ಬೆಳಗಾವಿ: ಅಪಘಾತದಿಂದ ರಸ್ತೆ ಮಧ್ಯದಲ್ಲಿ ಬಿದ್ದಿದ್ದ ಕಾರು ತೆರವುಗೊಳಿಸುತ್ತಿದ್ದ ಸಂದರ್ಭದಲ್ಲಿ ಸರಣಿ ಅಪಘಾತ ಸಂಭವಿಸಿ, ಗೂಡ್ಸ್ ವಾಹನವೊಂದು ಅಪಘಾತಕ್ಕೀಡಾಗಿದ್ದ ಕಾರು ಮತ್ತು ಪೊಲೀಸ್ ವಾಹನದ ಮೇಲೆ ಬಿದ್ದ ಘಟನೆ ವಂಟಮುರಿ ಘಾಟ್‌ನಲ್ಲಿ ಬುಧವಾರ ತಡರಾತ್ರಿ ಸಂಭವಿಸಿದೆ.
ಕಾಕತಿ ಠಾಣೆ ಪೊಲೀಸರಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರು ಅಪಘಾತವಾಗಿ ರಸ್ತೆಯಲ್ಲಿ ಬಿದ್ದ ಬಗ್ಗೆ ಕಾಕತಿ ಪೊಲೀಸ್ ಠಾಣೆಗೆ ಮಾಹಿತಿ ಬಂದಿತ್ತು. ತಕ್ಷಣವೇ ಹೊಯ್ಸಳ ವಾಹನದ ಮೂಲಕ ಇಬ್ಬರು ಸಿಬ್ಬಂದಿ ಸ್ಥಳಕ್ಕೆ ತೆರಳಿ, ಹೆದ್ದಾರಿ ಪೆಟ್ರೊಲಿಂಗ್ ತಂಡದ ಸಹಕಾರದಿಂದ ತೆರವು ಕಾರ್ಯ ಆರಂಭಿಸಿದ್ದರು.
ಈ ವೇಳೆ ರಸ್ತೆಯಲ್ಲಿ ನಿಂತಿದ್ದ ಗೂಡ್ಸ್ ವಾಹನಕ್ಕೆ ಹಿಂದಿನಿಂದ ವೇಗವಾಗಿ ಬಂದ ಕಂಟೇನರ್ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಗೂಡ್ಸ್ ವಾಹನ ರಸ್ತೆಯಲ್ಲಿ ಬಿದ್ದಿದ್ದ ಕಾರು ಮತ್ತು ಪಕ್ಕದಲ್ಲಿದ್ದ ಹೊಯ್ಸಳ ವಾಹನದ ಮೇಲೆ ಪಲ್ಟಿಯಾಗಿದೆ. ಅದೃಷ್ಟವಶಾತ ಹೊಯ್ಸಳ ವಾಹನದಲ್ಲಿದ್ದ ಸಿಬ್ಬಂದಿ ಕಾರು ತೆರವುಗೊಳಿಸಲು ಹೊರ ನಿಂತಿದ್ದರಿಂದ ಬಚಾವ್ ಆಗಿದ್ದಾರೆ.