ಚಿಟಗುಪ್ಪದಲ್ಲಿ ಸೋಮವಾರ ನಡೆದ ಜಿಪಂ ಸಿಇಒ ಡಾ.ಗಿರೀಶ ಬದೋಲೆ ಅಧ್ಯತೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಾಪಂ ಇಒ ಲಕ್ಷಿ$್ಮ ಬಿರಾದಾರ, ಎಇಇ ಶೇಖರ ರಾಘಾ ಇದ್ದರು. 
ರಾಜ್ಯ

ಕುಡಿವ ನೀರಿನ ಸಮಸ್ಯೆಗೆ ತಕ್ಷಣ ಸ್ಪಂದಿಸಿ

ಬಾಬುರಾವ ಯಡ್ರಾಮಿ

ಪ್ರಮುಖ ಮುಖ್ಯಾಂಶಗಳು

  • ಅಧಿಕಾರಿಗಳಿಗೆ ಜಿಪಂ ಸಿಇಒ ಡಾ.ಗಿರೀಶ ಬದೋಲೆ ತಾಕೀತು
  • ಚಿಟಗುಪ್ಪದಲ್ಲಿ ಪ್ರಗತಿ ಪರಿಶೀಲನಾ ಸಭೆ
ಚಿಟಗುಪ್ಪ: ದಿನಗಳೆದಂತೆ ಹೆಚ್ಚುತ್ತಿರುವ ಬಿಸಿಲಿನ ಪ್ರಖರತೆಯಿಂದಾಗಿ ತೆರೆದ ಮತ್ತು ಕೊಳವೆಬಾವಿಗಳಲ್ಲಿ ನೀರಿನ ಮಟ್ಟ ಕುಸಿಯುತ್ತಿದೆ. ವಿವಿಧ ಗ್ರಾಮ ಮತ್ತು ತಾಂಡಾಗಳಲ್ಲಿ ಕುಡಿವ ನೀರಿನ ಸಮಸ್ಯೆ ಎದುರಾಗದಂತೆ ಎಚ್ಚರ ವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಗಿರೀಶ ಬದೋಲೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು, ದಿನದಿಂದ ದಿನಕ್ಕೆ ಅಧಿಕ ಉಷ್ಣಾಂಶ ದಾಖಲಾಗುತ್ತಿದೆ. ಯಾವ ಗ್ರಾಮ ಮತ್ತು ತಾಂಡಾದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಲಿದೆಯೋ ಅಂಥ ಕಡೆ ಪ್ರಥಮಾದ್ಯತೆ ಮೇರೆಗೆ ಟ್ಯಾಂಕರ್​ ಅಥವಾ ಖಾಸಗಿ ಬೋರ್​ವೆಲ್​ಗಳ ಮೂಲಕ ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದರು.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅನುಮೋದಿತ ಕ್ರಿಯಾಯೋಜನೆಯಡಿ ಕೂಲಿ ಕಾರ್ಮಿಕರಿಗೆ ಹಳೆಯ ಆನ್​ ಗೋವಿಂಗ್​ ಸಮುದಾಯ ಕಾಮಗಾರಿಗಳಲ್ಲಿ ಕೆಲಸ ಕೊಡಬೇಕು. ಕಾಮಗಾರಿ ಸ್ಥಳದಲ್ಲಿ ನೆರಳು ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಎಲ್ಲ ಗ್ರಾಪಂಗಳಲ್ಲಿ ಅಧಿಕ ಮಾನವ ದಿನಗಳ ಸೃಜನೆ ಮಾಡಬೇಕು ಎಂದು ತಾಕೀತು ಮಾಡಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಲಕ್ಷಿ$್ಮ ಬಿರಾದಾರ, ಕುಡಿಯುವ ನೀರು ಇಲಾಖೆ ಎಇಇ ಶೇಖರ ರಾಘಾ ಇತರರಿದ್ದರು.
ವಿವಿಧ ಗ್ರಾಮಗಳಿಗೆ ಭೇಟಿ
ಸಭೆಗೂ ಮುಂಚೆ ಮುತ್ತಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡಿ ತಾಂಡಾಕ್ಕೆ ತೆರಳಿದ ಜಿಪಂ ಸಿಇಒ ಡಾ.ಗಿರೀಶ ಬದೋಲೆ, ಸಾರ್ವಜನಿಕರಿಗೆ ಟ್ಯಾಂಕರ್​ ನೀರು ಸರಬರಾಜು ಮಾಡುತ್ತಿರುವುದನ್ನು ವೀಕ್ಷಿಸಿ ಹೊಸದಾಗಿ ಕೊರೆಸಿದ ಕೊಳವೆಬಾವಿಯನ್ನು ಜನಸೇವೆಗೆ ಸಮರ್ಪಣೆ ಮಾಡಿದರು. ನಂತರ ಮೀನಕೇರಾ ಗ್ರಾಪಂ ವ್ಯಾಪ್ತಿಯ ಬಸಿರಾಪುರಕ್ಕೆ ಭೇಟಿ ನೀಡಿ ಕುಡಿಯುವ ನೀರಿನ ಸಮಸ್ಯೆ ಕುರಿತು ಮಾಹಿತಿ ಪಡೆದು ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಪಿಡಿಒ ಪ್ರವಿಣ ಮಠಪತಿಗೆ ಸೂಚಿಸಿದರು.