ಪುದುನಗರದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮವನ್ನು ಅಧ್ಯಕ್ಷ ಪಾಳ್ಯ ರಾಚಯ್ಯ ಉದ್ಘಾಟಿಸಿದರು. ಉಮೇಶ್, ರೇವತಿ, ರಾಜಮ್ಮ, ಸೋಮಶೇಖರ್ ಇತರರು ಇದ್ದರು.
ಹನೂರು: ಗೃಹಜ್ಯೋತಿ ಯೋಜನೆ ಇದ್ದರೂ ಬಿಲ್ ಬರುತ್ತಿದೆ. ಬಸ್‌ಗಳು ನಿಲ್ಲಿಸುತ್ತಿಲ್ಲ. ಸತ್ತಾರ ಮೇಡಿನಲ್ಲಿ ನ್ಯಾಯಬೆಲೆ ಅಂಗಡಿ ಇಲ್ಲ. ತೋಟದ ಮನೆಗಳಿಗೆ ಸಮರ್ಪಕವಾಗಿ ವಿದ್ಯುತ್ ನೀಡುತ್ತಿಲ್ಲ. ಇದರಿಂದ ತುಂಬ ತೊಂದರೆ ಅನುಭವಿಸುತ್ತಿದ್ದೇವೆ.
ಇದು ತಾಲೂಕಿನ ಕೌದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುದುನಗರ ಗ್ರಾಮದಲ್ಲಿ ಬುಧವಾರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ವತಿಯಿಂದ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಕೇಳಿ ಬಂದ ಪ್ರಮುಖ ಸಮಸ್ಯೆಗಳು.
ಸಭೆಯಲ್ಲಿ ಚಂಗವಾಡಿಯ ರಾಧಾ ಮಾತನಾಡಿ, 30 ವರ್ಷದ ಹಿಂದೆ ಬಡ ಕುಟುಂಬಗಳಿಗೆ ವಿದ್ಯುತ್ ಸೌಕರ್ಯ ನೀಡಲಾಗಿದ್ದ ಭಾಗ್ಯಜ್ಯೋತಿ ಯೋಜನೆಯಡಿ ಸೆಸ್ಕ್ ಇಲಾಖೆಯಿಂದ ಯಾವುದೇ ಬಿಲ್ ಬರುತ್ತಿರಲಿಲ್ಲ. ಆದರೀಗ ಗೃಹಜ್ಯೋತಿ ಯೋಜನೆ ಅನುಷ್ಠಾನಗೊಂಡಿದ್ದರೂ ಈ ಕುಟುಂಬಗಳಿಗೆ ಬಿಲ್ ಬರುತ್ತಿದೆ. ಬಿಲ್ ಪಾವತಿಸದಿದ್ದರೆ ಇಲಾಖೆ ಸಿಬ್ಬಂದಿ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ತಿಳಿಸುತ್ತಿದ್ದಾರೆ. ಇದರಿಂದ ಸಮಸ್ಯೆಯಾಗಿ ಪರಿಣಮಿಸಿದೆ. ಆದ್ದರಿಂದ ಈ ಬಗ್ಗೆ ಗಮನಹರಿಸುವಂತೆ ಮನವಿ ಮಾಡಿದರು.
ಇದಕ್ಕೆ ಸೆಸ್ಕ್ ಎಇಇ ರಂಗಸ್ವಾಮಿ ಪ್ರತಿಕ್ರಿಯಿಸಿ, ಗೃಹಜ್ಯೋತಿ ಕುಟುಂಬಕ್ಕೆ ಈ ಹಿಂದೆ 40 ಯೂನಿಟ್‌ವರೆಗೆ ವಿದ್ಯುತ್ ನೀಡಲಾಗುತ್ತಿತ್ತು. ಇದೀಗ ಗೃಹ ಜ್ಯೋತಿ ಯೋಜನೆಯಡಿ 56 ಯೂನಿಟ್ ನೀಡಲಾಗುತ್ತಿದೆ. ಇದರ ಮೇಲ್ಪಟ್ಟು ವಿದ್ಯುತ್ ಬಳಕೆ ಮಾಡಿದಲ್ಲಿ ಬಿಲ್ ಪಾವತಿಸಬೇಕು. ಈ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಕೌದಳ್ಳಿ, ಮಲ್ಲಯ್ಯನಪುರ ಹಾಗೂ ಈ ಭಾಗದ ಇನ್ನಿತರ ಗ್ರಾಮಗಳಲ್ಲಿ ಬಹುತೇಕ ಸಾರಿಗೆ ಬಸ್‌ಗಳು ನಿಲ್ಲಿಸುತ್ತಿಲ್ಲ. ಇದರಿಂದ ಶಾಲಾ, ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಗಂಟೆಗಟ್ಟಲೆ ಕಾದು ನಿಲ್ಲುವಂತಾಗಿದ್ದು, ಹೆಚ್ಚಿನ ರೀತಿಯಲ್ಲಿ ಸಮಸ್ಯೆ ಅನುಭವಿಸುವಂತಾಗಿದೆ. ಜನರಿಗೂ ತೊಂದರೆಯಾಗಿದೆ. ಆದ್ದರಿಂದ ನಿಲ್ದಾಣಗಳಲ್ಲಿ ಬಸ್‌ಗಳು ನಿಲ್ಲಿಸುವಂತೆ ಕ್ರಮ ವಹಿಸಬೇಕೆಂದು ಸಭೆಯಲ್ಲಿದ್ದ ಸಾರ್ವಜನಿಕರೆಲ್ಲರೂ ಒಕ್ಕೊರಲಿನಿಂದ ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಪಾಳ್ಯ ರಾಚಯ್ಯ , ಬೆಳಗ್ಗೆ 7 ಗಂಟೆಯಿಂದ 10ರವರೆಗೆ ಹಾಗೂ ಸಂಜೆ 4 ರಿಂದ 8 ರವರೆಗೆ ಬಸ್ ನಿಲುಗಡೆಯಾಗುವಂತೆ ಸಾರಿಗೆ ಇಲಾಖೆಯ ಅಧಿಕಾರಿಗೆ ಸೂಚಿಸಿದರು.
ಇನ್ನು ಸತ್ತಾರಮೇಡಿನ ಮಹಿಳೆಯೊಬ್ಬರು ಮಾತನಾಡಿ, ಸತ್ತಾರ ಮೇಡಿನ ಗ್ರಾಮದ ಜನರು ಪಡಿತರವನ್ನು ಪಡೆಯಬೇಕಾದರೆ ಮಲ್ಲಯ್ಯನಪುರಕ್ಕೆ ಆಗಮಿಸಬೇಕಾಗಿದೆ. ಇದರಿಂದ ಜನರಿಗೆ ತುಂಬ ತೊಂದರೆಯಾಗಿದೆ. ಆದ್ದರಿಂದ ಸತ್ತಾರ ಮೇಡಿನಲ್ಲಿ ನ್ಯಾಯಬೆಲೆ ಅಂಗಡಿ ತೆರೆಯುವಂತೆ ಒತ್ತಾಯಿಸಿದರು. ಇದಕ್ಕೆ ಅಗತ್ಯ ಕ್ರಮವಹಿಸುವುದಾಗಿ ಆಹಾರ ಶಿರಸ್ತೇದಾರ್ ವಿಷ್ಣುಕುಮಾರ್ ತಿಳಿಸಿದರು.
ಪ್ರಯೋಜನ ಪಡೆಯಿರಿ: ಸಮಿತಿ ಅಧ್ಯಕ್ಷ ಪಾಳ್ಯ ರಾಚಯ್ಯ ಮಾತನಾಡಿ, ಸರ್ಕಾರ ಜನರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಪಂಚ ಗ್ಯಾರಂಟಿ ಯೋಜನೆಯನ್ನು ಜಾರಿಗೊಳಿಸಿದ್ದು, ಪ್ರತಿ ಫಲಾನುಭವಿಗೂ ಸವಲತ್ತು ದೊರಕಬೇಕು ಎನ್ನುವುದು ಸಮಿತಿಯ ಉದ್ದೇಶ. ಆದ್ದರಿಂದ ಈವರೆಗೂ ಈ ಯೋಜನೆಯಿಂದ ವಂಚಿತರಾಗಿದ್ದರೆ ಅಗತ್ಯ ದಾಖಲೆಗಳನ್ನು ನೀಡಿ ಯೋಜನೆಯ ಪ್ರಯೋಜನ ಪಡೆಯಬೇಕು. ಸಮಸ್ಯೆಗಳಿದ್ದಲ್ಲಿ ಅಧಿಕಾರಿಗಳು ಈ ಬಗ್ಗೆ ಕ್ರಮ ವಹಿಸಿ ಬಗೆಹರಿಸುವುದರ ಮೂಲಕ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಇದರಲ್ಲಿ ಯಾವುದೇ ನಿರ್ಲಕ್ಷೃ ಸಲ್ಲದು ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕೌದಳ್ಳಿಯ ರೇವತಿ, ಕುರಟ್ಟಿ ಹೊಸೂರಿನ ರಾಜಮ್ಮ, ಕಮಲಮ್ಮ, ಗ್ಯಾರಂಟಿ ಯೋಜನೆ ಸಮಿತಿ ಸದಸ್ಯರಾದ ಸೋಮಶೇಖರ್, ಸಿದ್ದಪ್ಪಾಜಿ, ಗೋವಿಂದ, ಮುಷಿರ್ ಅಹಮದ್, ಶೇಖರ್, ಮಹದೇವಯ್ಯ, ಮಹಾದೇವಮ್ಮ ಇತರರು ಇದ್ದರು.