ಕಲಬುರಗಿ ಬಸವ ಸಮಿತಿ ಅನುಭವ ಮಂಟಪದಲ್ಲಿ ವಿಶ್ವ ಬಸವ ಜಯಂತಿ ಅಂಗವಾಗಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ವಚನ ನೈಜ ಗದ್ಯಾನುವಾದ ಗ್ರಂಥವನ್ನು ಡಾ.ಅರವಿಂದ ಜತ್ತಿ ಬಿಡುಗಡೆ ಮಾಡಿದರು. ಡಾ.ವಿಲಾಸವತಿ ಖೂಬಾ, ಡಾ.ವೀರಣ್ಣ ದಂಡೆ, ಡಾ.ಜಯಶ್ರೀ ದಂಡೆ, ಡಾ.ಶ್ರೀಕಾಂತ ಪಾಟೀಲ್, ಡಾ.ಚಿತ್ಕಳಾ ಹಿರೇಮಠ್ ಇದ್ದರು.
- ಕಲಬುರಗಿ ಬಸವ ಸಮಿತಿ ಅನುಭವ ಮಂಟಪ
ಕಲಬುರಗಿ: ಕಲಬುರ್ಗಿ ಬಸವ ಸಮಿತಿ ಅನುಭಾವ ಮಂಟಪ , ಡಾ.ಬಿ.ಡಿ.ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ ಕೇಂದ್ರದಲ್ಲಿ ವಿಶ್ವ ಬಸವ ಜಯಂತಿ ಅಂಗವಾಗಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಜಗತ್ತಿನ 38 ಭಾಷೆಗಳಿಗೆ ಅನುವಾದ ಗೊಂಡಿರುವ 2500 ವಚನಗಳ ಕನ್ನಡ ಆವೃತ್ತಿಯ ಎರಡು ಸಂಪುಟಗಳ ನೈಜ ಗದ್ಯಾನುವಾದ ಕೃತಿಯನ್ನು ಬೆಂಗಳೂರು ಕೇಂದ್ರ ಬಸವ ಸಮಿತಿ ಅಧ್ಯ ಡಾ.ಅರವಿಂದ ಜತ್ತಿ ಬಿಡುಗಡೆಗೊಳಿಸಿದರು.
ಬೆಂಗಳೂರು ಕೇಂದ್ರ ಬಸವ ಸಮಿತಿಗೆ ಸತತವಾಗಿ 6ನೇ ಅವಧಿಗೆ ಅಧ್ಯರಾಗಿ ಅಧಿಕಾರ ವಹಿಸಿಕೊಂಡ ಡಾ.ಅರವಿಂದ ಜತ್ತಿ ಅವರನ್ನು ಸತ್ಕರಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಜತ್ತಿ, ನಾನು ಅಧಿಕಾರ ಮತ್ತು ಹಣದ ಆಮಿಷ ತೊರೆದು ತಂದೆಯ ಅಪೇೆಯಂತೆ ಬಸವ ತತ್ವದ ಪ್ರಚಾರಕ್ಕಾಗಿ ಜೀವನ ಮುಡುಪಾಗಿಟ್ಟಿದ್ದೇನೆ. ಜಗತ್ತಿನ 38 ಭಾಷೆಗಳಿಗೆ ವಚನಗಳನ್ನು ಅನುವಾದಿಸುವಲ್ಲಿ ಯಶಸ್ವಿಯಾಗಿದ್ದೇವೆ. ಬಸವ ಸಮಿತಿಯು ವಿಶ್ವದಾದ್ಯಂತ ಬಸವ ಅಭಿಮಾನಿ ಸಂಟನೆಗಳನ್ನು ಒಟ್ಟುಗೂಡಿಸಿ ಅಮೆರಿಕ, ಇಂಗ್ಲೆಂಡ್, ಆಸ್ಟ್ರೆಲಿಯಾ, ಫ್ರಾನ್ಸ್ ಸೇರಿದಂತೆ ಒಂದು ಸೂತ್ರದಡಿ ಬಸವ ಜಯಂತಿ ಆಚರಿಸಲಾಗುತ್ತಿದೆ . ಪ್ರತಿಯೊಬ್ಬರೂ ಪ್ರತಿದಿನ ಲಿಂಗಪೂಜೆ ಮಾಡಿಕೊಂಡು ವಚನ ಅಧ್ಯಯನ ಮಾಡಬೇಕು ಎಂದು ಮನವಿ ಮಾಡಿದರು.
ವಚನಗಳ ನೈಜ ಗದ್ಯಾನುವಾದ ಕೃತಿಯ ಪ್ರಧಾನ ಸಂಪಾದಕ ಡಾ.ವೀರಣ್ಣ ದಂಡೆ ಮಾತನಾಡಿ, ನೈಜ ಗದ್ಯ ಅನುವಾದ ಗ್ರಂಥವು ಕಲಬುರಗಿ ಬಸವ ಸಮಿತಿ ಶ್ರಮದ ಫಲವಾಗಿದೆ. ವಚನಕಾರರು ಯಾವ ಭಾವದಲ್ಲಿ ವಚನ ರಚಿಸಿದ್ದಾರೆಯೋ ಅದರ ನಿಜವಾದ ಅರ್ಥವನ್ನು ನೇರವಾಗಿ ಜನರಿಗೆ ಮುಟ್ಟಿಸುವಲ್ಲಿ ನೈಜ ಗದ್ಯಾನವಾದ ಗ್ರಂಥ ಉಪಯುಕ್ತವಾಗಿದೆ. ಈ ಗ್ರಂಥದಲ್ಲಿ ಅನುವಾದಕರ ಯಾವುದೇ ವಿವರಣೆ ನೀಡಿಲ್ಲ. ನೇರವಾಗಿ ವಚನಗಳ ಮೂಲ ಆಶಯ ತಿಳಿಸಲಾಗಿದೆ. ಒಂದು ವಿಶ್ವವಿದ್ಯಾಲಯ ಮಾಡುವ ಕೆಲಸಕ್ಕಿಂತ ಬಸವ ಸಮಿತಿ ಹೆಚ್ಚು ಮಾಡುತ್ತಿದೆ ಎಂದರು.
ಡಾ.ವಿಲಾಸ್ವತಿ ಖೂಬಾ ಅವರಿಗೆ ಜೀವಮಾನದ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿ ಸನ್ಮಾನಿಸಲಾಯಿತು . ಡಾ.ಜಯಶ್ರೀ ದಂಡೆ ಸ್ವಾಗತಿಸಿ, ಪ್ರಸ್ತಾವಿಕ ಮಾತನಾಡಿದರು. ನೈಜ ಗದ್ಯಾನುವಾದ ಕೃತಿಯ ಅನುವಾದಕ ಡಾ.ಶ್ರೀಕಾಂತ ಪಾಟೀಲ್ ಮತ್ತು ಡಾ.ಚಿತ್ಕಳ ಮಠಪತಿಯವರು ಉಪಸ್ಥಿತರಿದ್ದರು. ಉದ್ಯಮಿ ರಾಜೇಂದ್ರ ಖೂಬಾ, ಅಮರನಾಥ ಪಾಟೀಲ್, ಕಾರ್ಯದರ್ಶಿ ಡಾ.ಆನಂದ ಪಾಟೀಲ್ ಸಿದ್ಧಾಮಣಿ, ಡಾ.ಕೆ.ಎಸ್.ವಾಲಿ, ಶರಣಗೌಡ ಪಾಟೀಲ್ ಪಾಳಾ, ಉದ್ದಂಡಯ್ಯ ಭಾಗವಹಿಸಿದ್ದರು.