ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (Greater Bengaluru Authority) ಅಡಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ 5 ನಗರ ಪಾಲಿಕೆಗಳ ವ್ಯಾಪ್ತಿಯ ಒಟ್ಟು 369 ವಾರ್ಡ್‌ಗಳ ಕ್ಷೇತ್ರ ಪುನರ್ ವಿಂಗಡಣೆ ಹಾಗೂ ಅಂತಿಮ ಮೀಸಲಾತಿ ಪಟ್ಟಿಯನ್ನು ಸರ್ಕಾರ ಶನಿವಾರ(ಮಾ. 07) ಪ್ರಕಟಿಸಿದೆ.
ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ 2024ರ ಪ್ರಕರಣ 29ರ ಅಡಿಯಲ್ಲಿ ಸರ್ಕಾರಕ್ಕೆ ದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಈ ಅಧಿಸೂಚನೆ ಹೊರಡಿಸಲಾಗಿದೆ. 2011ರ ಜನಗಣತಿಯ ಆಧಾರದ ಮೇಲೆ 5 ನಗರ ಪಾಲಿಕೆಗಳ 369 ವಾರ್ಡ್‌ಗಳ ಕರಡು ಮೀಸಲಾತಿ ಪಟ್ಟಿಯನ್ನು ಜನವರಿ 8 ರಂದು ಪ್ರಕಟಿಸಲಾಗಿತ್ತು.
ಈ ಪಟ್ಟಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಸಲಹೆ ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಜನವರಿ 23ರ ಸಂಜೆ 5.30ರವರೆಗೆ ಕಾಲಾವಕಾಶ ನೀಡಲಾಗಿತ್ತು. ಸಾರ್ವಜನಿಕರಿಂದ ಸ್ವೀಕೃತವಾದ ಆಕ್ಷೇಪಣೆಗಳನ್ನು ಪರಿಶೀಲಿಸಲು ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು.
2026 ಫೆಬ್ರವರಿ 17ರಂದು ನಡೆದ ಸಭೆಯಲ್ಲಿ ಸಮಿತಿಯು ಎಲ್ಲಾ ಆಕ್ಷೇಪಣೆಗಳನ್ನು ಮಾರ್ಗಸೂಚಿಗಳನ್ವಯ ಕೂಲಂಕಷವಾಗಿ ಪರಿಶೀಲಿಸಿದೆ. ಸಮರ್ಥನೀಯವೆಂದು ಕಂಡುಬಂದ ಕೆಲವು ಆಕ್ಷೇಪಣೆಗಳನ್ನು ಪುರಸ್ಕರಿಸಿ, ಮೀಸಲಾತಿ ಪಟ್ಟಿಯಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಲಾಗಿದೆ.
ಅಂತಿಮ ಪಟ್ಟಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಹಾಗೂ ಮಹಿಳೆಯರಿಗೆ (ಶೇ.50) ನಿಯಮಾನುಸಾರ ಮೀಸಲಾತಿಯನ್ನು ಕಲ್ಪಿಸಲಾಗಿದೆ. ಸಾಮಾನ್ಯ ವರ್ಗದ ಸ್ಥಾನಗಳ ಪ್ರಮಾಣವನ್ನು ಸಹ ಮಾರ್ಗಸೂಚಿಯಂತೆ ಕಾಯ್ದುಕೊಳ್ಳಲಾಗಿದ್ದು, ಸಮಿತಿಯ ಶಿಫಾರಸನ್ನು ಸರ್ಕಾರವು ಅಂಗೀಕರಿಸಿ ಅಂತಿಮ ಅಧಿಸೂಚನೆ ಹೊರಡಿಸಿದೆ.
ಈ ಅಧಿಸೂಚನೆ ಬೆನ್ನಲ್ಲೇ ಶೀಘ್ರದಲ್ಲೇ ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಐದು ಪಾಲಿಕೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದೆ.