ವಿಜಯಪುರ ಜಿಲ್ಲಾಡಳಿತ ಕಚೇರಿ ಎದುರು ಆಲ್ ಇಂಡಿಯಾ ಸ್ಟೇಟ್ ಪೆನ್ಶನ್ ಫೆಡರೇಶನ್ ನೇತೃತ್ವ ಪ್ರತಿಭಟನೆ ನಡೆಯಿತು. ನಿವೃತ್ತ ನೌಕರರ ಒಕ್ಕೂಟದ ಸಂಚಾಲಕ ಸುರೇಶ ಜೀಬಿ, ಜಿಲ್ಲಾಧ್ಯಕ್ಷ ಚಂದ್ರಶೇಖರ ಲೇಂಡಿ, ಗಿರೀಶ ಕಿರಸೂರ ಇತರರಿದ್ದಾರೆ. 
ರಾಜ್ಯ

ತುಟ್ಟಿ ಭತ್ಯೆ ಕಡಿತ ಕಾಯ್ದೆ ರದ್ದುಗೊಳಿಸಿ

ಪ್ರಮುಖ ಮುಖ್ಯಾಂಶಗಳು

  • ಕೈಗೆ ಕಪ್ಪು ಬಟ್ಟೆ ಕಟ್ಟಿ ಪ್ರತಿಭಟನೆ
  • ಜಿಲ್ಲಾಡಳಿತದ ಮೂಲಕ ಪ್ರಧಾನಿಗೆ ಮನವಿ
ವಿಜಯಪುರ: ತುಟ್ಟಿ ಭತ್ಯೆ ಕಡಿತಗೊಳಿಸುವ ಕಾಯ್ದೆ ರದ್ದುಗೊಳಿಸಲು ಆಗ್ರಹಿಸಿ ಆಲ್ ಇಂಡಿಯಾ ಸ್ಟೇಟ್ ಪೆನ್ಶನ್ ಫೆಡರೇಶನ್ ವತಿಯಿಂದ ಬುಧವಾರ ಪ್ರತಿಭಟನೆ ನಡೆಯಿತು.
ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ನಗರದ ಪ್ರಮುಖ ಮಾರ್ಗಗಳಲ್ಲಿ ಹೋರಾಟ ನಡೆಸಿದ ಫೆಡರೇಶನ್ ಪದಾಧಿಕಾರಿಗಳು ಬಳಿಕ ಜಿಲ್ಲಾಡಳಿತ ಕಚೇರಿ ತಲುಪಿ ಕೆಲ ಕಾಲ ಘೋಷಣೆ ಮೊಳಗಿಸಿದರು. ಬಳಿಕ ಜಿಲ್ಲಾಡಳಿತದ ಮೂಲಕ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಸಲ್ಲಿಸಿದರು.
ನಿವೃತ್ತ ನೌಕರರ ಒಕ್ಕೂಟದ ಸಂಚಾಲಕ ಸುರೇಶ ಜೀಬಿ ಮಾತನಾಡಿ, 2025ರ ಕಾಯ್ದೆಯಿಂದ ತುಟ್ಟಿ ಭತ್ಯೆ ಕಡಿತಗೊಳಿಸುವುದನ್ನು ರದ್ದುಗೊಳಿಸಬೇಕು. ಈ ಕಾಯ್ದೆ ಅನುಷ್ಟಾನಗೊಂಡರೆ ನಿವೃತ್ತ ನೌಕರರಿಗೆ ಆರ್ಥಿಕ ಅಭದ್ರತೆಯುಂಟಾಗುತ್ತದೆ. ಹಿರಿಯ ನಿವೃತ್ತ ನೌಕರರ ಬದಕು ದುಸ್ಥರವಾಗುತ್ತದೆ. 2025 ತುಟ್ಟಿಭತ್ಯೆ ಕಡಿತಗೊಳಿಸುವ ಕಾಯ್ದೆಯನ್ನು ಶೀಘ್ರವೇ ರದ್ದುಗೊಳಿಸಿ ನಿವೃತ್ತ ನೌಕರರಿಗೆ ನ್ಯಾಯ ಒದಗಿಸಬೇಕು ಎಂದರು.
ಈ ಕಾಯ್ದೆ ಎಲ್ಲ ನಾಗರಿಕರಿಗೆ ನ್ಯಾಯ ಮತ್ತು ಸಾಮಾಜಿಕ ಭದ್ರತೆಯನ್ನು ಒದಗಿಸಲು ಶ್ರಮಿಸುವ ಸರ್ಕಾರದ ಘೋಷಿತ ಉದ್ದೇಶಗಳಿಗೆ ವಿರುದ್ಧವಾಗಿದೆ. ಇದು ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಂಗ ತೀರ್ಪುಗಳಿಗೂ ವಿರುದ್ಧವಾಗಿದೆ. ಮಾತ್ರವಲ್ಲ, ಕಲ್ಯಾಣ ರಾಷ್ಟ್ರ ಪರಿಕಲ್ಪನೆಗೂ ಹಾಗೂ ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದರು.
ಯಾವುದೇ ಪೂರ್ವ ಸೂಚನೆ ನೀಡದೆ ಚರ್ಚೆ ಇಲ್ಲದೇ ಹಣಕಾಸು ಮಸೂದೆಯ ಭಾಗವಾಗಿ ಪರಿಚಯಿಸಲಾಯಿತು. 2025 ಮಾ.25ರಂದು ಲೋಕಸಭೆಯು ಅಂಗೀಕರಿಸಿತು. ಈ ಕಾಯ್ದೆಯನ್ನು ಅಕ್ಷರಶಃ ಜಾರಿಗೆ ತಂದರೆ, ಪಿಂಚಣಿದಾರರ ನಿವೃತ್ತಿ ದಿನಾಂಕವು ಪಿಂಚಣಿ ಅರ್ಹತೆಗೆ ಸಂಬಂಧಿಸಿದಂತೆ ವ್ಯತ್ಯಾಸಗಳು ಮತ್ತು ವರ್ಗೀಕರಣಕ್ಕೆ ಆಧಾರವಾಗಿರುತ್ತದೆ. ಇದರಿಂದಾಗಿ ಕೇಂದ್ರ ವೇತನ ಆಯೋಗದ ಕಾರ್ಯಾಚರಣೆಯ ಅವಧಿಗೆ ಮೊದಲು (ಆ ವಿಷಯಕ್ಕೆ, ಯಾವುದೇ ವೇತನ ಆಯೋಗ) ಅಸ್ತಿತ್ವದಲ್ಲಿರುವ ಪಿಂಚಣಿದಾರರು ವೇತನ ಆಯೋಗದ ಶಿಫಾರಸುಗಳ ಪ್ರಯೋಜನಗಳನ್ನು ಕಳೆದುಕೊಳ್ಳುತ್ತಾರೆ. ಈ ಕಠಿಣ ಸಮಯದಲ್ಲಿ ಪಿಂಚಣಿ ವರ್ಧನೆಗೆ ಅರ್ಹರಾಗದೆ ಅಸ್ತಿತ್ವದಲ್ಲಿರುವ ಪಿಂಚಣಿದಾರರು ಭಾರಿ ನಷ್ಟಕ್ಕೆ ಒಳಗಾಗುತ್ತಾರೆ. ಹೀಗಾಗಿ ಕೂಡಲೇ ಈ ಕಾಯ್ದೆ ಕೈ ಬಿಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾಧ್ಯಕ್ಷ ಚಂದ್ರಶೇಖರ ಲೇಂಡಿ, ಗಿರೀಶ ಕಿರಸೂರ, ಆರ್.ಎಸ್. ಮಿಣಸಗಿ, ಬೆಳ್ಳುಂಡಗಿ, ವಿ.ಎಚ್. ಜೋಶಿ, ಚೆನ್ನಾ ರೆಡ್ಡಿ, ಬಿ.ಎಂ. ಬಿರಾದಾರ, ಎಸ್.ಎನ್. ಕೆರೂರ ಇತರರಿದ್ದರು.