ಆನ್-ಪೇಪರ್ ಟೀಚರ್ಸ್ 
ರಾಜ್ಯ

ರಾಜ್ಯದ 27 ಆಯುರ್ವೇದ ಶಿಕ್ಷಕರ ನೋಂದಣಿ ಅಮಾನತು- on paper teachers

ಬೆಂಗಳೂರು: ಕಾಲೇಜು ಮತ್ತು ಆಸ್ಪತ್ರೆಗಳಲ್ಲಿ ಖುದ್ದಾಗಿ ಹಾಜರಾಗದೆ ಕೇವಲ ದಾಖಲೆಗಳಲ್ಲಿ ಶಿಕ್ಷಕರೆಂದು ಹೆಸರು ಉಳಿಸಿಕೊಂಡಿರುವ (ಆನ್-ಪೇಪರ್ ಟೀಚರ್ಸ್) ರಾಜ್ಯದ 27 ಆಯುರ್ವೇದ ಶಿಕ್ಷಕರ ನೋಂದಣಿಯನ್ನು ತಕ್ಷಣ ಅಮಾನತುಗೊಳಿಸಲಾಗಿದೆ. ಈ ಪಟ್ಟಿಯಲ್ಲಿ ಕರ್ನಾಟಕದ ಎರಡು ಆಯುರ್ವೇದ ಕಾಲೇಜುಗಳ ಶಿಕ್ಷಕರು ಇದ್ದಾರೆ.
ಈ ಕುರಿತು ಆದೇಶ ಹೊರಡಿಸಿರುವ ‘ಭಾರತೀಯ ವೈದ್ಯಕೀಯ ಪದ್ಧತಿಗಳ ರಾಷ್ಟ್ರೀಯ ಆಯೋಗ’ (ಎನ್‌ಸಿಐಎಸ್‌ಎಂ), ಮೂರು ದಿನದೊಳಗೆ ಕ್ರಮ ತೆಗೆದುಕೊಂಡ ವರದಿಯನ್ನು ನೀಡುವಂತೆ ಕರ್ನಾಟಕ ಆಯುರ್ವೇದಿಕ್ ಮತ್ತು ಯುನಾನಿ ಪ್ರಾಕ್ಟಿಷನರ್ಸ್ ಬೋರ್ಡ್‌ಗೆ (ಕೆಎಯುಪಿಬಿ) ಸೂಚಿಸಿದೆ.
ಎನ್‌ಸಿಐಎಸ್‌ಎಂ (ನೈತಿಕತೆ ಮತ್ತು ನೋಂದಣಿ) ನಿಯಮದಂತೆ ಕಾಲೇಜು ಮತ್ತು ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸದೆ ಗೈರಾಗಿ ‘ದಾಖಲೆಗಳಿಗಷ್ಟೇ ಶಿಕ್ಷಕರಾಗಿರುವ’ ವ್ಯಕ್ತಿಗಳಿಗೆ ವೈದ್ಯಕೀಯ ನೋಂದಣಿ ಹಾಗೂ ವೈದ್ಯಕೀಯ ಮೌಲ್ಯಮಾಪನ ಮತ್ತು ರೇಟಿಂಗ್ ಮಂಡಳಿ ನೀಡಿರುವ ಶಿಕ್ಷಕರ ಕೋಡ್ ಅನ್ನು ವರ್ಷದವರೆಗೆ ಅಮಾನತುಗೊಳಿಸಲಾಗುತ್ತದೆ. ಹಾಗಾಗಿ, ಅಮಾನತು ಅವಧಿಯಲ್ಲಿ ಈ ಶಿಕ್ಷಕರು ದೇಶದ ಯಾವುದೇ ರಾಜ್ಯ,ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾಯಂ ಅಥವಾ ಹಂಗಾಮಿ ನೋಂದಣಿ ಆಧಾರದಲ್ಲಿ ವೈದ್ಯಕೀಯ ಸೇವೆ ಅಥವಾ ಚಿಕಿತ್ಸೆ ನೀಡುವಂತಿಲ್ಲ ಎಂದು ಆದೇಶದಲ್ಲಿ ಎನ್‌ಸಿಐಎಸ್‌ಎಂ ಉಲ್ಲೇಖಿಸಿದೆ.
ನಿಯಮ ಉಲ್ಲಂಘಿಸಿದ ಶಿಕ್ಷಕರು ಮಾತ್ರವಲ್ಲದೆ ಇಂತಹವರನ್ನು ನೇಮಿಸಿಕೊಂಡ ಸಂಸ್ಥೆಗಳು ಮತ್ತು ಕಾಲೇಜುಗಳಿಗೆ ದಂಡ ವಿಧಿಸಲಾಗುತ್ತದೆ. ಆನ್‌ಪೇಪರ್ ಶಿಕ್ಷಕರಿಗೆ ಪ್ರತ್ಯೇಕ ವಿಚಾರಣೆ ಅಥವಾ ಕೌನ್ಸೆಲಿಂಗ್ ಅವಕಾಶ ಇಲ್ಲದೆ ನೇರವಾಗಿ ಅಮಾನತು ಕ್ರಮ ಕೈಗೊಳ್ಳಲಾಗುತ್ತದೆ. ಶಿಕ್ಷಕರ ಹೆಸರನ್ನು ರಾಜ್ಯ, ರಾಷ್ಟ್ರೀಯ ನೋಂದಣಿ ಪುಸ್ತಕದಿಂದ ಕೈಬಿಡಲಾಗುತ್ತದೆ.
ಅಮಾನತುಗೊಂಡ ಶಿಕ್ಷಕರ ವಿವರ:
ಡಾ.ವಿಜಯ್ ಕುಮಾರ್ ಹಳ್ಳಿ, ಡಾ.ಟಿ.ಎಂ.ಲೀಲಾವತಿ, ಆರ್.ಲಕ್ಷ್ಮಿ ನಾರಾಯಣ, ಡಾ. ಎಚ್.ಎಂ. ಅರುಣಾ, ಡಾ.ಎಸ್.ಎನ್.ಚೇತನ್‌ಕುಮಾರ್, ಡಾ.ಡಿ.ಮಂಜುನಾಥ, ಡಾ.ಎಂ.ಆರ್.ಆಶಾ, ಡಾ. ಕೆ.ಎಂ.ಕಮಲಶ್ರೀ, ಡಾ. ರಶ್ಮಿ ಆರ್.ಹೆಗಡೆ, ಡಾ.ಸ್ನೇಹಾ ಎಸ್.ಕೊಲಮ್ಕರ್, ಡಾ.ಕೆ.ವಿ.ಶ್ರೀಕಾಂತ್, ಡಾ.ಎಚ್.ಎ. ಶ್ರೀಕೃಷ್ಣ ಹಾಗೂ ಡಾ. ಉಮಾ ಬಿ. ಗೋಪಾಲ್ ಅವರ ನೋಂದಣಿಯನ್ನು 2026ರ ಸೆ.4ರಿಂದ 2027ರ ಸೆ.3ವರೆಗೆ ಅಮಾನತುಗೊಳಿಸಲಾಗಿದೆ. ಡಾ.ಸುಶ್ಮಿತಾ ಪಿ.ದಾನಿ, ಡಾ. ಜೀವನ್ ಈಶ್ವರಯ್ಯ, ಡಾ.ಶಂಕರಾನಂದ, ಡಾ.ಶ್ರೀಕಾಂತ್ ವಿಸ್ಲಾವತ್, ಡಾ.ಶಿವರಾಜೊಡೇಯರ್ ಗುರುಮೂರ್ತೆ, ಡಾ.ಬಿ.ಸುಶ್ಮಿತಾ, ಡಾ. ಐ. ಅರ್ಚನಾ, ಡಾ.ದೀಪ್ತಿ ಎ.ಕುರುಬರ್, ಡಾ.ಸುನೀತಾ ರಾಣಿ, ಡಾ.ಎಸ್.ಮಾನಸಾ, ಡಾ.ಪವನ್‌ರಾಜ್ ದಾನಿ, ಡಾ.ಶಂಸುದ್ದೀನ್, ಡಾ.ಮಂಜುನಾಥ್ ಅಣಗೌಡರ್ ಮತ್ತು ಡಾ.ನಿವೇದಿತಾ ಕುಮಾರಿ ಅವರ ನೋಂದಣಿಯನ್ನು 2026ರ ಸೆ.2ರಿಂದ 2027ರ ಸೆ.1ವರೆಗೆ ಅಮಾನತುಗೊಳಿಸಲಾಗಿದೆ.
ಹಲವು ವರ್ಷಗಳಿಂದ ಪುಕ್ಸಟ್ಟೆ ವೇತನ:
ನಾನ್ ಕ್ಲಿನಿಕಲ್ ವಿಷಯಗಳಿಗೆ ಬೋಧನೆ ಮಾಡುವ ಆಯುರ್ವೇದ ಶಿಕ್ಷಕರಿಗೆ ಪ್ರತಿ ತಿಂಗಳು ಅಂದಾಜು 25 ಸಾವಿರ ರೂ ಹಾಗೂ ಕ್ಲಿನಿಕಲ್ ವಿಷಯಗಳಿಗೆ ಬೋಧಿಸುವ ಶಿಕ್ಷಕರಿಗೆ ಮಾಸಿಕ ಅಂದಾಜು 50 ಸಾವಿರ ರೂ.ವೇತನ ಇರುತ್ತದೆ. ಅಮಾನತುಗೊಂಡ ರಾಜ್ಯದ 27 ಶಿಕ್ಷಕರು ಅಂದಾಜು 15-20 ವರ್ಷಗಳಿಂದ ಖಾಸಗಿ ಆಯುರ್ವೇದ ಕಾಲೇಜಿನಲ್ಲಿ ಕೆಲಸಕ್ಕೆ ಗೈರಾಗಿ ಪುಕ್ಸಟ್ಟೆ ವೇತನ ಪಡೆಯುತ್ತಿದ್ದರು. ರಾಜ್ಯದಲ್ಲಿ ಬಹುತೇಕ ಕಾಲೇಜುಗಳ ಇದೇ ಪರಿಸ್ಥಿತಿ ಇದೆ.ಯಾವುದಾದರೂ ಖಾಸಗಿ ಆಯುರ್ವೇದ ಕಾಲೇಜಿನ ಮಾನ್ಯತೆ ತಾತ್ಕಾಲಿಕವಾಗಿ ರದ್ದಾಗಿದ್ದಲ್ಲಿ, ಆ ಕಾಲೇಜಿನ ಶಿಕ್ಷಕರು ಬೇರೆ ಆಯುರ್ವೇದ ಕಾಲೇಜುಗಳು ತೆಗೆದುಕೊಳ್ಳಬಾರದು ಎಂಬ ನಿಯಮವೂ ಇದೆ. ಆದರೆ, ಈ ನಿಯಮವನ್ನು ಉಲ್ಲಂಘಿಸಿ ಬೇರೆ ಕಾಲೇಜಿನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಹೆಸರಲೆಚ್ಚಿಸದ ಅಧಿಕಾರಿಯೊಬ್ಬರು ತಿಳಿಸಿದರು.
ಭಾರತೀಯ ವೈದ್ಯಕೀಯ ಪದ್ಧತಿಗಳ ರಾಷ್ಟ್ರೀಯ ಆಯೋಗ,ಕಾನೂನಾತ್ಮಕವಾಗಿ 27 ಆಯುರ್ವೇದ ಶಿಕ್ಷಕರ ನೋಂದಣಿ ರದ್ದತಿಗೆ ಕ್ರಮಕೈಗೊಂಡಿದೆ. ಆದರೆ,ಇವರ ಮೇಲೆ ಇಂತಹ ಕ್ರಮವಾಗಿರುವುದಕ್ಕೆ ಬೇಸರ ಇದೆ.
- ಡಾ.ಕೆ.ಎಸ್.ಸಂಜಯ್, ಆಯುರ್ವೇದ ಡೀನ್, ರಾಜೀವ್‌ಗಾಂಧಿ ಆಯೋಗ್ಯ ವಿಜ್ಞಾನ ವಿಶ್ವವಿದ್ಯಾಲಯ.