ಬೆಂಗಳೂರು: ಜಲಸಂಪನ್ಮೂಲ ಇಲಾಖೆ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ನೀರಾವರಿ ನಿಗಮ (ಕೆಎನ್‌ಎನ್‌ಎಲ್) ಹಾಗೂ ಕೃಷ್ಣಾಭಾಗ್ಯ ಜಲ ನಿಗಮದ (ಕೆಬಿಜೆಎನ್‌ಎಲ್) ಪ್ರಾದೇಶಿಕ ಕಚೇರಿಗಳನ್ನು ಬೆಂಗಳೂರಿನಿಂದ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಸ್ಥಳಾಂತರಿಸುವ ಪ್ರಕ್ರಿಯೆಗೆ ಗ್ರಹಣ ಬಡಿದಿದೆ.
ಉತ್ತರ ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಗೆ ಮತ್ತು ಆ ಭಾಗದ ಜನರಿಗೆ ಆಡಳಿತ ಕಾರ್ಯಗಳು ಹತ್ತಿರವಾಗಲು ಕೃಷ್ಣಾಭಾಗ್ಯ ಜಲ ನಿಗಮದ ಕಚೇರಿಯನ್ನು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಆಲಮಟ್ಟಿಗೆ ಹಾಗೂ ಕರ್ನಾಟಕ ನೀರಾವರಿ ನಿಗಮದ ಪ್ರಾದೇಶಿಕ ಕಚೇರಿಯನ್ನು ದಾವಣಗೆರೆಗೆ ಸ್ಥಳಾಂತರಿಸಲು ಜೆಡಿಎಸ್-ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಿಎಂ ಆಗಿದ್ದ ಎಚ್.ಡಿ.ಕುಮಾರಸ್ವಾಮಿ(ಈಗಿನ ಕೇಂದ್ರ ಸಚಿವ), 2019ರ ಜ.10ರಂದು ಆದೇಶ ಹೊರಡಿಸಿದ್ದರು.
ಜತೆಗೆ, ರಾಜ್ಯ ಜವಳಿ ಮೂಲಸೌಲಭ್ಯ ಅಭಿವೃದ್ಧಿ ನಿಗಮ, ಸಕ್ಕರೆ ನಿರ್ದೇಶಕರು ಮತ್ತು ಕಬ್ಬು ಅಭಿವೃದ್ಧಿ ಕೇಂದ್ರ ಕಚೇರಿ ಸೇರಿ ಇತರ 5 ಕಚೇರಿಗಳನ್ನು ಉ.ಕರ್ನಾಟಕಕ್ಕೆ ವರ್ಗಾಯಿಸಲು ಆದೇಶಿಸಲಾಗಿತ್ತು. ಸರ್ಕಾರ ಆದೇಶ ಹೊರಡಿಸಿ 8 ವರ್ಷ ಕಳೆಯುತ್ತಿದ್ದರೂ ಪ್ರಮುಖ ನೀರಾವರಿ ನಿಗಮಗಳು ಇನ್ನೂ ಸ್ಥಳಾಂತರವಾಗಿಲ್ಲ. 2022ರಲ್ಲಿ ಬೊಮ್ಮಾಯಿ ನೇತೃತ್ವದ ಸರ್ಕಾರವೂ ಈ ನೀರಾವರಿ ನಿಗಮಗಳನ್ನು ಸ್ಥಳಾಂತರಕ್ಕೆ ಆದೇಶ ಹೊರಡಿಸಿದ್ದರೂ ಇದುವರೆಗೆ ಕಾರ್ಯಗತವಾಗಿಲ್ಲ. ಆಡಳಿತಾತ್ಮಕ ವಿಳಂಬ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಆ ಭಾಗದ ಪ್ರದೇಶಗಳಲ್ಲಿ ಪರಿಣಾಮಕಾರಿಯಾಗಿ ನೀರಾವರಿ ಸೌಲಭ್ಯ ಸಿಗದಂತಾಗಿದೆ.
ಕೃಷ್ಣಾಭಾಗ್ಯ ಜಲ ನಿಗಮ ಸ್ಥಳಾಂತರ ಪ್ರಕ್ರಿಯೆಯು ನಿಯಮ ಪಾಲನೆಯಾಗುತ್ತಿಲ್ಲ ಎಂದು 2021ರಲ್ಲಿ ಹೈಕೋಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ್ದ ಕೋರ್ಟ್, ನಿಗಮದ ಕಚೇರಿಯನ್ನು ವರ್ಗಾಯಿಸುವಂತೆ ಸೂಚಿಸಿತ್ತು. ಕೋರ್ಟ್ ಮತ್ತು ಸರ್ಕಾರದ ಆದೇಶದ ಮೇರೆಗೆ 2022ರ ಮೇ 12ರಂದು ಅಂದಿನ ಜಲಸಂಪನ್ಮೂಲ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ, ಕೃಷ್ಣಭಾಗ್ಯ ಜಲ ನಿಗಮ ಎಂಡಿಗೆ ಪತ್ರ ಬರೆದು ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಬೇಕಾಗಿರುವುದರಿಂದ ತಕ್ಷಣದಿಂದ ಜಾರಿಗೆ ಬರುವಂತೆ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಕಚೇರಿಗಳು ಮತ್ತು ಸಿಬ್ಬಂದಿ ಸಮೇತ ಆಲಮಟ್ಟಿಗೆ ಸ್ಥಳಾಂತರಿಸಿ, ಸರ್ಕಾರಕ್ಕೆ ಅನುಪಾಲನೆ ವರದಿಯನ್ನು ಸಲ್ಲಿಸುವಂತೆ ಸೂಚಿಸಿದ್ದರು. ಆದರೆ, ಇದುವರೆಗೆ ಅದು ಕಾರ್ಯರೂಪಕ್ಕೆ ಬಂದಿಲ್ಲ. ಕೃಷ್ಣ ಭಾಗ್ಯ ಜಲಾಶಯ ನಿಗಮವನ್ನು ಅಲಮಟ್ಟಿಗೆ ಸ್ಥಳಾಂತರವಾಗಿದೆ ಎಂದು 2024ರಲ್ಲಿ ಹೈಕೋರ್ಟ್‌ಗೆ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ಅಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದಾರೆ.
ಅಲ್ಲದೆ, ಕರ್ನಾಟಕ ನೀರಾವರಿ ನಿಗಮದ ಕೇಂದ್ರ ಕಚೇರಿಯು ಕಾಫಿ ಬೋರ್ಡ್ 4ನೇ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಪ್ರತಿ ತಿಂಗಳು 50 ಲಕ್ಷ ರೂ. ಬಾಡಿಗೆ ಪಾವತಿಸುತ್ತಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೂ ಆರ್ಥಿಕ ಹೊರೆಯಾಗುತ್ತಿದೆ. ಹಾಗಾಗಿ, ಈ ಕಚೇರಿಯನ್ನು ಉತ್ತರ ಕರ್ನಾಟಕಕ್ಕೆ ಸ್ಥಳಾಂತರವಾದರೆ ಸರ್ಕಾರಕ್ಕೂ ಲಕ್ಷಾಂತರ ರೂ. ಉಳಿತಾಯವಾಗಲಿದೆ.
ಕಾಂಗ್ರೆಸ್‌ನಿಂದ ಅತಿ ಹೆಚ್ಚು ಸಂಸದರು ಉತ್ತರ ಕರ್ನಾಟಕದ ಭಾಗದಿಂದ ಆಯ್ಕೆಯಾಗಿದ್ದಾರೆ. 9 ಸದಸ್ಯರ ಪೈಕಿ 7 ಸಂಸದರು ಉತ್ತರ ಕರ್ನಾಟಕ ಭಾಗದಿಂದ ಆಯ್ಕೆಯಾಗಿದ್ದಾರೆ. ಈ ಸಂಸದರು ನಿಗಮ ಕಚೇರಿಗಳ ವರ್ಗಾಯಿಸಲು ಸರ್ಕಾರದ ಮೇಲೆ ಒತ್ತಡ ತರಬೇಕು. ಅಲ್ಲದೆ, ನೂತನ ಸಿಎಂ ಡಿ.ಕೆ.ಶಿವಕುಮಾರ್ ಮತ್ತು ಸಚಿವ ರಾಮಲಿಂಗಾರೆಡ್ಡಿ, ಈ ಬಗ್ಗೆ ಕ್ರಮ ಕೈಗೊಂಡು ನ್ಯಾಯ ದೊರಕಿಸಬೇಕು ಎಂದು ರೈತರು ಮನವಿ ಮಾಡಿದ್ದಾರೆ. ಉ.ಕರ್ನಾಟಕಕ್ಕೆ ವರ್ಗಾವಣೆಯಾಗಿರುವ ಅಧಿಕಾರಿಗಳು, ಬೆಂಗಳೂರಿನಲ್ಲೇ ಠಿಕಾಣಿ ಹೂಡಿದ್ದು, ಈ ಬಗ್ಗೆ ನೂತನ ಸಚಿವರು ಕ್ರಮ ತೆಗೆದುಕೊಳ್ಳಬೇಕಿದೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ,ಉತ್ತರ ಕರ್ನಾಟಕ ಭಾಗದಲ್ಲಿ ಕೃಷ್ಣಾ ಮೇಲ್ದಂಡೆ ಸೇರಿ ಪ್ರಮುಖ ನೀರಾವರಿ ಯೋಜನೆಗಳನ್ನು ಅನುಷ್ಠಾನ ತಂದಿದ್ದರು. ಇದರಿಂದಾಗಿ ಆ ಭಾಗದ ಲಕ್ಷಾಂತರ ರೈತರು ಅನುಕೂಲವಾಗಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಉತ್ತರ ಕರ್ನಾಟಕ ಜಲಾಶಯಗಳು ಬಾಗಿನ ಅರ್ಪಣೆಗೆ ಮಾತ್ರ ಸೀಮಿತವಾಗಿವೆ. 2 ನೀರಾವರಿ ನಿಗಮಗಳನ್ನ ಆ ಭಾಗಕ್ಕೆ ಸ್ಥಳಾಂತರ ಮಾಡುವಂತೆ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದೇನೆ.
| ಯಾಸಿನ್ ಜವಳಿ, ಉತ್ತರ ಕರ್ನಾಟಕ ರೈತರ ಅಭಿವೃದ್ಧಿ ಸಂಘದ ಅಧ್ಯಕ್ಷ.