Removal of flyover without technical clearance is not permissible. 
ರಾಜ್ಯ

ತಾಂತ್ರಿಕ ಅನುಮತಿ ಇಲ್ಲದೆ ಮೇಲ್ಸೇತುವೆ ತೆರವು ಸಲ್ಲ

ಬಂಗಾರಪೇಟೆ:

ನಗರದ ಬೂದಿಕೋಟೆ ರೈಲ್ವೆ ಮೇಲ್ಸೇತುವೆಯನ್ನು ತಾಂತ್ರಿಕ ಅನುಮತಿ ಪಡೆಯದೆ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಿರುವುದು ಸಮಂಜಸವಲ್ಲ ಎಂದು ಸಂಸದ ಎಸ್​.ಮಲ್ಲೇಶ್​ ಬಾಬು ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ಗತಿಶಕ್ತಿ ಯೋಜನೆಯಡಿ ಸುಮಾರು 25 ಕೋಟಿ ರೂ. ವೆಚ್ಚದಲ್ಲಿ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದರೂ, ತಾಂತ್ರಿಕ ದೋಷಗಳ ಹಿನ್ನೆಲೆಯಲ್ಲಿ ಲೋಕಾರ್ಪಣೆ ಮುಂದೂಡಲಾಗಿತ್ತು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರೈಲ್ವೆ ಇಲಾಖೆ ಹಾಗೂ ಗತಿಶಕ್ತಿ ಯೋಜನೆಯ ಅಧಿಕಾರಿಗಳ ಅಂತಿಮ ತಪಾಸಣೆ ಮತ್ತು ಪೂರ್ವಾನುಮತಿ ಇಲ್ಲದೆ ನಗರಸಭೆ ಅಧಿಕಾರಿಗಳು, ತಹಸೀಲ್ದಾರ್​, ಇತರರು ಸಂಚಾರಕ್ಕೆ ಅವಕಾಶ ಕಲ್ಪಿಸಿರುವುದು ಕಾನೂನು ಬಾಹಿರವಾಗಿದೆ ಎಂದು ಆರೋಪಿಸಿದರು.
ಮೇಲ್ಸೇತುವೆಯಲ್ಲಿ ಜಿ-&2 ಸಿಮೆಂಟ್​ ಅಳವಡಿಕೆ ಜತೆಗೆ ಹತ್ತು ದಿನಗಳ ವಾಟರ್​ ಕ್ಯೂರಿಂಗ್​ ಪೂರ್ಣಗೊಂಡ ಬಳಿಕ ಅಧಿಕಾರಿಗಳ ತಪಾಸಣೆ ನಡೆಸಿ ಸಂಚಾರಕ್ಕೆ ಅನುಮತಿ ನೀಡಬೇಕಿತ್ತು. ಈ ಪ್ರಕ್ರಿಯೆ ಪೂರ್ಣಗೊಳ್ಳುವ ಮುನ್ನ ಬ್ಯಾರಿಕೇಡ್​ ತೆರವುಗೊಳಿಸಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು.
ಯಾರ ಅನುಮತಿ ಮೇರೆಗೆ ಮೇಲ್ಸೇತುವೆ ತೆರೆಯಲಾಯಿತು ಎಂದು ನಗರಸಭೆ ಆಯುಕ್ತರನ್ನು ಸಂಸದ ಪ್ರಶ್ನಿಸಿದರು. ಈ ವೇಳೆ ಸಹಾಯಕ ಇಂಜಿನಿಯರ್​ ರವಿ ತಹಸೀಲ್ದಾರ್​ ಅನುಮತಿ ಪಡೆದಿದ್ದಾಗಿ ಹೇಳಲು ಮುಂದಾದಾಗ, ಆಡಳಿತ ನಡೆಸುವ ಜವಾಬ್ದಾರಿ ಯಾರದು? ಎಂದು ಸಂಸದ ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ರಾಜಕಾರಣದಲ್ಲಿ ಬದಲಾವಣೆಗಳು ನಡೆಯುತ್ತಿದ್ದು, ಪಕ್ಷದ ತತ್ವ-ಸಿದ್ಧಾಂತಗಳನ್ನು ಒಪ್ಪಿಕೊಂಡು ಕಾರ್ಯಕರ್ತರನ್ನು ಗೌರವಿಸುವ ಸಮರ್ಥರಿಗೆ ಬಿಜೆಪಿಯಲ್ಲಿ ಅವಕಾಶವಿದೆ. ಈ ಕುರಿತು ಪಕ್ಷದ ವರಿಷ್ಠರು ಸೂಕ್ತ ಸಮಯದಲ್ಲಿ ತೀಮಾರ್ನ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಕೇಂದ್ರ ಸಚಿವ ವಿ.ಸೋಮಣ್ಣ ಅವರೊಂದಿಗೆ ಚರ್ಚೆ ನಡೆಸಲಾಗಿದ್ದು, ತಾಂತ್ರಿಕ ಸಮಸ್ಯೆಗಳು ನಿವಾರಣೆಯಾದ ತಕ್ಷಣ ಕೆಲವೇ ದಿನಗಳಲ್ಲಿ ಮೇಲ್ಸೇತುವೆ ಲೋಕಾರ್ಪಣೆ ಮಾಡಲಾಗುವುದು ಎಂದು ಸಂಸದ ತಿಳಿಸಿದರು.