Report the unpleasant incident to the police.
ಪಾವಗಡ: ಆಟೋ ಚಾಲಕರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವುದರ ಜತೆಗೆ ರಾತ್ರಿ ಆಟೋ ಚಾಲನೆ ಮಾಡುವವರು ಅನುಮಾನಾಸ್ಪದ ವ್ಯಕ್ತಿ ಅಥವಾ ಅಹಿತಕರ ಘಟನೆ ಸಂಭವಿಸಿದ್ದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ನಗರ ವೃತ್ತನಿರೀಕ್ಷಕ ಕೆ.ಸುರೇಶ್ ತಿಳಿಸಿದರು.
ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಆಟೊ ಚಾಲಕರ ಕುಂದು&ಕೊರತೆಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಟೋ ಚಾಲಕರು ಕಡ್ಡಾಯವಾಗಿ ಸಮವಸ್ತ್ರ ಧರಿಸತಕ್ಕದ್ದು. ವಾಹನ ಚಾಲನಾ ಪರವಾನಗಿ, ಮಾಲಿನ್ಯ ತಪಾಸಣಾ ಪ್ರಮಾಣ ಪತ್ರ ಒಳಗೊಂಡಂತೆ ಎಲ್ಲ ದಾಖಲೆಗಳನ್ನು ತಮ್ಮ ಬಳಿ ಇರಿಸಿಕೊಳ್ಳಬೇಕು. ನಿಗದಿತ ಅವಧಿಯೊಳಗೆ ಅದನ್ನು ನವೀಕರಿಸಿಕೊಳ್ಳಬೇಕು. ಅಲ್ಲದೆ ಸಮವಸ್ತ್ರ ಧರಿಸದೇ, ನಿಗದಿತ ಸೀಟುಗಳಿಗಿಂತ ಹೆಚ್ಚು ಜನರನ್ನು ತುಂಬಿಕೊಂಡು ಕಾನೂನು ಉಲ್ಲಂಘನೆ ಮಾಡಿದಲ್ಲಿ ದಂಢವಿಧಿಸಲಾಗುವುದು ಎಂದು ತಿಳಿಸಿದರು.
ರಾತ್ರಿ ಸಮಯದಲ್ಲಿ ಪ್ರಯಾಣಿಕರಲ್ಲಿ ಹೆಚ್ಚಿನ ಹಣ ವಸೂಲಿ ಮಾಡಬಾರದು. ಬಸ್ ನಿಲ್ದಾಣ, ಪಟ್ಟಣದ ವಾರ್ಡ್ಗಳಲ್ಲಿ ಹಾಗೂ ಇತರ ಸ್ಥಳಗಳಲ್ಲಿ ಆಟೋ ಚಾಲಕರಿಗೆ ಕಂಡು ಬರುವ ಅನುಮಾನಾಸ್ಪದ ವ್ಯಕ್ತಿಗಳು ಅಥವಾ ವಸ್ತುಗಳ ಬಗೆಗೆ ಪೊಲೀಸರಿಗೆ ತಕ್ಷಣ ಮಾಹಿತಿ ನೀಡಬೇಕು. ಪಟ್ಟಣದಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸದಂತೆ ಜಾಗೃತೆ ವಹಿಸಬೇಕು ಎಂದು ಸಲಹೆ ನೀಡಿದರು.