ರಮೇಶ ಜಿಗಜಿಣಗಿ, ಸಂಸದ 
ರಾಜ್ಯ

ಆರ್‌ಎಸ್‌ಎಸ್ ಪಥ ಸಂಚಲನಕ್ಕೆ ಪರವಾನಿಗೆ ವಿಚಾರ, ದೇಶಕ್ಕಾಗಿ ಸ್ವಯಂ ಸೇವೆ ಸಲ್ಲಿಸಲು ಅನುಮತಿ ಬೇಕೆ ಎಂದ ಸಂಸದ ಜಿಗಜಿಣಗಿ

ಪ್ರಮುಖ ಮುಖ್ಯಾಂಶಗಳು

  • ಕಾಂಗ್ರೆಸ್ ಧೋರಣೆಗೆ ತೀವ್ರ ಖಂಡನೆ
  • ಭಾರತ ಮಾತೆ ಭಾವಚಿತ್ರ ಮೆರವಣಿಗೆಗೆ ಅನುಮತಿ ಬೇಕೆ?
  • ನಾಳೆ ವಾರಕರಿಗಳ ಮೆರವಣಿಗೆಗೆ ಪರವಾನಿಗೆ ಕೇಳಿದರೆ ಅಚ್ಚರಿಯಿಲ್ಲ
ವಿಜಯಪುರ: ‘ಆರ್‌ಎಸ್‌ಎಸ್ ಪಥ ಸಂಚಲನಕ್ಕೆ ಅನುಮತಿ ಕಡ್ಡಾಯ ಎನ್ನುತ್ತಿರುವ ಕಾಂಗ್ರೆಸ್ ಸರ್ಕಾರ ನಾಳೆ ಅಯ್ಯಪ್ಪ ಮಾಲಾಧಾರಿಗಳ ಧಾರ್ಮಿಕ ಮೆರವಣಿಗೆ, ಪಂಢರಪುರಕ್ಕೆ ತೆರಳುವ ವಾರಕರಿಗಳ ಮೆರವಣಿಗೆಗೂ ನಿರ್ಬಂಧ ಹೇರಿದರೂ ಅಚ್ಚರಿ ಪಡಬೇಕಿಲ್ಲ’ ಎಂದು ಸಂಸದ ರಮೇಶ ಜಿಗಜಿಣಗಿ ವ್ಯಂಗ್ಯವಾಡಿದ್ದಾರೆ.
ಆರ್‌ಎಸ್‌ಎಸ್ ಪಥ ಸಂಚಲನಕ್ಕೆ ಅನುಮತಿ ಕಡ್ಡಾಯ ಎಂಬ ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಅವರು, ಆರ್‌ಎಸ್‌ಎಸ್ ಎಂಬುದು ದೇಶಭಕ್ತರಿಂದ ಕೂಡಿದ ಸಂಘಟನೆ, ಪ್ರತಿಯೊಬ್ಬ ಭಾರತೀಯನೂ ಜಾತಿ, ಮತ, ಪಂಥಗಳ ಭೇದವಿಲ್ಲದೇ ದೇಶ ಸೇವೆಗಾಗಿ ಒಂದುಗೂಡುತ್ತಾರೆ. ದೇಶಾಭಿಮಾನ ಮೂಡಿಸಲೆಂದು ಆಕರ್ಷಕವಾಗಿ ಪಥ ಸಂಚಲನ ಮಾಡುತ್ತಾರೆ. ಹೀಗಾಗಿ ಈ ಪಥ ಸಂಚಲನಕ್ಕೆ ಯಾರದ್ದೇ ಅನುಮತಿ ಬೇಕಿಲ್ಲ ಎಂದಿದ್ದಾರೆ.
ಹಿಂದೂ ರಾಷ್ಟ್ರ ನಿರ್ಮಾಣದ ಧ್ಯೇಯ ಇಟ್ಟುಕೊಂಡು ತಾಯಿ ಭಾರತಾಂಬೆಯ ಭಾವಚಿತ್ರದ ಭವ್ಯ ಮೆರವಣಿಗೆಗೆ ನಿರ್ಬಂಧ ಹೇರಲು ಹೊರಟಿರುವ ಕಾಂಗ್ರೆಸ್ ಸರ್ಕಾರ ನಾಳೆ ಅಯ್ಯಪ್ಪ ಸ್ವಾಮಿಯ ಮಾಲಾಧಾರಿಗಳು, ಪಂಢರಪುರದ ವಾರಕರಿಗಳ ಯಾತ್ರೆಗಳಿಗೂ ನಿರ್ಬಂಧ ಹೇರಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿ? ಅಲ್ಪಸಂಖ್ಯಾತರು ಕೈಯಲ್ಲಿ ಬಡಿಗೆ ಮತ್ತಿತರ ಆಯುಧ ಹಿಡಿದು ಮೋಹರಂ ಮೆರವಣಿಗೆ ಮಾಡುವುದಿಲ್ಲವೇ? ಹರಿತ ಆಯುಧದಿಂದ ಎದೆ ಬಡಿದುಕೊಂಡು ರಕ್ತ ಸುರಿಸುತ್ತಾರಲ್ಲ ಅದಕ್ಕಿರದ ನಿರ್ಭಂಧ ಶಾಂತಿಯುತವಾಗಿ ಮತ್ತು ಜನಾಕರ್ಷಕವಾಗಿ ನಡೆಯುವ ಆರ್‌ಎಸ್‌ಎಸ್ ಜಾಥಾಗಳಿಗೆ ಏಕೆ? ಮೋಹರಂ ಮೆರವಣಿಗೆಯನ್ನು ಅನುಮತಿ ಪಡೆದುಕೊಂಡೇ ನಡೆಸುತ್ತಾರೆಯೇ? ಕಾಂಗ್ರೆಸ್ ಯಾಕೆ ಇಂಥ ತಾರತಮ್ಯ ನೀತಿ ಅನುಸರಿಸುತ್ತದೆ? ಒಂದು ವರ್ಗದ ಓಲೈಕೆ ಇನ್ನೊಂದು ವರ್ಗದ ಧಮನ ನೀತಿ ಅನುಸರಿಸುತ್ತಿರುವುದೇಕೆ? ಎಂದು ಸಂಸದರು ಪ್ರಶ್ನಿಸಿದ್ದಾರೆ.
ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರು ಎಲ್ಲರಿಗೂ ಸಮಾನ ನ್ಯಾಯ ಒದಗಿಸಿದ್ದಾರೆ. ಡಾ.ಅಂಬೇಡ್ಕರ್ ಸಂವಿಧಾನದ ಮೇಲೆ ಕಾಂಗ್ರೆಸ್‌ಗೆ ನಂಬಿಕೆ ಇದ್ದರೆ ಎಲ್ಲರಿಗೂ ಸಮಾನ ನ್ಯಾಯ ಮತ್ತು ನೀತಿ ಕಲ್ಪಿಸಲಿ. ಅದನ್ನು ಬಿಟ್ಟು ದೇಶಭಕ್ತರ ಸಂಘಟನೆಗೆ ನಿಷೇಧ ಹೇರುವುದು, ನೋಂದಣಿ ಮಾಡಿಸುವುದು, ಪಥ ಸಂಚಲನಕ್ಕೆ ನಿರ್ಬಂಧ ಹೇರುವಂಥ ನೀತಿ ಕೈ ಬಿಡಲಿ. ನಿಮಗೆ ತಾಕತ್ ಇದ್ದರೆ ದೇಶದಲ್ಲಿದ್ದುಕೊಂಡೇ ದೇಶದ ಅನ್ನ, ನೀರು, ಗಾಳಿ ಸೇವಿಸಿ ದೇಶದ ಮೇಲೆಯೇ ಬಾಂಬ್ ಎಸೆಯುವ, ದೇಶದ್ರೋಹಿಗಳಿಗೆ ಕುಮ್ಮಕ್ಕು ನೀಡುವ ಸಂಘಟನೆಗಳ ಮೇಲೆ ಕ್ರಮ ಕೈಗೊಳ್ಳಿ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.