ಅಫಜಲಪುರದ ಹೇರೂರ (ಬಿ) ಗ್ರಾಮದಲ್ಲಿ ವಿದ್ಯುತ್ ಸ್ಟೇಷನ್ ಸ್ಥಾಪಿಸಲು ಗುರುತಿಸಲಾದ ಸ್ಥಳವನ್ನು ಕೆಕೆಆರ್ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ್ ಪರಿಶೀಲಿಸಿದರು. ರಾಜೇಶ ಹಿಪ್ಪರಗಿ, ಮುರುಘೇಶ ಮಠಪತಿ, ಶಾಂತಪ್ಪ ಪೂಜಾರಿ ಇತರರಿದ್ದರು.
- ಕೆಕೆಆರ್ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ್ ಹೇಳಿಕೆ
- ಹೇರೂರ(ಬಿ) ಗ್ರಾಮದಲ್ಲಿ ಸ್ಥಳ ಪರಿಶೀಲನೆ
ಅಫಜಲಪುರ: ವಿದ್ಯುತ್ ಸ್ಟೇಷನ್ಗಳ ಸ್ಥಾಪನೆಯಿಂದ ಗ್ರಾಮೀಣ ಭಾಗದಲ್ಲಿ ಉತ್ತಮ ವಿದ್ಯುತ್ ಪೂರೈಕೆ ಜತೆಗೆ ರೈತರಿಗೆ ನಿಗದಿತ ಸಮಯಕ್ಕೆ ವಿದ್ಯುತ್ ದೊರಕಲಿದೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್ಟಿಸಿ) ಅಧ್ಯಕ್ಷ ಅರುಣಕುಮಾರ ಪಾಟೀಲ್ ಹೇಳಿದರು.
ಹೇರೂರ (ಬಿ) ಗ್ರಾಮದಲ್ಲಿ 110ಕೆವಿ ವಿದ್ಯುತ್ ಸ್ಟೇಷನ್ ಸ್ಥಾಪಿಸಲು ಮಂಗಳವಾರ ಸ್ಥಳ ಪರಿಶೀಲಿಸಿದ ಅವರು, ನೂತನ ಸ್ಟೇಷನ್ ಸ್ಥಾಪನೆಯಿಂದ ಹೇರೂರ (ಬಿ), ಜೋಗುರ, ಮೈನಾಳ, ಬೆಳಗುಂಪಾ (ಕೆ) ಸೇರಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಎದುರಾಗುತ್ತಿರುವ ಕಡಿಮೆ ವೋಲ್ಟೇಜ್, ವಿದ್ಯುತ್ ವ್ಯತ್ಯಯ ಹಾಗೂ ದೂರದ ಸ್ಟೇಷನ್ಗಳಿಂದ ವಿದ್ಯುತ್ ಪೂರೈಕೆಯಲ್ಲಿನ ತಾಂತ್ರಿಕ ಸಮಸ್ಯೆ ಕಡಿಮೆಯಾಗಲಿವೆ. ಅಧಿಕಾರಿಗಳು ಕಾಮಗಾರಿ ಸ್ಥಳದಲ್ಲಿ ತಾಂತ್ರಿಕ ಮಾನದಂಡ ಪಾಲಿಸಿ, ತ್ವರಿತ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ಕೆಪಿಟಿಸಿಎಲ್ ಇಇ ರಾಜೇಶ ಹಿಪ್ಪರಗಿ ಮಾತನಾಡಿ, ವಿದ್ಯುತ್ ಸಬ್ ಸ್ಟೇಷನ್ ನಿಮಾರ್ಣಕ್ಕೆ ಸುಮಾರು 5 ಎಕರೆ ಸ್ಥಳ ಗುರುತಿಸಲಾಗಿದೆ ಎಂದು ತಿಳಿಸಿದರು.
ಜೆಸ್ಕಾಂ ಇಇ ಮುರುಘೇಶ ಮಠಪತಿ, ಎಇಇ ಶಾಂತಪ್ಪ ಪೂಜಾರಿ, ತಾಪಂ ಮಾಜಿ ಸದಸ್ಯ ಸೈಯದ್ ಸಾಬ್ ಮುಲ್ಲಾ, ಗ್ರಾಪಂ ಮಾಜಿ ಅಧ್ಯಕ್ಷ ಮೋಹನ ಆರ್ಮನ, ಪ್ರಮುಖರಾದ ಭೀಮರಾಯ ಬಗಲೂರ, ಮಲ್ಲು ಸಾಂಬಾ, ರಾಜು ಕ್ಯಾಸಾ, ಮರೆಪ್ಪ ಪೂಜಾರಿ, ದುಂಡಪ್ಪಗೌಡ ಬಿರಾದಾರ, ಹುಲ್ಲೆಪ್ಪ ಪೂಜಾರಿ ಇತರರಿದ್ದರು.
ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಅಫಜಲಪುರದಲ್ಲಿ 220 ಕೆವಿ ಹಾಗೂ ಬಂಕಲಗಾ, ಶಿವೂರ, ಘೂಳನೂರ, ಅತನೂರ, ನಂದರಗಾದಲ್ಲಿ 110ಕೆವಿ ವಿದ್ಯುತ್ ಕೇಂದ್ರಗಳ ಕಾಮಗಾರಿ ಪ್ರಗತಿಯಲ್ಲಿವೆ. ಅಫಜಲಪುರ, ಚೌಡಾಪುರ ಸ್ಟೇಷನ್ಗಳಲ್ಲಿ ಹೊಸ ವಿದ್ಯುತ್ ಪರಿವರ್ತಕಗಳನ್ನು ಅಳವಡಿಸಲಾಗಿದೆ.
— > ಅರುಣಕುಮಾರ ಪಾಟೀಲ್, ಅಧ್ಯಕ್ಷ, ಕೆಕೆಆರ್ಟಿಸಿ