ಸ್ವಿಗ್ಗಿಯ ಕಮಿಷನ್, ವಿವಿಧ ಕಡಿತಗಳ ವಿರುದ್ಧ ರೆಸ್ಟೋರೆಂಟ್ ಮಾಲೀಕರ ಆಕ್ಷೇಪ: ಸ್ಪಂದನೆ ದೊರೆಯದಿದ್ರೆ ವ್ಯವಹಾರ ಬಂದ್!​ Swiggy 
ರಾಜ್ಯ

ಸ್ವಿಗ್ಗಿಯ ಕಮಿಷನ್, ವಿವಿಧ ಕಡಿತಗಳ ವಿರುದ್ಧ ರೆಸ್ಟೋರೆಂಟ್ ಮಾಲೀಕರ ಆಕ್ಷೇಪ: ಸ್ಪಂದನೆ ದೊರೆಯದಿದ್ರೆ ವ್ಯವಹಾರ ಬಂದ್!​ Swiggy

ಪ್ರಮುಖ ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ ಸ್ವಿಗ್ಗಿ ಕಮಿಷನ್ ಹಾಗೂ ಕಡಿತಗಳಿಂದ ಕುಸಿಯುತ್ತಿರುವ ರೆಸ್ಟೋರೆಂಟ್‌ಗಳ ಲಾಭ
  • ಹೆಚ್ಚಿನ ಕಮಿಷನ್ ಮತ್ತು ಡಿಸ್ಕೌಂಟ್ ನೀತಿಯ ವಿರುದ್ಧ ಬೆಂಗಳೂರು ರೆಸ್ಟೋರೆಂಟ್ ಮಾಲೀಕರ ಆಕ್ರೋಶ
  • ಆಹಾರ ಸಿದ್ಧವಾದ ಬಳಿಕ ಆರ್ಡರ್ ರದ್ದಾದರೆ ಸಂಪೂರ್ಣ ನಷ್ಟವನ್ನು ಹೊರಿಸದಂತೆ ಆಗ್ರಹ
  • ಸ್ವಿಗ್ಗಿಯಿಂದ ಸೂಕ್ತ ಸ್ಪಂದನೆ ಸಿಗದಿದ್ದರೆ ಆಗಸ್ಟ್ 15ರ ನಂತರ ವ್ಯವಹಾರ ಸಂಪೂರ್ಣ ಬಂದ್ ಎಚ್ಚರಿಕೆ
ಬೆಂಗಳೂರು: ಆನ್‌ಲೈನ್ ಆಹಾರ ವಿತರಣಾ ಸಂಸ್ಥೆ ಸ್ವಿಗ್ಗಿ ( Swiggy ) ವಿಧಿಸುತ್ತಿರುವ ಕಮಿಷನ್, ಡಿಸ್ಕೌಂಟ್, ಜಾಹೀರಾತು ವೆಚ್ಚ ಹಾಗೂ ಇತರ ವಿವಿಧ ಕಡಿತಗಳಿಂದ ರೆಸ್ಟೋರೆಂಟ್‌ಗಳ ಲಾಭದ ಪ್ರಮಾಣ ತೀವ್ರವಾಗಿ ಕುಸಿಯುತ್ತಿದೆ ಎಂದು ಬೆಂಗಳೂರಿನ ರೆಸ್ಟೋರೆಂಟ್ ಮಾಲೀಕರು ಆರೋಪಿಸಿದ್ದಾರೆ.
ರೆಸ್ಟೋರೆಂಟ್‌ಗಳು ಆಹಾರ ತಯಾರಿಕೆಗೆ ಬೇಕಾಗುವ ಕಚ್ಚಾ ಸಾಮಗ್ರಿ, ಸಿಬ್ಬಂದಿ ವೇತನ, ಕಟ್ಟಡ ಬಾಡಿಗೆ, ವಿದ್ಯುತ್, ಗ್ಯಾಸ್, ಪರವಾನಗಿ, ಪ್ಯಾಕಿಂಗ್ ಮತ್ತು ನಿರ್ವಹಣಾ ವೆಚ್ಚಗಳನ್ನು ಭರಿಸುತ್ತಿವೆ. ಇದರ ಜೊತೆಗೆ ಆನ್‌ಲೈನ್ ಆರ್ಡರ್‌ಗಳ ಮೇಲೆ ಕಮಿಷನ್ ಹಾಗೂ ವಿವಿಧ ಶುಲ್ಕಗಳು ಕಡಿತವಾಗುತ್ತಿರುವುದರಿಂದ ವ್ಯವಹಾರ ನಡೆಸುವುದು ಕಷ್ಟಕರವಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ರೆಸ್ಟೋರೆಂಟ್ ಮಾಲೀಕರು ಪ್ರಸ್ತಾಪಿಸಿರುವ ಪ್ರಮುಖ ಸಮಸ್ಯೆಗಳು

1. ಹೆಚ್ಚಿನ ಕಮಿಷನ್: ಪ್ರತಿ ಆರ್ಡರ್ ಮೇಲಿನ ಮೂಲ ಕಮಿಷನ್ ರೆಸ್ಟೋರೆಂಟ್‌ನ ಆದಾಯದ ಮೇಲೆ ದೊಡ್ಡ ಪರಿಣಾಮ ಬೀರುತ್ತಿದೆ.
2. ಡಿಸ್ಕೌಂಟ್ ವೆಚ್ಚ: ರೆಸ್ಟೋರೆಂಟ್ ಮಾಲೀಕರ ಸ್ಪಷ್ಟ ಅನುಮತಿಯಿಲ್ಲದೆ ಡಿಸ್ಕೌಂಟ್‌ಗಳನ್ನು ಆರಂಭಿಸಬಾರದು. ಡಿಸ್ಕೌಂಟ್ ವೆಚ್ಚವನ್ನು ರೆಸ್ಟೋರೆಂಟ್ ಮೇಲೆ ಬಲವಂತವಾಗಿ ಹೇರಬಾರದು.
3. ಜಾಹೀರಾತು ಶುಲ್ಕ: ಹೆಚ್ಚು ಗ್ರಾಹಕರಿಗೆ ಕಾಣಿಸಿಕೊಳ್ಳಲು ರೆಸ್ಟೋರೆಂಟ್‌ಗಳು ಜಾಹೀರಾತಿಗೆ ಹಣ ಪಾವತಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಜಾಹೀರಾತು ಮಾಡಿದರೂ ನಿರೀಕ್ಷಿತ ಆರ್ಡರ್‌ಗಳು ಸಿಗುತ್ತವೆ ಎಂಬ ಭರವಸೆ ಇರುವುದಿಲ್ಲ. ಹಾಗಾಗಿ ಪ್ರಮೋಷನ್ , ಕ್ಲೀಕ್ಸ್ ಎಂದು ಹೆಚ್ಚುವರಿ ಪಾವತಿ ಕಡಿತ ಮಾಡಬಾರದು.
4. ಪೇಮೆಂಟ್ ಗೇಟ್‌ವೇ ಮತ್ತು ಇತರ ಶುಲ್ಕಗಳು: ಪೇಮೆಂಟ್ ಗೇಟ್‌ವೇ ಶುಲ್ಕ, ದೂರದ ವಿತರಣಾ ಶುಲ್ಕ, ರದ್ದುಪಡಿಸಿದ ಆರ್ಡರ್‌ಗಳ ಕಡಿತ ಹಾಗೂ ಇತರ ವೆಚ್ಚಗಳ ಬಗ್ಗೆ ಸಂಪೂರ್ಣ ಪಾರದರ್ಶಕತೆ ಇರಬೇಕು.
5. ಜಿಎಸ್‌ಟಿ ಮತ್ತು ತೆರಿಗೆ ಕಡಿತಗಳು: ಯಾವ ಶುಲ್ಕದ ಮೇಲೆ ಎಷ್ಟು ಜಿಎಸ್‌ಟಿ ಅಥವಾ ತೆರಿಗೆ ಕಡಿತವಾಗಿದೆ ಎಂಬುದನ್ನು ಪ್ರತಿ ಸೆಟ್ಲ್‌ಮೆಂಟ್ ವರದಿಯಲ್ಲಿ ಸ್ಪಷ್ಟವಾಗಿ ತೋರಿಸಬೇಕು.
6. ರಿಫಂಡ್ ಮತ್ತು ರದ್ದುಪಡಿಸಿದ ಆರ್ಡರ್‌ಗಳು: ರೆಸ್ಟೋರೆಂಟ್ ಆಹಾರವನ್ನು ಸಿದ್ಧಪಡಿಸಿದ ನಂತರ ಗ್ರಾಹಕರು ಅಥವಾ ವಿತರಣಾ ಪಾಲುದಾರರಿಂದ ಆರ್ಡರ್ ರದ್ದಾದರೆ, ಅದರ ಸಂಪೂರ್ಣ ನಷ್ಟವನ್ನು ರೆಸ್ಟೋರೆಂಟ್ ಮೇಲೆ ಹಾಕಬಾರದು.
7. ಗ್ರಾಹಕರ ದೂರುಗಳ ಪರಿಶೀಲನೆ: ಗ್ರಾಹಕರು ದೂರು ನೀಡಿದ ತಕ್ಷಣವೇ ರೆಸ್ಟೋರೆಂಟ್‌ನ ಹಣವನ್ನು ಕಡಿತಗೊಳಿಸಬಾರದು. ರೆಸ್ಟೋರೆಂಟ್ ಮಾಲೀಕರ ವಿವರಣೆ ಮತ್ತು ಸಾಕ್ಷ್ಯಗಳನ್ನು ಪರಿಶೀಲಿಸಿದ ನಂತರವೇ ನಿರ್ಧಾರ ಕೈಗೊಳ್ಳಬೇಕು.
8. ಸೆಟ್ಲ್‌ಮೆಂಟ್‌ನಲ್ಲಿ ಪಾರದರ್ಶಕತೆಯ ಕೊರತೆ: ಒಟ್ಟು ಮಾರಾಟ, ಕಮಿಷನ್, ಡಿಸ್ಕೌಂಟ್, ಜಾಹೀರಾತು, ತೆರಿಗೆ, ರಿಫಂಡ್ ಮತ್ತು ಇತರ ಕಡಿತಗಳನ್ನು ಸರಳ ಹಾಗೂ ಅರ್ಥವಾಗುವ ರೀತಿಯಲ್ಲಿ ಪ್ರತ್ಯೇಕವಾಗಿ ತೋರಿಸಬೇಕು.
9. ಪಿಒಸಿ ಮತ್ತು ಬೆಂಬಲದ ಸಮಸ್ಯೆ: ಪ್ರತಿ ರೆಸ್ಟೋರೆಂಟ್‌ಗೆ ಜವಾಬ್ದಾರಿಯುತ ಸಂಪರ್ಕಾಧಿಕಾರಿಯನ್ನು ನೇಮಿಸಬೇಕು. ಸಮಸ್ಯೆ ಪರಿಹಾರವಾಗದಿದ್ದರೆ ಸಂಪರ್ಕಿಸಬೇಕಾದ ಮೇಲಧಿಕಾರಿಗಳ ವಿವರಗಳಿರುವ ಎಸ್ಕಲೇಷನ್ ಮ್ಯಾಟ್ರಿಕ್ಸ್ ನೀಡಬೇಕು.
10. ಏಕಪಕ್ಷೀಯ ಒಪ್ಪಂದದ ನಿಯಮಗಳು: ಸ್ವಿಗ್ಗಿ ಮತ್ತು ರೆಸ್ಟೋರೆಂಟ್ ನಡುವಿನ ಒಪ್ಪಂದವು ಎರಡೂ ಪಕ್ಷಗಳ ಹಿತಾಸಕ್ತಿಗಳನ್ನು ಸಮಾನವಾಗಿ ರಕ್ಷಿಸುವಂತಿರಬೇಕು. ಹೊಸ ನಿಯಮಗಳನ್ನು ಜಾರಿಗೊಳಿಸುವ ಮೊದಲು ರೆಸ್ಟೋರೆಂಟ್ ಮಾಲೀಕರಿಗೆ ಮಾಹಿತಿ ಹಾಗೂ ಪರಿಶೀಲನೆಗೆ ಸಮಯ ನೀಡಬೇಕು.

10,000 ರೂ. ಮಾರಾಟವಾದರೂ ಕೈಗೆ ಬರುವ ಮೊತ್ತ ಎಷ್ಟು?

ರೆಸ್ಟೋರೆಂಟ್ ಮಾಲೀಕರು ನೀಡಿರುವ ಕೆಲವು ಸೆಟ್ಲ್‌ಮೆಂಟ್ ಉದಾಹರಣೆಗಳ ಪ್ರಕಾರ, ರೂ. 10,000 ಮೌಲ್ಯದ ಮಾರಾಟದಿಂದ ಕಮಿಷನ್, ಡಿಸ್ಕೌಂಟ್, ಜಾಹೀರಾತು, ತೆರಿಗೆ ಮತ್ತು ಇತರ ಶುಲ್ಕಗಳು ಕಡಿತವಾದ ನಂತರ ರೆಸ್ಟೋರೆಂಟ್‌ಗೆ ಸಿಗುವ ಮೊತ್ತ ಗಣನೀಯವಾಗಿ ಕಡಿಮೆಯಾಗುತ್ತಿದೆ. ಕೆಲವು ಸಂದರ್ಭಗಳಲ್ಲಿ ಒಟ್ಟು ಕಡಿತವು ಮಾರಾಟದ ದೊಡ್ಡ ಭಾಗವನ್ನು ತಲುಪುತ್ತಿದೆ ಎಂದು ಮಾಲೀಕರು ಆರೋಪಿಸಿದ್ದಾರೆ. ಆದರೆ ಈ ಪ್ರಮಾಣವು ಪ್ರತಿ ರೆಸ್ಟೋರೆಂಟ್‌ನ ಒಪ್ಪಂದ, ಕಮಿಷನ್ ದರ, ಡಿಸ್ಕೌಂಟ್ ಯೋಜನೆ ಮತ್ತು ಜಾಹೀರಾತು ವೆಚ್ಚದ ಆಧಾರದ ಮೇಲೆ ಬದಲಾಗುತ್ತದೆ. ಆದ್ದರಿಂದ ಪ್ರತಿಯೊಂದು ಕಡಿತಕ್ಕೂ ದಾಖಲೆ ಆಧಾರಿತ ಸ್ಪಷ್ಟ ವಿವರಣೆ ನೀಡಬೇಕೆಂದು ಮಾಲೀಕರು ಆಗ್ರಹಿಸಿದ್ದಾರೆ.

ರೆಸ್ಟೋರೆಂಟ್ ಮಾಲೀಕರ ಹೇಳಿಕೆ

“ನಾವು ಹಗಲು–ರಾತ್ರಿ ಹಾಗೂ ವಾರಾಂತ್ಯ ಎನ್ನದೆ ದುಡಿದು ಆಹಾರ ಸಿದ್ಧಪಡಿಸುತ್ತೇವೆ. ಕಚ್ಚಾ ಸಾಮಗ್ರಿಯಿಂದ ಸಿಬ್ಬಂದಿ ವೇತನದವರೆಗೆ ಎಲ್ಲ ವೆಚ್ಚವನ್ನೂ ನಾವು ಭರಿಸುತ್ತೇವೆ. ಆದರೆ ಕಮಿಷನ್ ಮತ್ತು ವಿವಿಧ ಕಡಿತಗಳ ನಂತರ ನಮಗೆ ಉಳಿಯುವ ಲಾಭ ಅತ್ಯಂತ ಕಡಿಮೆಯಾಗುತ್ತಿದೆ. ನಮಗೆ ಆನ್‌ಲೈನ್ ವೇದಿಕೆಗಳ ವಿರೋಧವಿಲ್ಲ; ನ್ಯಾಯಯುತ, ಪಾರದರ್ಶಕ ಮತ್ತು ಸಮಾನ ಪಾಲುದಾರಿಕೆ ಬೇಕು.”

ರೆಸ್ಟೋರೆಂಟ್‌ಗಳ ಪ್ರಮುಖ ಬೇಡಿಕೆಗಳು

* ಕಮಿಷನ್ ದರವನ್ನು ನ್ಯಾಯಯುತ ಮಟ್ಟಕ್ಕೆ ಇಳಿಸಬೇಕು.
* ಮಾಲೀಕರ ಅನುಮತಿಯಿಲ್ಲದೆ ಡಿಸ್ಕೌಂಟ್ ಅಥವಾ ಜಾಹೀರಾತು ಆರಂಭಿಸಬಾರದು.
* ಎಲ್ಲಾ ಕಡಿತಗಳನ್ನು ಪ್ರತ್ಯೇಕವಾಗಿ ಮತ್ತು ಸ್ಪಷ್ಟವಾಗಿ ತೋರಿಸಬೇಕು.
* ಆಹಾರ ಸಿದ್ಧವಾದ ನಂತರ ರದ್ದಾಗುವ ಆರ್ಡರ್‌ಗಳ ನಷ್ಟವನ್ನು ರೆಸ್ಟೋರೆಂಟ್ ಮೇಲೆ ಹಾಕಬಾರದು.
* ಗ್ರಾಹಕರ ದೂರುಗಳನ್ನು ಪರಿಶೀಲಿಸದೆ ಹಣ ಕಡಿತಗೊಳಿಸಬಾರದು.
* ಪ್ರತಿ ತಿಂಗಳು ಸಂಪೂರ್ಣ ಸೆಟ್ಲ್‌ಮೆಂಟ್ ವಿವರಣೆ ನೀಡಬೇಕು.
* ರೆಸ್ಟೋರೆಂಟ್‌ಗಳಿಗೆ ಸಮರ್ಪಕ ಪಿಒಸಿ ಒದಗಿಸಬೇಕು.
* ಒಪ್ಪಂದದ ನಿಯಮಗಳನ್ನು ಏಕಪಕ್ಷೀಯವಾಗಿ ಬದಲಾಯಿಸಬಾರದು.
* ಸ್ವಿಗ್ಗಿ ಮತ್ತು ರೆಸ್ಟೋರೆಂಟ್‌ಗಳ ನಡುವೆ ಸಮಾನ ಹಾಗೂ ದೀರ್ಘಕಾಲೀನ ಪಾಲುದಾರಿಕೆಯನ್ನು ನಿರ್ಮಿಸಬೇಕು.
*ಸಮಸ್ಯೆಗಳ ಕುರಿತು ಸ್ವಿಗ್ಗಿ ಆಡಳಿತ ಮಂಡಳಿ ಹೊಟೇಲ್ ಮಾಲೀಕರ ಬಳಿ ಬಂದು ನ್ಯಾಯಯುತ ಪರಿಹಾರ ಕಂಡುಕೊಳ್ಳಬೇಕು. ಸ್ವಿಗ್ಗಿಯವರಿಂದ ಸೂಕ್ತ ಸ್ಪಂದನೆ ದೊರೆಯದಿದ್ದರೆ ಬೆಂಗಳೂರಿನ ರೆಸ್ಟೋರೆಂಟ್ ಗಳನ್ನು ಆಗಸ್ಟ್ 15 ರ ನಂತರ ಸ್ವಿಗ್ಗಿ ವ್ಯವಹಾರದೊಂದಿಗೆ ಸಂಪೂರ್ಣ ಬಂದ್ ಮಾಡಲಾಗುವುದು. ಬೆಂಗಳೂರಿನ ಎಲ್ಲಾ ಹೊಟೇಲ್ ನವರು ಸ್ವಿಗ್ಗಿಯಿಂದ ಶಾಶ್ವತವಾಗಿ ಹೊರಹೋಗುತ್ತೇವೆ"* ಎನ್ನುವ ಸ್ವಷ್ಟ ನಿರ್ಧಾರವನ್ನು ಹೊಂದಲಾಗಿದೆ.