ವಡಗೇರಾ ತಾಲೂಕಿನ ಕೋಡಾಲ ಗ್ರಾಮದಲ್ಲಿ ಮುರಿದು ಬಿದ್ದ ವಿದ್ಯುತ್ ಕಂಬವನ್ನು ತೆರವುಗೊಳಿಸಿ ಹೊಸ ಕಂಬ ಹಾಕಿದ ಜೆಸ್ಕಾಂ ಅಧಿಕಾರಿಗಳು.
- ವಿಜಯವಾಣಿ ವರದಿಗೆ ಎಚ್ಚೆತ್ತ ಜೆಸ್ಕಾಂ ಅಧಿಕಾರಿಗಳು
- ನಿಟ್ಟುಸಿರುವ ಬಿಟ್ಟ ಸಾರ್ವಜನಿಕರು
ವಡಗೇರಾ: ಮಳೆ ಮತ್ತು ಗಾಳಿಗೆ ಮುರಿದು ಬಿದ್ದ ವಿದ್ಯುತ್ ಕಂಬವನ್ನು ಕೊನೆಗೂ ಅದನ್ನು ತೆರವುಗೊಳಿಸಿ, ಹೊಸದೊಂದು ಕಂಬವನ್ನು ಜೆಸ್ಕಾಂ ಅಧಿಕಾರಿಗಳು ಅಳವಡಿಸುವ ಮೂಲಕ ಸಾರ್ವಜನಿಕರ ಭಯವನ್ನು ದೂರ ಮಾಡಿದ್ದಾರೆ.
ಈ ಕುರಿತು ವಿಜಯವಾಣಿ ಮಾ.23ರಂದು "ಮುರಿದು ಬಿದ್ದ ವಿದ್ಯುತ್ ಕಂಬ' ಎಂಬ ಶೀರ್ಷಿಕೆಯಡಿ ಸವಿಸ್ತಾರವಾಗಿ ವರದಿ ಮಾಡಿತ್ತು. ಈ ವರದಿಯಿಂದ ಎಚ್ಚತ್ತ ಅಧಿಕಾರಿಗಳು ಮರುದಿನವೇ ಹೊಸದೊಂದು ಕಂಬವನ್ನು ಅಳವಡಿಸುವ ಮೂಲಕ ಸಾರ್ವಜನಿಕರ ಭಯವನ್ನು ದೂರ ಮಾಡಿದ್ದಾರೆ.
ಗ್ರಾಮದ ರಸ್ತೆಯ ಪಕ್ಕದಲ್ಲಿ ಮುರಿದು ಬಿದ್ದಿದ್ದ ಕಂಬದಿಂದ ವಿದ್ಯುತ್ ತಂತಿಗಳು ನೆಲದತ್ತ ಜೋತು ಬಿದ್ದು, ಜನರು ಭಯದಲ್ಲಿ ಸಂಚರಿಸುತ್ತಿದ್ದರು. ಮಕ್ಕಳಿಗೆ, ಪಶುಗಳಿಗೆ ಅಪಾಯ ಹೆಚ್ಚಾಗಿದ್ದು, ಯಾವುದೇ ಕ್ಷಣದಲ್ಲಿ ಅನಾಹುತ ಸಂಭವಿಸಬಹುದಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಸ್ಥಳಿಯರು ಹಲವು ಬಾರಿ ದೂರು ನೀಡಿದರೂ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ವಿಜಯವಾಣಿ ವರದಿ ನಂತರ ಈ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಿದೆ. ಇದರಿಂದ ಸಾರ್ವಜನಿಕರು ಪತ್ರಿಕೆ ಕುರಿತು ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.