ಯಾದಗಿರಿಯಲ್ಲಿ ಸೋಮವಾರ ಕರೆದಿದ್ದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಡಿಸಿ ಹರ್ಷಲ್ ಬೋಯರ್ ಮಾತನಾಡಿದರು. ಜಿಪಂ ಸಿಇಒ ಲವೀಶ್ ಓರ್ಡಿಯಾ, ಎಸಿ ಶ್ರೀಧರ ಗೋಟೂರ, ಡಿಡಿಪಿಐ ಸಿ.ಎಸ್.ಮುದೋಳ ಇತರರಿದ್ದರು.
- ಜಿಲ್ಲಾಧಿಕಾರಿ ಬೋಯರ್ ಸೂಚನೆ
- ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ
ಯಾದಗಿರಿ: ಬೇಸಿಗೆ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಹರ್ಷಲ್ ಬೋಯರ್ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಕರೆದಿದ್ದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೊಳವೆ ಬಾವಿಗಳ, ಆರ್ಒ ಪ್ಲಾಂಟ್ಗಳ ಸಮರ್ಪಕ ಕಾರ್ಯನಿರ್ವಹಣೆ ಬಗ್ಗೆ ಸೂಕ್ತ ನಿಗಾವಹಿಸಬೇಕು ಎಂದು ತಾಕೀತು ಮಾಡಿದರು.
ದುರಸ್ತಿ ಇರುವ ಆರ್ಓ ಪ್ಲಾಂಟ್ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಅದರಂತೆ ಕುಡಿಯಲು ಯೋಗ್ಯವಿರುವ ನೀರು ಬಳಸುವ ಬಗ್ಗೆ ಸೂಕ್ತ ತಿಳಿವಳಿಕೆ ನೀಡುವಂತೆ ಅವರು ಸೂಚನೆ ನೀಡಿದರು. ಗ್ರಾಮೀಣ ಹಾಗೂ ನಗರ ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ತೀವ್ರ ನಿಗಾ ವಹಿಸಿ. ನಾರಾಯಣಪುರ ಡ್ಯಾಂ, ಗೂಗಲ್ ಬ್ಯಾರೇಜ್ ಸೇರಿ ವಿವಿಧ ಜಲಾಶಯಗಳಲ್ಲಿನ ನೀರಿನ ಸಂಗ್ರಹ ಇಟ್ಟುಕೊಳ್ಳುವ ಜತೆಗೆ ಲಭ್ಯತೆ ಬಗ್ಗೆ ಸಮಗ್ರ ಮಾಹಿತಿ ಒದಗಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಸೂಚಿಸಿದರು.
ನೀರಾವರಿ ಇಲಾಖೆ ಅಧಿಕಾರಿಗಳು, ಕಲಬುರಗಿ ಪ್ರಾದೇಶಿಕ ಆಯುಕ್ತರ ಆದೇಶದನ್ವಯ ಕಾಲುವೆಗಳ ಮೂಲಕ ಅಗತ್ಯ ನೀರು ಬಿಡಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಜಲಧಾರೆ ಯೋಜನೆಯಡಿ ವಿವಿಧ ಶಾಲಾ, ವಸತಿ ನಿಲಯಗಳಿಗೆ ನಳದ ನೀರು ಸರಬರಾಜು ಸಮಸ್ಯೆಗಳಿಗೆ ಸಂಬಂಧಿಸಿದಂತೆ, ಗ್ರಾಮೀಣ ಕುಡಿಯುವ ನೀರು ಸರಬರಾಜು, ವಿವಿಧ ವಸತಿ ನಿಲಯ ಹೊಂದಿರುವ ಇಲಾಖೆಗಳು, ಶಾಲಾ ಶಿಣ ಇಲಾಖೆ ಮತ್ತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಮೇಶ ಕೋಲಾರ, ಸಹಾಯಕ ಆಯುಕ್ತ ಶ್ರೀಧರ್ ಗೋಟೂರ, ಡಿಡಿಪಿಐ ಸಿ.ಎಸ್.ಮುದೋಳ, ಜಿಲ್ಲಾ ಮಟ್ಟದ ಅಧಿಕಾರಿಗಳು ಇತರರಿದ್ದರು.
ಪ್ರಗತಿ ಪರಿಶೀಲನೆ: ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಜಿಲ್ಲೆಯಲ್ಲಿ ಎಲ್ಪಿಜಿ, ಕಮರ್ಶಿಯಲ್ ಗ್ಯಾಸ್ ಸಮರ್ಪಕ ವಿತರಣೆ, ಪಡಿತರ ವಿತರಣೆ, ಅರಣ್ಯ ಮತ್ತು ಅಗ್ನಿಶಾಮಕ ಇಲಾಖೆ, ಪಶು ವೈದ್ಯಕಿಯ ಸೇವಾ ಇಲಾಖೆ, ಸಿರಿ ಕಲ್ಚರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ. ಕೆಬಿಜೆ ಎನ್ಎಲ್ ಸೇರಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು.
ಜಿಲ್ಲೆಯ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ವ್ಯಾಪ್ತಿಯಲ್ಲಿ ರಸಗೊಬ್ಬರಗಳ ಸಮರ್ಪಕ ನಿರ್ವಹಣೆಯಾಗುವಂತೆ ನೋಡಿಕೊಳ್ಳಬೇಕು. ಮಾವಿನ ಹಣ್ಣು ಹಾಗೂ ಪೋಮೋಗೆನೇಟ್, ಮಾರುಕಟ್ಟೆಗಾಗಿ ಈ ಜಿಲ್ಲೆಯ ರೈತರನ್ನು, ವಿಜಯಪುರ, ಬಾಗಲಕೋಟ್ ಇತರೆ ಬೇರೆ ಜಿಲ್ಲೆಗಳ ರೈತ ಸಂಗಳೊಂದಿಗೆ ಸಮನ್ವಯಗೊಳಿಸಿ ರೈತರಿಗೆ ನೆರವಾಗಬೇಕು. ಮತ್ಸ$್ಯ ಸಂಜೀವಿನಿ ಹಾಗೂ ಇತರೆ ಮೀನುಗಾರಿಕೆ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಡಿಸಿ ಸೂಚನೆ ನೀಡಿದರು.
ಸಭೆಯಲ್ಲಿ ಮಾತನಾಡಿದ ಜಿಪಂ ಸಿಇಒ ಲವೀಶ್ ಒರ್ಡಿಯಾ ಅವರು ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರಿನ ಸರಬರಾಜು ಯೋಜನೆಗಳಿಗೆ ನಿರಂತರ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಜೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿ, ಆರ್ಒ ಪ್ಲಾಂಟ್ಗಳ ಸ್ಥಿತಿಗತಿ, ನಿರ್ವಹಣೆ ಕುರಿತು ಮಾಹಿತಿ ನೀಡಿದರು