ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್. ಮಂಜುನಾಥ್  
ರಾಜ್ಯ

2,300 ಕೋಟಿ ರೂ.ಬಾಕಿ ಬಿಡುಗಡೆ: ಪಿಡಬ್ಲ್ಯುಡಿ ಮಿನಿಸ್ಟರ್​​ಗೆ ಕೃತಜ್ಞತೆ ಹೇಳಿದ ಗುತ್ತಿಗೆದಾರರು

ಬೆಂಗಳೂರು:ಕಾಮಗಾರಿ ಬಾಕಿ ಬಿಲ್‌ಗಳಿಗೆ ಹಣ ಬಿಡುಗಡೆ ಮಾಡುವಂತೆ ಗುತ್ತಿಗೆದಾರರು ನಿರಂತರವಾಗಿ ನಡೆಸುತ್ತಿದ್ದ ಹೋರಾಟಕ್ಕೆ ಮಣಿದಿರುವ ಸರ್ಕಾರ, ಮಾರ್ಚ್‌ನಲ್ಲಿ 2 ಸಾವಿರ ಕೋಟಿ ರೂ. ಮತ್ತು ಪ್ರಸಕ್ತ ತಿಂಗಳಲ್ಲಿ 300 ಕೋಟಿ ರೂ. ಸೇರಿ ಒಟ್ಟು 2,300 ಕೋಟಿ ರೂ. ಬಿಡುಗಡೆ ಮಾಡಿದೆ. 
ಲೋಕೋಪಯೋಗಿ ಇಲಾಖೆಯ (ಪಿಡಬ್ಲ್ಯುಡಿ) ವ್ಯಾಪ್ತಿಯ ಕಾಮಗಾರಿಗಳ ಬಿಲ್‌ಗಳಿಗೆ ಈ ಹಣ ಬಳಸಲಾಗುತ್ತಿದೆ. ರಸ್ತೆ, ಸೇತುವೆ, ಪ್ರಮುಖ ಜಿಲ್ಲಾ ರಸ್ತೆಗಳು (ಎಂಡಿಆರ್) ಮತ್ತು ರಾಜ್ಯ ಹೆದ್ದಾರಿ (ಎಸ್‌ಎಚ್) ನಿರ್ವಹಣೆ ಲೆಕ್ಕ ಶೀರ್ಷಿಕೆ ಅಡಿ 4,964 ಸಣ್ಣ, ಮಧ್ಯಮ ವರ್ಗದ ಗುತ್ತಿಗೆದಾರರಿಗೆ ಅನುಕೂಲವಾಗಲು 10 ಲಕ್ಷ ರೂ. ವರೆಗಿನ ಬಾಕಿ ಬಿಲ್‌ಗಳ ಕ್ಲಿಯರ್ ಮಾಡಲು 300 ಕೋಟಿ ರೂ. ಹಣ ಬಿಡುಗಡೆಯಾಗಿದೆ. 
ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್. ಮಂಜುನಾಥ್ ಮಾತನಾಡಿ, 37 ಸಾವಿರ ಕೋಟಿ ರೂ. ಬಾಕಿ ಬಿಲ್ ಬಿಡುಗಡೆ ಸೇರಿ ವಿವಿಧ ಬೇಡಿಕೆ ಈಡೇರಿಕೆಗಾಗಿ ಮಾರ್ಚ್‌ನಲ್ಲಿ ಗುತ್ತಿಗೆದಾರರು ಪ್ರತಿಭಟನೆ ನಡೆಸಿದ್ದರು. ಡಿಸಿಎಂ ಡಿ.ಕೆ. ಶಿವಕುಮಾರ್, ಹಾಗೂ ಸಚಿವರಾದ ಸತೀಶ್ ಜಾರಕಿಹೊಳಿ ಹಾಗೂ ಬೋಸರಾಜು ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿ, ಬಾಕಿ ಬಿಲ್‌ಗಳಿಗೆ ಹಣ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದರು. ಅದರಂತೆ, ಪಿಡಬ್ಲ್ಯುಡಿ ವ್ಯಾಪ್ತಿಯ ಬಿಲ್‌ಗಳಿಗೆ ಒಟ್ಟು 2,300 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಇದಕ್ಕೆ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಪ್ರತಿಭಟನೆ ನಡೆಸಿದ್ದ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿಸುವುದಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ವಾಗ್ದಾನ ನೀಡಿದ್ದರು. ಅದನ್ನು ಈಡೇರಿಸಬೇಕು. ಜಲಸಂಪನ್ಮೂಲ, ಸಣ್ಣ ನೀರಾವರಿ ಸೇರಿ ಉಳಿದ ಇಲಾಖೆಗಳ ಬಾಕಿ ಬಿಲ್‌ಗಳಿಗೆ ಹಣ ಬಿಡುಗಡೆಗೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಎಂ. ನಂದಕುಮಾರ್ ಮನವಿ ಮಾಡಿದರು.