ಕಸಾಪ ಕಾರ್ಯಚಟುವಟಿಕೆಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಕೆ
- * ಚುನಾಯಿತ ಜಿಲ್ಲಾಧ್ಯಕ್ಷರನ್ನು ಕಸಾಪ ಅಧ್ಯಕ್ಷರನ್ನಾಗಿ ನೇಮಿಸುವಂತೆ ಒತ್ತಾಯ
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಕಾರ್ಯಚಟುವಟಿಕೆಗಳಿಗೆ ಮತ್ತು ನಿರ್ವಹಣೆಗೆ ಅನುದಾನ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಕಸಾಪ ಜಿಲ್ಲಾ ಹಾಗೂ ಗಡಿನಾಡ ಘಟಕಗಳ ಅಧ್ಯಕ್ಷರು ಮನವಿ ಮಾಡಿದ್ದಾರೆ.
ಈ ಸಂಬಂಧ ಕಸಾಪ ಆಡಳಿತಾಧಿಕಾರಿ ಕೆ.ಎ. ದಯಾನಂದ ಅವರನ್ನು ಮಂಗಳವಾರ ಭೇಟಿ ಮಾಡಿದ ವಿವಿಧ ಜಿಲ್ಲಾ ಹಾಗೂ ಗಡಿನಾಡ ಘಟಕಗಳ ಅಧ್ಯಕ್ಷರು ಮನವಿ ಪತ್ರ ಸಲ್ಲಿಸಿದ್ದಾರೆ.
ಕಸಾಪ ರಾಜ್ಯ ಘಟಕದ ಅಧ್ಯಕ್ಷ ಮಹೇಶ ಜೋಶಿ ಅವರ ವಿರುದ್ಧ ಆರೋಪ ಹಿನ್ನೆಲೆಯಲ್ಲಿ ತನಿಖೆ ನಡೆಸಿ, ಅವರನ್ನು ಹುದ್ದೆಯಿಂದ ವಜಾಗೊಳಿಸುವ ಜತೆಗೆ ಆಜೀವ ಸದಸ್ಯತ್ವದಿಂದ ಅಮಾನತುಗೊಳಿಸಲಾಗಿದೆ. ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ತೆರವುಗೊಂಡಿರುವ ಕಾರಣ, ಆಡಳಿತಾಧಿಕಾರಿ ನೇಮಕಗೊಂಡಿದ್ದಾರೆ. ಕಸಾಪದ ಜಿಲ್ಲಾ, ತಾಲ್ಲೂಕು ಘಟಕಗಳ ಕಾರ್ಯಚಟುವಟಿಕೆ ನಿರಂತರ ನಡೆಯುತ್ತಿದ್ದು, ಅವುಗಳಿಗೆ ಈವರೆಗೂ ನಿಗದಿತ ಅನುದಾನ ಬಿಡುಗಡೆಯಾಗಿಲ್ಲ ಎಂದು ಹೇಳಿದ್ದಾರೆ.
ಜಿಲ್ಲಾ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಕೆಲವೆಡೆ ನಡೆಸಲಾಗಿದ್ದು, ಅವುಗಳಿಗೆ ಅನುದಾನ ಬಿಡುಗಡೆಯಾಗಿಲ್ಲ. ಆದ್ದರಿಂದ ಈ ಬಗ್ಗೆ ಕ್ರಮವಹಿಸಿ, ಸಮ್ಮೇಳನ ಹಾಗೂ ವಾರ್ಷಿಕ ನಿರ್ವಹಣಾ ವೆಚ್ಚಗಳಿಗೆ ಅನುದಾನ ಬಿಡುಗಡೆ ಮಾಡಬೇಕು. ಪರಿಷತ್ತಿನ ಸಿಬ್ಬಂದಿಗೆ ಬಾಕಿ ಇರುವ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಅಧ್ಯಕ್ಷರ ನೇಮಕ: ಕಸಾಪ ನಿಬಂಧನೆ ಪ್ರಕಾರ ಸುದೀರ್ಘ ಅವಧಿಗೆ ಪರಿಷತ್ತಿನ ಅಧ್ಯಕ್ಷ ಸ್ಥಾನ ತೆರವಾದಲ್ಲಿ, ಆ ಸ್ಥಾನಕ್ಕೆ ಕಾರ್ಯಕಾರಿ ಸಮಿತಿಯ ಚುನಾಯಿತ ಜಿಲ್ಲಾಧ್ಯಕ್ಷರಲ್ಲಿ ಒಬ್ಬರನ್ನು ಅಧ್ಯಕ್ಷರನ್ನಾಗಿ ಮಾಡಲು ಅವಕಾಶವಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು, ಚುನಾಯಿತ ಜಿಲ್ಲಾಧ್ಯಕ್ಷರಲ್ಲಿ ಒಬ್ಬರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಮಹೇಶ ಜೋಶಿ ಅವರು 7 ಕೋಟಿಗೂ ಅಧಿಕ ಆರ್ಥಿಕ ನಷ್ಟವನ್ನು ಪರಿಷತ್ತಿಗೆ ಮಾಡಿದ್ದಾರೆ ಎನ್ನುವುದು ವಿಚಾರಣೆಯಿಂದ ದೃಢಪಟ್ಟಿದೆ. ಆದ್ದರಿಂದ ಪರಿಷತ್ತಿಗೆ ಉಂಟಾಗಿರುವ ಈ ಆರ್ಥಿಕ ನಷ್ಟವನ್ನು ಅವರಿಂದ ವಸೂಲಿ ಮಾಡಿ, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದ್ದಾರೆ.
ಕಸಾಪ ಬೆಂಗಳೂರು ನಗರ ಘಟಕದ ಅಧ್ಯಕ್ಷ ಎಂ.ಪ್ರಕಾಶಮೂರ್ತಿ, ಯಾದಗಿರಿ ಘಟಕದ ಸಿದ್ದಪ್ಪ ಹೊಟ್ಟಿ, ಶಿವಮೊಗ್ಗ ಘಟಕದ ಡಿ.ಮಂಜುನಾಥ್, ಉತ್ತರ ಕನ್ನಡ ಘಟಕದ ಬಿ.ಎನ್.ವಾಸರೆ, ಬಳ್ಳಾರಿ ಘಟಕದ ನಿಷ್ಠಿ ರುದ್ರಪ್ಪ, ಆಂಧ್ರಪ್ರದೇಶ ಘಟಕದ ಅಂಜನ್ ಕುಮಾರ್, ಧಾರವಾಡ ಘಟಕದ ಲಿಂಗರಾಜ ಅಂಗಡಿ, ಬೀದರ್ ಘಟಕದ ಸುರೇಶ್ ಚನ್ನಶೆಟ್ಟಿ, ಕೊಡಗು ಘಟಕದ ಕೇಶವ ಕಾಮತ್, ಚಾಮರಾಜನಗರ ಘಟಕದ ಶೈಲಕುಮಾರ್, ರಾಮನಗರ ಘಟಕದ ಬಿ.ಟಿ ನಾಗೇಶ್, ಬೆಳಗಾವಿ ಮತ್ತು ರಾಯಚೂರು ಜಿಲ್ಲೆಯ ಪ್ರತಿನಿಧಿಗಳಾದ ಎಂ.ವೈ.ಮೆಣಸಿನಕಾಯಿ, ನಾಗಪ್ಪ ಹೊರಪ್ಯಾಟಿ, ರಾವುತ್ತರಾವ್ ಬರೂರ್ ಉಪಸ್ಥಿತರಿದ್ದರು.