ಯಾದಗಿರಿ ಶಾಸಿ ಚೌಕ್ನಿಂದ ರೈಲ್ವೆ ನಿಲ್ದಾಣದ ಮುಖ್ಯ ರಸ್ತೆಯನ್ನು ನಗರಸಭೆ ಆಡಳಿತಾಧಿಕಾರಿ ರಾಹುಲ್ ಪಾಂಡ್ವೆ ಬುಧವಾರ ಪರಿಶೀಲಿಸಿದರು. ಪೌರಾಯುಕ್ತ ಉಮೇಶ ಚವ್ಹಾಣ್ ಇತರರಿದ್ದರು.
- ನಗರಸಭೆ ಆಡಳಿತಾಧಿಕಾರಿ ರಾಹುಲ್ ಪಾಂಡ್ವೆ ಸೂಚನೆ
- ಪ್ರಗತಿ ಪರಿಶೀಲನೆ ಸಭೆ
ಯಾದಗಿರಿ: ನಗರಸಭೆ ಎಂದರೆ ಸಾರ್ವಜನಿಕರ ಜೀವಾಳ. ಅವರಿಗೆ ಮೂಲಸೌಲಭ್ಯ ನೀಡುವುದರೊಂದಿಗೆ ವಿಶ್ವಾಸ ಗಳಿಸುವ ಕೆಲಸ ಅಧಿಕಾರಿ ಮತ್ತು ಸಿಬ್ಬಂದಿ ಮಾಡಬೇಕು ಎಂದು ಜಿಲ್ಲಾಧಿಕಾರಿಯೂ ಆಗಿರುವ ನಗರಸಭೆ ಆಡಳಿತಾಧಿಕಾರಿ ರಾಹುಲ್ ಪಾಂಡ್ವೆ ಹೇಳಿದರು.
ನಗರಸಭೆ ಕಚೇರಿಯಲ್ಲಿ ಬುಧವಾರ ಕರೆದಿದ್ದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಅವರು, ನಗರದ ಜನತೆಗೆ ಶುದ್ಧ ಕುಡಿಯುವ ನೀರು ಪೂರೈಕೆ ಜತೆ ಶುಚಿತ್ವಕ್ಕೆ ಮೊದಲ ಆದ್ಯತೆ ನೀಡಬೇಕು. ಬೀಡಾಡಿ ದನಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು. ನಗರದೆಲ್ಲೆಡೆ ಬೀದಿ ದೀಪ ಬೆಳಗುವಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ನಗರದಲ್ಲಿ ವಾಣಿಜ್ಯ ಮತ್ತು ಮನೆಗಳಿಗೆ ಸಂಬಂಧಿಸಿದ ಆಸ್ತಿಯ ಅಂಕಿ-ಸಂಖ್ಯೆ ವಿವರ ನೀಡಬೇಕೆಂದ ಅವರು, ಸಕಾಲಕ್ಕೆ ಸಾರ್ವಜನಿಕರಿಂದ ಬರಬೇಕಾದ ವಿವಿಧ ಮೂಲಗಳ ತೆರಿಗೆ ವಸೂಲಿ ಮಾಡಿ ನಗರಾಭಿವೃದ್ಧಿಗೆ ಉತ್ತಮ ಯೋಜನೆ ರೂಪಿಸಬೇಕೆಂದು ಸಲಹೆ ನೀಡಿದರು.
ನಗರಸಭೆಗೆ ವಾರ್ಷಿಕ ಬರಬೇಕಾದ ತೆರಿಗೆ, ಖರ್ಚು-ವೆಚ್ಚ ಮತ್ತು ಉಳಿತಾಯದ ಬಗ್ಗೆ ಪೌರಾಯುಕ್ತ ಉಮೇಶ ಚವ್ಹಾಣ್ ಅವರಿಂದ ಮಾಹಿತಿ ಪಡೆದ ಪಾಂಡ್ವೆ, ಜನರ ಆಸ್ತಿ ನೋಂದಣಿ, ಇ ಖಾತೆ ಸೇರಿ ಯಾವುದೇ ಕೆಲಸವಿದ್ದರೂ ಸಕಾಲಕ್ಕೆ ಮಾಡಿಕೊಡಬೇಕು. ವಿನಾಕಾರಣ ಸತಾಯಿಸಿದರೆ ಶಿಸ್ತು ಕ್ರಮ ಜರುಗಿಸಬೇಕಾದೀತು ಎಂದು ಎಚ್ಚರಿಸಿದರು.
ನಗರಸಭೆಯ ವಿವಿಧ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿ ಪಾರದರ್ಶಕವಾಗಿ ಕೆಲಸ ಮಾಡಬೇಕು. ಯಾವ ಕಾರಣಕ್ಕೂ ದಲ್ಲಾಳಿಗಳಿಗೆ ಅವಕಾಶ ನೀಡಬೇಡಿ. ಹಾಗೇನಾದರೂ ಕಾಣಿಸಿಕೊಂಡರೆ ಸಂಬಂಧಿತರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ನಗರಸಭೆಯ ಎಲ್ಲ ಆಸ್ತಿ ಡಿಜಿಟಲೀಕರಣವಾಗಿಸಲು ಪೌರಾಯುಕ್ತರು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದ ಅವರು, ಒಟ್ಟಾರೆ ನಗರಸಭೆ ಜನಸ್ನೇಹಿ ಕಚೇರಿ ಆಗಬೇಕು ಎಂದರು.
ಪ್ರಥಮ ಸಲ ನಗರಸಭೆಗೆ ಆಗಮಿಸಿದ್ದ ಪಾಂಡ್ವೆ ಅವರನ್ನು ಪೌರಾಯುಕ್ತ ಉಮೇಶ ಚವ್ಹಾಣ್ ಸ್ವಾಗತಿಸಿದರು.
ಸಭೆ ನಂತರ ಶಾಸಿ ಚೌಕ್ಗೆ ತೆರಳಿದ ಡಿಸಿ ರಾಹುಲ್ ಟಿ.ಪಾಂಡ್ವೆ ಅವರು ರೈಲ್ವೆ ನಿಲ್ದಾಣಕ್ಕೆ ತೆರಳುವ ಮುಖ್ಯ ರಸ್ತೆ ಇಕ್ಕಟಾಗಿದ್ದರಿಂದ ಸುಲಭ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸ್ವತ- ಸಂಚರಿಸಿ ಮಾಡಬೇಕಾದ ಕೆಲಸದ ಬಗ್ಗೆ ಪರಿಶೀಲನೆ ನಡೆಸಿದರು. ಈ ಚೌಕ್ನ ಒಂದು ಮೂಲೆಯಲ್ಲಿ ಸುಮಾರು 250 ಮೀಟರ್ ಉದ್ದದ ರಸ್ತೆ ಅಗಲಿಕರಣ ಕುರಿತು ಪೌರಾಯುಕ್ತರೊಂದಿಗೆ ಚರ್ಚಿಸಿದರು. ರಸ್ತೆಗಳ ನಕಾಶೆ ತರಿಸಿ ಜನದಟ್ಟಣೆ ಕಡಿಮೆ ಮಾಡಲು ಅಗತ್ಯ ಕ್ರಮದ ಬಗ್ಗೆ ಮಾಹಿತಿ ಪಡೆದರು.