ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದನೆ public issues
- ಶಾಸಕ ಕೊತ್ತೂರು ಜಿ.ಮಂಜುನಾಥ್ ಹೇಳಿಕೆ
- ವಾಹನ ಸವಾರರಿಗೆ ಹೆಲ್ಮೆಟ್ ವಿತರಣೆ
ಮುಳಬಾಗಿಲು: ದಾನ ಧರ್ಮ ಮಾಡುವುದು ಎಲ್ಲರಲ್ಲೂ ಬರುವುದಿಲ್ಲ. ಆದಿನಾರಾಯಣ ಅವರಂತಹ ವ್ಯಕ್ತಿಗಳು ಸಾರ್ವಜನಿಕ ಕ್ಷೇತ್ರದಲ್ಲಿ ಜನಸೇವೆ ಮಾಡಲು ಮತ್ತಷ್ಟು ಜವಾಬ್ದಾರಿ ಮತ್ತು ಅಧಿಕಾರ ನೀಡಿದರೆ ತಾಲೂಕಿನ ಅಭಿವೃದ್ಧಿಯಾಗುವುದರ ಜತೆಗೆ ಜನರ ಸಮಸ್ಯೆಗಳಿಗೆ ಸ್ಪಂದನೆ ಸಿಗಲಿದೆ ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್ ತಿಳಿಸಿದರು. public issues
ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ 75ರ ಬೈಪಾಸ್ ರಸ್ತೆಯ ಸಮೀಪದ ಮೈದಾನದಲ್ಲಿ ಆದಿನಾರಾಯಣ ಚಾರಿಟಬಲ್ ಟ್ರಸ್ಟ್ನಿಂದ ಹಮ್ಮಿಕೊಂಡಿದ್ದ 25 ಸಾವಿರ ದ್ವಿಚಕ್ರ ವಾಹನ ಸವಾರರಿಗೆ ಉಚಿತವಾಗಿ ಹೆಲ್ಮೆಟ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗಳನ್ನು ಜನರಿಗೆ ನೀಡಿದ್ದು, ಮುಳಬಾಗಿಲು ತಾಲೂಕಿನ ಜನತೆಗೆ ಅದರ ಜತೆಗೆ ಇನ್ನೂ ಹೆಚ್ಚುವರಿಯಾಗಿ 5 ಸೇವೆಗಳನ್ನು ಪಕ್ಷಾತಿತವಾಗಿ ಆದಿನಾರಾಯಣ ನೀಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಆವಣಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ. ಆದಿನಾರಾಯಣ ಮಾತನಾಡಿ, ಕಳೆದ ವರ್ಷ ದ್ವಿಚಕ್ರ ವಾಹನ ಅಪಘಾತದಲ್ಲಿ 37 ಮಂದಿ ಮೃತಪಟ್ಟಿದ್ದು, ಇನ್ನು ಹೊರ ತಾಲೂಕುಗಳಲ್ಲಿ ಸಂಭವಿಸಿದ ಅಪಘಾತದಲ್ಲೂ ತಾಲೂಕಿನ ಹಲವರು ಮೃತಪಟ್ಟಿದ್ದಾರೆ. ಎಲ್ಲರೂ ಹೆಲ್ಮೆಟ್ ಧರಿಸದೆ ಪ್ರಯಾಣಿಸಿದ್ದೆ ಇದಕ್ಕೆ ಕಾರಣ. ಇದನ್ನು ಮನಗಂಡು ತಾಲೂಕಿನ ಎಲ್ಲ ದ್ವಿಚಕ್ರ ವಾಹನ ಸವಾರರಿಗೆ ಗುಣಮಟ್ಟದ ಹೆಲ್ಮೆಟ್ಗಳನ್ನು ಉಚಿತವಾಗಿ ನೀಡಲು ಸಂಕಲ್ಪಿಸಲಾಗಿದೆ ಎಂದರು.
ಜೈವಿಕ ಇಂಧನ ಮಂಡಳಿ ರಾಜ್ಯ ಮಾಜಿ ಉಪಾಧ್ಯಕ್ಷ ಜಿ.ರಾಮಲಿಂಗಾರೆಡ್ಡಿ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಮಾನುಲ್ಲ, ಕೆಪಿಸಿಸಿ ಸದಸ್ಯ ಉತ್ತನೂರು ಶ್ರೀನಿವಾಸ್, ಒಬಿಸಿ ಘಟಕದ ರಾಜ್ಯ ಉಪಾಧ್ಯಕ್ಷ ಎನ್. ವೆಂಕಟೇಶಗೌಡ, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಆರ್. ರಾಜೇಂದ್ರ ಗೌಡ, ಸರ್ಕಾರದ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಕೆ. ಎನ್. ಉಮಾಶಂಕರ್ ಇದ್ದರು.
ಗದ್ದಲದಿಂದ ಕೂಡಿದ ಹೆಲ್ಮೆಟ್ ವಿತರಣೆ: ಉಚಿತ ಹೆಲ್ಮೆಟ್ ವಿತರಣೆ ಕಾರ್ಯಕ್ರಮಕ್ಕೆ ಸಾವಿರಾರು ಸವಾರರು ಜನರು ಆಗಮಿಸಿದ ಕಾರಣ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಪೊಲೀಸರು ಜನರನ್ನು ನಿಯಂತ್ರಿಸಲು ಹರಸಾಹಸ ಪಟ್ಟರು.
20 ಕೌಂಟರ್ ಮೂಲಕ ಹೆಲ್ಮೆಟ್ ವಿತರಣೆ ಮಾಡಲು ವ್ಯವಸ್ಥೆ ಮಾಡಲಾಗಿತ್ತು. ಮಹಿಳೆಯರಿಗೆ ಮತ್ತು ಅಂಗವಿಕಲರಿಗೆ ಪ್ರತ್ಯೇಕ ಸಾಲಿನ ವ್ಯವಸ್ಥೆ ಮಾಡಿದ್ದರಿಂದ ಎರಡು ಲೈನ್ಗಳು ಸರಾಗವಾಗಿ ಸಾಗಿತು. ಉಳಿದ ಕಡೆ ಹೆಚ್ಚು ದಟ್ಟಣೆ ಇದ್ದ ಕಾರಣ ಕೆಲ ಕಾಲ ಗೊಂದಲ ಉಂಟಾಯಿತು. ಕೊನೇ ಹಂತದಲ್ಲಿ ಹೆಲ್ಮೆಟ್ ಖಾಲಿಯಾಗುತ್ತಿದ್ದಂತೆ ಕೆಲವರು ಲಾರಿಗಳಿಗೆ ಹತ್ತಿ ಹೆಲ್ಮೆಟ್ ತೆಗೆದುಕೊಂಡು ಹೋಗುತ್ತಿದ್ದ ದೃಶ್ಯ ಕಂಡು ಬಂತು. ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಿದರು.