ಆನೇಕಲ್​ ತಾಲೂಕಿನ ಸರ್ಜಾಪುರದ ಗ್ರಾಮ ದೇವತೆ ಶ್ರೀ ರೇಣುಕಾ ಯಲ್ಲಮ್ಮ ದೇವಿ ಬ್ರಹ್ಮರಥೋತ್ಸವವು ವಿಜೃಂಭಣೆಯಿಂದ ನೆರವೇರಿತು.  
ರಾಜ್ಯ

ರೇಣುಕಾ ಯಲ್ಲಮ್ಮ ದೇವಿ ಬ್ರಹ್ಮರಥೋತ್ಸವ ಸಂಪನ್ನ / SARJAPUR

ಸರ್ಜಾಪುರ : ಆನೇಕಲ್​ ತಾಲೂಕಿನ ಸರ್ಜಾಪುರದ ಗ್ರಾಮ ದೇವತೆ ಶ್ರೀ ರೇಣುಕಾ ಯಲ್ಲಮ್ಮ ದೇವಿ ಬ್ರಹ್ಮರಥೋತ್ಸವವು ಶನಿವಾರ ವಿಜೃಂಭಣೆಯಿಂದ ನೆರವೇರಿತು.
ಮಧ್ಯಾಹ್ನ 1.-30 ಗಂಟೆ ಸುಮಾರಿಗೆ ಅಲಂಕೃತ ದೇವಿಯನ್ನು ರಥದಲ್ಲಿ ಕುರಿಸಿ, ಸಂಪ್ರದಾದಂತೆ ಪೂಜೆ ಸಲ್ಲಿಸಿದ ನಂತರ ರಾಜಾಪುರ ಸಂಸ್ಥಾನ ಮಠದ ಡಾ. ಶ್ರೀ ಶಿವಚಾರ್ಯ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು. ನಂತರ ಸರ್ಜಾಪುರದ ರಾಜಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಭಕ್ತರು ದವನ ಚುಚ್ಚಿದ ಬಾಳೆಹಣ್ಣನ್ನು ರಥದ ಮೇಲೆ ಎಸೆಯುವ ಮೂಲಕ ಭಕ್ತಿ ಸಮರ್ಪಿಸಿದರು.
ಈ ವೇಳೆ ದೇವಸ್ಥಾನ ಆವರಣ ಸೇರಿ ಎಂ.ಜಿ ರಸ್ತೆಯ ಮುಖ್ಯ ಬೀದಿಗಳಲ್ಲಿ ಅರವಂಟಿಕೆ ಸೇವೆ ನಡೆಸಲಾಯಿತು. ರಥೋತ್ಸವ ಅಂಗವಾಗಿ ಗ್ರಾಮ ದೇವತೆ ಶ್ರೀ ರೇಣುಕಾ ಯಲ್ಲಮ್ಮ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಡೊಳ್ಳುಕುಣಿತ, ವೀರಗಾಸೆ, ಹುಲಿ ಕುಣಿತ, ಚಂಡೆ ಮೇಳ ಸೇರಿ ವಿವಿಧ ಜಾನಪದ ಕಲಾತಂಡಗಳು ಜಾತ್ರೆಯ ಮೆರುಗು ಹೆಚ್ಚಿಸಿದವು.
ಸರ್ಜಾಪುರ ಗ್ರಾಪಂ ಮಾಜಿ ಅಧ್ಯಕ್ಷ ಎಸ್​.ವೈ.ಶಂಭಯ್ಯ ಮಾತನಾಡಿ, ಈ ಬಾರಿಯ ಬ್ರಹ್ಮರಥೋತ್ಸವಕ್ಕೆ ನೂತನ ರಥ ಸಿದ್ಧಪಡಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಇನ್ನೂ ಪೂರ್ಣವಾಗಿಲ್ಲ. ಮುಂಬರುವ ಬ್ರಹ್ಮರಥೋತ್ಸವಕ್ಕೆ ತಾಯಿ ರೇಣುಕಾ ಎಲ್ಲಮ್ಮನನ್ನು ನೂತನ ರಥದಲ್ಲಿ ಕುಳ್ಳರಿಸಿ ಬ್ರಹ್ಮ ರಥೋತ್ಸವ ಆಚರಿಸಲಾಗುವುದು. ಸರ್ಜಾಪುರ ಸೇರಿ ಆನೇಕಲ್​, ಮಾಲೂರು, ಮಹದೇವಪುರ, ಹೊಸಕೋಟೆ ನೆರೆಯ ತಮಿಳುನಾಡಿನ ಹೊಸೂರು, ಕೃಷ್ಣಗಿರಿ ಬಾಗಲೂರು, ಭಾಗದ ಅಪಾರ ಭಕ್ತರಿದ್ದಾರೆ. ವಿಶೇಷವಾಗಿ ಬ್ರಹ್ಮರಥೋತ್ಸವದ ಮರುದಿನ ಸಿಡಿ ಉತ್ಸವವು ನಡೆಯುತ್ತದೆ. ಈ ಸಿಡಿ ಉತ್ಸವಕ್ಕೆ ವಿಶೇಷವಾಗಿ ಸಣ್ಣ ಮಕ್ಕಳು ಮೆರಗು ನೀಡುತ್ತಾರೆ ಎಂದು ಸರ್ಜಾಪುರ ಗ್ರಾಪಂ ಮಾಜಿ ಅಧ್ಯಕ್ಷ ಎಸ್​.ವೈ.ಶಂಭಯ್ಯ ಹೇಳಿದರು.
ವಿಧಾನ ಪರಿಷತ್​ ಮಾಜಿ ಸದಸ್ಯ ಡಾ.ಸಿ.ಆರ್​. ಮನೋಹರ್​, ಮುಖಂಡರಾದ ಎಸ್​.ವೈ ಶಂಭಯ್ಯ, ಎಸ್​.ಎಂ ಶ್ರೀನಿವಾಸ್​, ಎಸ್​.ವಿ ಶ್ರೀನಿವಾಸ್​ ಬುಡಗಪ್ಪ, ಡಾ.ಎಸ್​. ಮಂಜುನಾಥ್​ ಸರ್ಜಾ, ಎಸ್​.ವಿ.ವೆಂಕಟೇಶ್​, ಎ. ಸತೀಶ್​ ಕುಮಾರ್​, ಶ್ರೀ ರೇಣುಕಾ ಎಲ್ಲಮ್ಮ ದೇವಿ ದೇವಾಲಯದ ಟ್ರಸ್ಟ್​ ಅಧ್ಯಕ್ಷ ಶ್ರೀನಿವಾಸ್​, ಖಜಾಂಚಿ ರಮೇಶ್​, ಶಿವಕುಮಾರ್​, ಎಸ್​.ಬಿ.ಕೃಷ್ಣಪ್ಪ, ನಾಗರಾಜ್​ ಶೆಟ್ಟಿ, ಅರವಿಂದ್​ ರೆಡ್ಡಿ, ಎಸ್​.ವೈ. ಅನಿಲ್​ ಕುಮಾರ್​, ವಕೀಲರಾದ ರವಿ ಪ್ರಕಾಶ್​, ಎಸ್​.ಎ.ರಮೇಶ್​, ಜ್ಯೋತಿಷ್​, ಮುನಿಯಲ್ಲಪ್ಪ ಇತರರು ಇದ್ದರು.