ಚಿತ್ತಾಪುರಲ್ಲಿದಲ್ಲಿ ಕೃಷಿ ಇಲಾಖೆ ಯೋಜನೆಗಳ ಕುರಿತ ಕರಪತ್ರ ಬಿಡುಗಡೆ ಮಾಡಲಾಯಿತು. ನಾಗರೆಡ್ಡಿ ಗೋಪಶೇನ, ಸಂಜೀವಕುಮಾರ ಮಾನಕರ, ವೀರಣ್ಣಗೌಡ ಪರಸರೆಡ್ಡಿ ಇತರರಿದ್ದರು.
- ಸಹಾಯಕ ಕೃಷಿ ನಿರ್ದೇಶಕ ಸಂಜೀವಕುಮಾರ ಕರೆ
- ಚಿತ್ತಾಪುರದಲ್ಲಿ ಸಭೆ
ಚಿತ್ತಾಪುರ: ಮುಂಗಾರು ಹಂಗಾಮಿನಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆ ವಿಮೆ ನೋಂದಣಿ ಮಾಡಿಕೊಳ್ಳಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಸಂಜೀವಕುಮಾರ ಮಾನಕರ ಹೇಳಿದರು.
ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ತಾಲೂಕು ಕೃಷಿಕ ಸಮಾಜದ ಆಡಳಿತ ಮಂಡಳಿ ನಿರ್ದೇಶಕರ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿ, ಸರ್ಕಾರದ ಯೋಜನೆಗಳ ಲಾಭ ಪಡೆದುಕೊಳ್ಳಬೇಕು. ಕೃಷಿ ವಿಜ್ಞಾನಿಗಳಿಂದ ಮಾಹಿತಿ ಪಡೆದು ಬಿತ್ತನೆ ಕಾರ್ಯಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ನಾಗರೆಡ್ಡಿ ಗೊಪಸೇನ ಮಾತನಾಡಿ, ಈ ವರ್ಷ ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ರೈತರಿಗೆ ಹೆಚ್ಚಿನ ಸಂಖ್ಯೆಯಲ್ಲಿ ತುಂತುರು ನೀರಾವರಿ ಘಟಕಗಳನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು. ರೈತರ ಹಿತದೃಷ್ಟಿಯಿಂದ ಸರ್ಕಾರವು ಸಾಲಮನ್ನಾ ಕುರಿತು ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಪ್ರತಿನಿಧಿ ವಿರಣ್ಣಗೌಡ ಪರಸರೆಡ್ಡಿ, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ರಾಜಕುಮಾರ, ಪಶುಸಂಗೋಪನಾ ಇಲಾಖೆಯ ಡಾ.ಆಕಾಶ ಮಾತನಾಡಿದರು.
ಕೃಷಿಕ ಸಮಾಜ ತಾಲೂಕು ಉಪಾಧ್ಯಕ್ಷ ಚನ್ನಬಸ್ಸಪ್ಪ ಜೀವಣಗಿ, ಪ್ರಧಾನ ಕಾರ್ಯದರ್ಶಿ ನಿಂಗಣ್ಣಗೌಡ ಬಿರಾದಾರ, ಖಜಾಂಚಿ ನಿಂಗಣ್ಣ ಹೆಗಲೇರಿ, ನಿರ್ದೇಶಕರಾದ ಬಾಬುರಾವ ಕಾಶಿ, ರವೀಂದ್ರ ಅಲ್ಲೂರ, ಶಿವಶರಣರೆಡ್ಡಿ ಬಂಕಲಗಿ, ಮಲ್ಲಿಕಾರ್ಜುನ, ಅಬ್ದುಲ್ ನಯೀಂ, ಕೃಷಿ ಇಲಾಖೆ ಅಧಿಕಾರಿಗಳಾದ ರವೀಂದ್ರಕುಮಾರ, ಶ್ರೀನಿವಾಸ, ಸಚಿನ್ ಇತರರಿದ್ದರು.