಾರಿ 1150 ಕಥೆಗಳು ಬಂದಿದ್ದವು. ಆ ಪೈಕಿ ಮೊದಲ ಹಂತದ ಪರಿಶೀಲನೆ ನಂತರ 940 ಕಥೆಗಳನ್ನು ಎರಡನೇ ಸುತ್ತಿನಲ್ಲಿ ಪರಿಶೀಲಿಸಲಾಯಿತು. ಬಳಿಕ, ಅದರ ಸುಮಾರು ಶೇ. 10ರಷ್ಟು, ಅಂದರೆ 97 ಕಥೆಗಳನ್ನು

ತೀರ್ಪಗಾರರು ಸಾದ್ಯಂತವಾಗಿ ಓದಿ, ವಿವಿಧ ಕೋನಗಳಿಂದ ಒರೆಗೆ ಹಚ್ಚಿ ಬಹುಮಾನಕ್ಕಾಗಿ 3 ಮತ್ತು ಮೆಚ್ಚುಗೆ ಪಡೆದ 3 ಹೀಗೆ ಒಟ್ಟು 6 ಕಥೆಗಳನ್ನು ಆಯ್ಕೆ ಮಾಡಿದ್ದಾರೆ. ಅವುಗಳನ್ನು ಯಾರು ಬರೆದುದು ಎಂಬ ಹೆಸರು ಇಲ್ಲದೆ ಕಥೆಗಳನ್ನು ಮಾತ್ರ ಓದಿ ಈ ಎಲ್ಲಾ ಆಯ್ಕೆಗಳು ನಡೆದಿವೆ.

‘ಪತ್ತೇದಾರಿ ಕಥೆಗಳ ವಸ್ತು, ನಿರೂಪಣೆಯ ಭಾಷೆ, ನಿರೂಪಣಾ ತಂತ್ರ ಮತ್ತು ಪ್ರತ್ಯಕ್ಷ ಮತ್ತು ಅಪ್ರತ್ಯಕ್ಷ ಅನುಭವ ವೈವಿಧ್ಯ, ಕಥೆಗಾರರು ತೋರಿಸುವ ರೂಪಕಶಕ್ತಿ ಇವುಗಳನ್ನು ಪರಿಗಣಿಸಿ ಕಥೆಗಳನ್ನು ಬಹುಮಾನಕ್ಕಾಗಿ ಆಯ್ಕೆ ಮಾಡಲಾಗಿದೆ. ಪತ್ತೇದಾರಿ ಕಥೆಗಳು ಕೇವಲ ಮನರಂಜನೆಗಾಗಿ ಓದುವುದಲ್ಲ. ಆ ಕಥೆಗಳು ಬದುಕನ್ನು ವಿಶಿಷ್ಟವಾಗಿ ಕಾಣಿಸುವ ರೂಪಕಾತ್ಮಕ ಅನುಭವವನ್ನು ನಮಗೆ ನೀಡುತ್ತವೆ. ಕುತೂಹಲ, ರಮ್ಯತೆ, ಭಯಾನಕತೆ ಇವು ಪತ್ತೇದಾರಿ ಕಥೆಗಳ ಮೂಲದ್ರವ್ಯ.

ಪತ್ತೇದಾರಿ ಕಥೆಗಳಲ್ಲಿ ಹೊಸ ರೀತಿಯ ವಸ್ತು ಸಂಚಯ ಗಳು ಬರುತ್ತಿರುವುದು ಗಮನಾರ್ಹ ಸಂಗತಿ. ಇದು ಕನ್ನಡ ಪತ್ತೇದಾರಿ ಕಥಾಸಾಹಿತ್ಯದ ಮಟ್ಟಿಗೆ ಆಶಾದಾಯಕವೆಂದೇ ಹೇಳ ಬಹುದು. ಪತ್ತೇದಾರಿ ಕಥೆಗಳನ್ನು ಬರೆಯುವ ಲೇಖಕರು ಭಾಷೆ, ನಿರೂಪಣಾ ಶೈಲಿ, ತಂತ್ರಗಳ ಕಡೆ ಇನ್ನಷ್ಟು ಗಮನ ಹರಿಸುವುದು ಉಚಿತವೆಂದು ನಮ್ಮ ಅನಿಸಿಕೆ. ಹೀಗಾದಾಗ, ಪತ್ತೇದಾರಿ ಕಥಾಪರಂಪರೆಯ ಭವಿಷ್ಯ, ಉಜ್ವಲಗೊಳ್ಳಬಹುದೆಂಬ ಆಶಯ ನಮ್ಮದಾಗಿದೆ’ ಎಂದು ತೀರ್ಪಗಾರರಾದ ಪೊ›. ಮಲ್ಲೇಪುರಂ ಜಿ. ವೆಂಕಟೇಶ ಮತ್ತು ಡಾ. ಮಾನಸಾ ಕೀಳಂಬಿ ಅಭಿಪ್ರಾಯಪಟ್ಟಿದ್ದಾರೆ. ಬಹುಮಾನಿತ ಮತ್ತು ಮೆಚ್ಚುಗೆ ಪಡೆದ ಕಥೆಗಳು ‘ವಿಜಯವಾಣಿ’ ದೀಪಾವಳಿ ವಿಶೇಷಾಂಕದಲ್ಲಿ ಮತ್ತು Vijayavani.net ವೆಬ್​ಸೈಟ್​ನಲ್ಲಿ ಪ್ರಕಟವಾಗಲಿವೆ.

ಕನ್ನಡ ಓದುಗನ ಅಂಬೆಗಾಲು ಶುರುವಾಗುತ್ತಿದ್ದುದೇ ಪತ್ತೇದಾರಿ ಕಾದಂಬರಿಗಳ ಮೂಲಕ. ಎನ್. ನರಸಿಂಹಯ್ಯ ಅವರ ಕಾದಂಬರಿಗಳು ಕನ್ನಡ ಪುಸ್ತಕಪ್ರಿಯನ ಅಆಇಈ! ನಂತರವೇ ಅನಕೃ, ತರಾಸು. ಮುಂದಿನ ಮೆಟ್ಟಿಲು ಕಾರಂತ, ದೇವುಡು, ಅಯ್ಯರ್, ಭೈರಪ್ಪ, ಅನಂತಮೂರ್ತಿ... ಇಂಥ ಓದುಹಾದಿಯ ಪರಂಪರೆ ಹಿಂದಿನ ಕೆಲ ದಶಕಗಳವರೆಗೂ ನಮ್ಮಲ್ಲಿ ಬೆಳೆದುನಿಂತಿದ್ದು. ಅನುಪಮಾ ನಿರಂಜನರ ದಿನಕ್ಕೊಂದು ಕತೆಯ ಬಾಲ್ಯದ ನಂತರದ ಈ ಪತ್ತೇದಾರಿ ಓದಿನ ಕೊಂಡಿ ಕಳಚಿದ ಆ ಮಿಸ್ಸಿಂಗ್ ಲಿಂಕಿನ ನೆನಪು ಕಾಡಿದ್ದು ವಿಜಯವಾಣಿಗೂ, ಸಾಹಿತ್ಯ ಪ್ರಕಾಶನಕ್ಕೂ! ಪತ್ತೆ ಮಾಡೋಣ ಈ ಜಮಾನಾದ ಪತ್ತೇದಾರಿ ಐಡಿಯಾಗಳನ್ನು ಎಂಬ ಹುಕಿ ಬಂದುದೇ ಈ ಕಥಾಸ್ಪರ್ಧೆಗೆ ಕಾರಣ! ಪೋಷಣೆ ಸಿಕ್ಕರೆ ಮತ್ತೆ ಪತ್ತೇದಾರಿಯ ಹುಲುಸಾದ, ಸತ್ವಯುತ ಬೆಳೆ ಬೆಳೆದೀತೆಂಬ ಆಸೆ ಹುಟ್ಟಿಸಿದ ಸ್ಪರ್ಧೆ ಇದು!
ಎಂ.ಎ. ಸುಬ್ರಹ್ಮಣ್ಯ ಮುಖ್ಯಸ್ಥರು, ಸಾಹಿತ್ಯ ಪ್ರಕಾಶನ (ಬಹುಮಾನಗಳ ಪ್ರಾಯೋಜಕರು)