ಬಸ್ ನಿಲ್ದಾಣಕ್ಕೆ ಮೂಲಸೌಕರ್ಯ ಕಲ್ಪಿಸಬೇಕು, ತಹಸಿಲ್ ಕಚೇರಿ ಸ್ಥಳಾಂತರಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಮಲಾಪುರದ ತಹಸಿಲ್ ಕಚೇರಿ ಎದುರು ಪ್ರತಿಭಟನೆ ನಡೆಸಿ ಗ್ರೇಡ್ 2 ತಹಸೀಲ್ದಾರ್ಗೆ ಮನವಿಪತ್ರ ಸಲ್ಲಿಸಲಾಯಿತು. ಅಮೃತ ಗೌರೆ, ಸಂತೋಷ ರಾಂಪೂರೆ, ಸಂಜುಕುಮಾರ ಕುಂಬಾರ, ರಶೀದ್ ಬಾಬಾ, ಭೀಮಾ ಇತರರಿದ್ದರು.
- ಕಮಲಾಪುರದಲ್ಲಿ ಜನರಿಂದ ಪ್ರತಿಭಟನೆ
- ಗ್ರೇಡ್ 2 ತಹಸೀಲ್ದಾರ್ಗೆ ಮನವಿಪತ್ರ ಸಲ್ಲಿಕೆ
ಕಮಲಾಪುರ: ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣಕ್ಕಾಗಿ ತಹಸಿಲ್ ಕಚೇರಿ ಸ್ಥಳಾಂತರಿಸಿ ಜನರಿಗೆ ಅನುವು ಮಾಡಿಕೊಡಬೇಕು ಎಂದು ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಅಮೃತ ಗೌರೆ ಒತ್ತಾಯಿಸಿದರು.
ಬಸ್ ನಿಲ್ದಾಣ ಎದುರು ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ಬಸ್ ನಿಲ್ದಾಣಕ್ಕಾಗಿ ಹಲವು ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಇದೀಗ ತಹಸಿಲ್ ಕಚೇರಿ ಇರುವ ಸ್ಥಳ ಪ್ರೌಢಶಾಲೆಯ ಆಸ್ತಿಯಾಗಿದ್ದು, ತಾತ್ಕಾಲಿಕವಾಗಿ ತಹಸಿಲ್ ಕಚೇರಿ ನಡೆಸಲು ನೀಡಲಾಗಿತ್ತು. ಇದೀಗ ಜನತೆಗೆ ಬಸ್ ನಿಲ್ದಾಣ ಅಗತ್ಯವಾಗಿದೆ. ಹೀಗಾಗಿ ಕೂಡಲೇ ಸ್ಥಳ ಖಾಲಿ ಮಾಡಬೇಕು. ತಹಸಿಲ್ ಕಚೇರಿಯನ್ನು ಹೊಸದಾಗಿ ನಿರ್ಮಾಣವಾಗಿರುವ ಪಿಡಬ್ಲುಡಿ ಐಬಿಗೆ ಸ್ಥಳಾಂತರ ಮಾಡಬೇಕು. ರ್ನಿಲಕ್ಷ ವಹಿಸಿದರೆ ಸ್ಥಳಿಯರೊಂದಿಗೆ ತಹಸಿಲ್ ಕಚೇರಿಗೆ ಬೀಗ ಹಾಕಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರಾಷ್ಟ್ರೀಯ ಹೆದ್ದಾರಿ ಚಿಕ್ಕದಾಗಿದ್ದು, ಸಂಚಾರ ದಟ್ಟಣೆ ಸಮಸ್ಯೆ ಹೆಚ್ಚಾಗುತ್ತಿದೆ. ಕೂಡಲೇ ರೈಲ್ವೆ ಸ್ಟೇಷನ್ ಹಿಂಭಾಗದಲ್ಲಿ ಬೈಪಾಸ್ ರಸ್ತೆ ನಿರ್ಮಿಸಿ ಕಲಬುರಗಿಯಿಂದ ಬರುವ ವಾಹನಗಳನ್ನು ನವನಿಹಾಳ ರೈಲ್ವೆ ಅಂಡರ್ ಬ್ರಿಡ್ಜ್ ಮೂಲಕ ಚಾರಕಮಾನ್ ರಸ್ತೆಗೆ ಸಂಪರ್ಕ ಕಲ್ಪಿಸಬೇಕು. ಹುಮನಾಬಾದ್ನಿಂದ ಬರುವ ವಾಹನಗಳಿಗೆ ಓಕಳಿ ರೈಲ್ವೆ ಅಂಡರ್ ಬ್ರಿಡ್ಜ್ ಮೂಲಕ ಕಲಬುರಗಿ ಭಾಗಕ್ಕೆ ಸಂಪರ್ಕ ಕಲ್ಪಿಸಬೇಕು. ಬಸ್ ನಿಲ್ದಾಣ ಮುಂಭಾಗದ ರಸ್ತೆಯಲ್ಲಿ ತಾತ್ಕಾಲಿಕ ಡಿವೈಡರ್ ಅಳವಡಿಸಬೇಕು. ಬಸ್ ನಿಲ್ದಾಣದಿಂದ ಬಸವೇಶ್ವರ ಚೌಕ್ವರೆಗಿನ ರಸ್ತೆಯಲ್ಲಿ ವೇಗ ನಿಯಂತ್ರಕಗಳನ್ನು ಅಳವಡಿಸಬೇಕು. ರಸ್ತೆ ಗುಂಡಿಗಳನ್ನು ಮುಚ್ಚಬೇಕು. ಬಸ್ಸು ನಿಲ್ದಾಣದಲ್ಲಿ ಕಸದ ತೊಟ್ಟಿಗಳನ್ನು ಇಡಬೇಕು ಎಂದು ಒತ್ತಾಯಿಸಿದರು.
ಗ್ರೇಡ್&2 ತಹಸೀಲ್ದಾರ್ ಶಿವಕುಮಾರ ಶಾಬಾ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು. ಪ್ರಮುಖರಾದ ಸಂತೋಷಕುಮಾರ ರಾಂಪೂರೆ, ಸಂಜುಕುಮಾರ ಕುಂಬಾರ, ಬಾಚಗುಂಡಿ, ರಶೀದ್ ಬಾಬಾ, ಭೀಮಾ, ರೇವಣಸಿದ್ದಯ್ಯ ಸ್ವಾಮಿ, ಪ್ರಭಾಕರ ಗೌರೆ, ಸಂತೋಷ ಮೂಲಗೆ, ಅಲೋಕುಮಾರ ಗೌರೆ ಇತರರಿದ್ದರು.