ಕರ್ನಾಟಕ ಪರೀಕ್ಷಾ ಪ್ರಾಧಿಕಾರ
- ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿ ವಿ. ರಶ್ಮಿ ಮಹೇಶ್ ಅವರಿಗೆ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಪತ್ರ
- ಮೀಸಲಾತಿ ಕೋರುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮೂಲ ಪ್ರತಿಯೊಂದಿಗೆ ಪರಿಶೀಲನೆಗಾಗಿ ವಿವಿಧ ಕಚೇರಿಗಳಿಗೆ ಅಲೆಯಬೇಕಾಗಿದೆ.
- ಸೇವಾ ಸಿಂಧು ಮೂಲಕ ವಿತರಿಸಿದರೆ, ಪರೀಕ್ಷಾ ಪ್ರಾಧಿಕಾರವು ಎಪಿಐ (ಅಪ್ಲಿಕೇಷನ್ ಪ್ರೊಗ್ರಾಮಿಂಗ್ ಇಂಟರ್‌ೇಸ್) ಸೇವೆಯ ಮೂಲಕ ಪ್ರಮಾಣಪತ್ರಗಳನ್ನು ಆನ್‌ಲೈನ್‌ನಲ್ಲಿ ಪರಿಶೀಲನೆಗೆ ಒಳಪಡಿಸಲಾಗುತ್ತದೆ.
ಬೆಂಗಳೂರು: ಮೀಸಲಾತಿ ಕೋರುವ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕನ್ನಡ ಮಾಧ್ಯಮ ಮತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಮಾಣಪತ್ರವನ್ನು ಸೇವಾಸಿಂಧುವಿನಲ್ಲಿ ಆನ್‌ಲೈನ್ ಮೂಲಕ ವಿತರಿಸಿದರೆ, ವೃತ್ತಿಪರ ಸೀಟುಗಳ ಹಂಚಿಕೆಗೆ ಅನುಕೂಲವಾಗಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ.
1ರಿಂದ 10ನೇ ತರಗತಿವರೆಗೆ ಕನ್ನಡ ಮಾಧ್ಯಮ ಮತ್ತು ಗ್ರಾಮೀಣ ಪ್ರದೇಶದಲ್ಲಿ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳಿಗೆ 2024ರವರೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗಳಲ್ಲಿ ಪರಿಶೀಲನೆ ಮಾಡಲಾಗುತ್ತಿತ್ತು. 2025ರಲ್ಲಿ ಪಿಯು ಕಾಲೇಜುಗಳಲ್ಲಿ ಪರಿಶೀಲನೆ ನಡೆಸಲಾಗಿದೆ. ಇದನ್ನು ಈ ವರ್ಷ ಆನ್‌ಲೈನ್‌ನಲ್ಲಿ ನೀಡಿದರೆ ಸೀಟು ವಿತರಣೆ ನಿಖರತೆ ಪಡೆಯಲಿದೆ ಎಂದು ಕೋರಿದೆ.
ಈ ಸಂಬಂಧ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿ ವಿ. ರಶ್ಮಿ ಮಹೇಶ್ ಅವರಿಗೆ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಪತ್ರ ಬರೆದಿದ್ದಾರೆ.
ಮೀಸಲಾತಿ ಕೋರುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮೂಲ ಪ್ರತಿಯೊಂದಿಗೆ ಪರಿಶೀಲನೆಗಾಗಿ ವಿವಿಧ ಕಚೇರಿಗಳಿಗೆ ಅಲೆಯಬೇಕಾಗಿದೆ. ಕೆಲವು ವಿದ್ಯಾರ್ಥಿಗಳು ವಸತಿ ಕಾಲೇಜುಗಳಲ್ಲಿದ್ದು, ಪರಿಶೀಲನೆಗೆ ಸರಿಯಾದ ಸಮಯಕ್ಕೆ ಹೋಗದೆ ಸೀಟು ಹಂಚಿಕೆ ಹಂತದಲ್ಲಿ ಪ್ರಾಧಿಕಾರಕ್ಕೆ ಬಂದು ಮೀಸಲಾತಿ ಪರಿಗಣಿಸುವಂತೆ ಮನವಿ ಮಾಡಿಕೊಳ್ಳುವುದು ಸಾಮಾನ್ಯವಾಗಿದೆ.
ಈ ಹಿನ್ನೆಲೆಯಲ್ಲಿ ಸೇವಾ ಸಿಂಧು ಮೂಲಕ ವಿತರಿಸಿದರೆ, ಪರೀಕ್ಷಾ ಪ್ರಾಧಿಕಾರವು ಎಪಿಐ (ಅಪ್ಲಿಕೇಷನ್ ಪ್ರೊಗ್ರಾಮಿಂಗ್ ಇಂಟರ್‌ೇಸ್) ಸೇವೆಯ ಮೂಲಕ ಪ್ರಮಾಣಪತ್ರಗಳನ್ನು ಆನ್‌ಲೈನ್‌ನಲ್ಲಿ ಪರಿಶೀಲನೆಗೆ ಒಳಪಡಿಸಲಾಗುತ್ತದೆ. ಅಲ್ಲದೆ, ಒಂದು ಬಾರಿ ಈ ಪ್ರಮಾಣಪತ್ರಗಳನ್ನು ಪಡೆದರೆ ಮತ್ತೆ ಪಡೆಯುವ ಅಗತ್ಯವಿರುವುದಿಲ್ಲ ಎಂಬುದನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ನೇಮಕಾತಿಗೂ ಅನುಕೂಲ:
ಈ ಮೀಸಲಾತಿ ಪ್ರಮಾಣಪತ್ರಗಳು ವಿವಿಧ ಹುದ್ದೆಗಳ ನೇಮಕಾತಿಗೂ ಸಹ ಅಗತ್ಯವಿರುವುದರಿಂದ ಅಲ್ಲಿಯೂ ಆನ್‌ಲೈನ್ ಮೂಲಕವೇ ಪರಿಶೀಲಿಸಲು ಅನುಕೂಲವಾಗಲಿದೆ. ಆದ್ದರಿಂದ ಈ ಪ್ರಮಾಣಪತ್ರಗಳನ್ನು ಸೇವಾಸಿಂಧು ಯೋಜನೆ ಅಡಿಯಲ್ಲಿ ವಿತರಣೆಗೆ ಅಗತ್ಯ ಕ್ರಮ ವಹಿಸಲು ಸಂಬಂಧಿಸಿದವರಿಗೆ ಸೂಕ್ತ ನಿರ್ದೇಶನ ನೀಡುವಂತೆ ಮನವಿ ಮಾಡಿದ್ದಾರೆ.
ಮಾತೃಭಾಷೆ ಪ್ರಮಾಣಪತ್ರವನ್ನೂ ಕೊಡಿ:
ಅದೇ ರೀತಿ ಭಾಷಾ ಅಲ್ಪಸಂಖ್ಯಾತ ಮೀಸಲಾತಿ ಸೀಟುಗಳನ್ನು ಪ್ರಾಧಿಕಾರವು ಹಂಚಿಕೆ ಮಾಡುವ ಕಾರಣದಿಂದ ತೆಲುಗು, ತಮಿಳು, ತುಳು ಹಾಗೂ ಕೊಡವ ಮಾತೃಭಾಷೆ ಪ್ರಮಾಣಪತ್ರವನ್ನು ಸಹ ಸೇವಾಸಿಂಧುವಿನಲ್ಲಿ ವಿತರಿಸಿದ್ದಲ್ಲಿ ಪಾರದರ್ಶಕತೆಯಿಂದ ಸೀಟು ಹಂಚಿಕೆಯನ್ನು ವಿತರಿಸಲು ಕ್ರಮ ವಹಿಸಲಾಗುತ್ತದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.
ಕಂದಾಯ ಇಲಾಖೆಯ ಜಾತಿ ಮತ್ತು ಆದಾಯ ಪ್ರಮಾಣಪತ್ರ, ಕಲ್ಯಾಣ ಕರ್ನಾಟಕ ಪ್ರಮಾಣಪತ್ರ, ಧಾರ್ಮಿಕ ಅಲ್ಪಸಂಖ್ಯಾತ ಪ್ರಮಾಣ ಪತ್ರ, ಎನ್‌ಸಿಎಲ್‌ಸಿ ಪ್ರಮಾಣ ಪತ್ರಗಳನ್ನು ಅವುಗಳ ಆರ್‌ಡಿ ಸಂಖ್ಯೆಯಿಂದಲೇ ಪಡೆದುಕೊಳ್ಳಲಾಗುತ್ತಿದೆ. ಗ್ರಾಮೀಣ ಮತ್ತು ಕನ್ನಡ ಮಾಧ್ಯಮ ಪ್ರಮಾಣಪತ್ರಗಳನ್ನು ಆ್ಲೈನ್‌ನಲ್ಲಿ ನೀಡುತ್ತಿರುವುದರಿಂದ ಪರಿಶೀಲನೆಗೆ ಒಳಪಡಿಸುವುದು ಹಾಗೂ ಮೀಸಲಾತಿಗೆ ಪರಿಗಣಿಸುವುದು ಕಷ್ಟವಾಗುತ್ತಿದೆ. ಸೇವಾಸಿಂಧುವಿನಲ್ಲಿ ದೊರೆತರೆ ಅನುಕೂಲ.