ಹೊಳೆನರಸೀಪುರ ಪಟ್ಟಣದ ಸಾರ್ವಜನಿಕ ಸಮುದಾಯ ಭವನದಲ್ಲಿ ನಾಡಪ್ರಭು ಕೆಂಪೇಗೌಡರ 517ನೇ ಜಯಂತ್ಯುತ್ಸವ ನಡೆಯಿತು. ಡಾ.ನಿಶ್ಚಲಾನಂದನಾಥ ಸ್ವಾಮೀಜಿ, ಶಂಭುನಾಥ ಸ್ವಾಮೀಜಿ, ಶ್ರೇಯಸ್ ಎಂ.ಪಟೇಲ್, ಎ.ಮಂಜು, ರೇಣು ಕುಮಾರ್, ಮಂಜೇಗೌಡ, ಪೃಥ್ವಿರಾಜ್, ರಮೇಶ್ ಇತರರಿದ್ದರು.
ಹೊಳೆನರಸೀಪುರ: ಸರ್ವ ಜನಾಂಗದವರು ಒಗ್ಗೂಡಿ ನಡೆಸುವ ಜಯಂತಿಗಳು ಅರ್ಥಪೂರ್ಣ ಕಾರ್ಯಕ್ರಮವಾಗುತ್ತವೆ. ಮಹನೀಯರ ಅಶೋತ್ತರಗಳಿಗೆ ಗೌರವ ಸಮರ್ಪಿಸಿದಂತಾಗುತ್ತದೆ ಎಂದು ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಡಾ. ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದರು.
ತಾಲೂಕಿನ ಕೆಂಪೇಗೌಡ ಜಯಂತಿ ಆಚರಣೆ ಸಮಿತಿ ಹಾಗೂ ತಾಲೂಕು ಆಡಳಿತ ಸಂಯುಕ್ತಶ್ರಯದಲ್ಲಿ ಸೋಮವಾರ ಪಟ್ಟಣದ ಸಾರ್ವಜನಿಕ ಸಮುದಾಯ ಭವನದಲ್ಲಿ ಜರುಗಿದ 517ನೇ ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಮಹನೀಯರ ಶಾಶ್ವತ ಕೆಲಸಗಳನ್ನು ನೆನೆಯಬೇಕು. ತಿಳಿದ ಜ್ಞಾನ, ಭೂಮಿಗೆ ಬಿತ್ತಿದ ಬೀಜ ಎಂದಾದರೂ ಒಮ್ಮೆ ಫಲ ನೀಡುತ್ತದೆ ಎಂಬುದಕ್ಕೆ ಆದರ್ಶ ವ್ಯಕ್ತಿಗಳ ಮೌಲ್ಯಗಳೇ ಸಾಕ್ಷಿ ಎಂದರು.
ಸಂಸದ ಶ್ರೇಯಸ್ ಎಂ. ಪಟೇಲ್ ಮಾತನಾಡಿ, ಕೆಂಪೇಗೌಡರು ಒಂದು ವರ್ಗಕ್ಕೆ ಸೀಮಿತರಲ್ಲ. ಜಾತಿ ರಹಿತವಾಗಿ ಕಲ್ಯಾಣ ಕೆಲಸಗಳನ್ನು ನಡೆಸಿದ್ದಾರೆ. ಇದಕ್ಕೆ ನಿದರ್ಶನ ಈಗಿನ ನಮ್ಮ ರಾಜಧಾನಿ ಬೆಂಗಳೂರು ನಗರ ಎಂದರು. ದೂರಾಲೋಚನೆಯಿಂದ ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣುತ್ತ ಅಭಿವೃದ್ಧಿ ಕಾರ್ಯಗಳನ್ನು ನಡೆಸಿರುವುದು ನಮಗೆಲ್ಲ ದಾರಿದೀಪವಾಗಿವೆ ಎಂದು ನುಡಿದರು. ಆದಿಚುಂಚನಗಿರಿ ಸಂಸ್ಥಾನ ಮಠದ ಹಾಸನ ಶಾಖೆಯ ಶ್ರೀ ಶಂಬುನಾಥ ಸ್ವಾಮೀಜಿ, ಅರಕಲಗೂಡು ಕ್ಷೇತ್ರದ ಶಾಸಕ ಎ.ಮಂಜು ಮಾತನಾಡಿದರು.
ತಾಲೂಕಿನ ಎಲ್ಲ ಸಮುದಾಯದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.95ಕ್ಕಿಂತ ಹೆಚ್ಚು ಅಂಕ ಪಡೆದು ತೇರ್ಗಡೆ ಹೊಂದಿದ 73 ವಿದ್ಯಾರ್ಥಿಗಳು ಹಾಗೂ ಪಿಯುಸಿಯ 12 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು ಹಾಗೂ 55 ಮಂದಿ ಪ್ರಗತಿಪರ ರೈತರು, 15ಮಂದಿ ವಿಶೇಷ ಸನ್ಮಾನಿತರು, ನಾಲ್ಕು ಜನ ನಿವೃತ್ತ ಸೈನಿಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಹೇಮಾವತಿ ವೃತ್ತದಲ್ಲಿರುವ ಧ್ವ್ವಜಸ್ತಂಬದ ಮೇಲೆ ಧ್ವಜಾರೋಹಣ ನೆರವೇರಿಸಿ ವಿವಿಧ ಕಲಾ ತಂಡಗಳ ಸಾರಥ್ಯದಲ್ಲಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ನಾಡಪ್ರಭು ಕೆಂಪೇಗೌಡರ ಭಾವಚಿತ್ರದ ಮೆರವಣಿಗೆ ನಡೆಯಿತು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಲ್ಲೇಗೌಡ, ಒಕ್ಕಲಿಗ ಸಂಘದ ನಿರ್ದೇಶಕ ಬಾಗೂರು ಮಂಜೇಗೌಡ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೃಷ್ಣೇಗೌಡ, ಉದ್ಯಮಿ ಆಲಗೋಡನಹಳ್ಳಿ ಸೋಮಶೇಖರ, ತಹಸಿಲ್ದಾರ್ ವೈ.ಎಂ.ರೇಣು ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗೇಗೌಡ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ. ಲಕ್ಷ್ಮಣ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್. ಪೃಥ್ವಿರಾಜ್ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವೆಂಕಟೇಶ್, ತಾಲೂಕು ಕುರುಬರ ಸಂಘದ ಕಾರ್ಯದರ್ಶಿ ದಾಶರಥಿ, ತಾಲೂಕು ಕಸಾಪ ಅಧ್ಯಕ್ಷ ಪುಟ್ಟೇಗೌಡ , ಒಕ್ಕಲಿಗ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಆರ್.ರಮೇಶ್,ನಿವೃತ್ತ ಶಿಕ್ಷಕ ಜವರೇಗೌಡ ಹಾಗೂ ಆಚರಣೆ ಸಮಿತಿಯ ಪದಾಧಿಕಾರಿಗಳು ಸದಸ್ಯರು ಹಾಗೂ ಎಲ್ಲ ಸಮುದಾಯದ ನೂರಾರು ಸಾರ್ವಜನಿಕರು ಉಪಸ್ಥಿತರಿದ್ದರು.