ಕರ್ನಾಟಕ ಹೈಕೋರ್ಟ್​ 
ರಾಜ್ಯ

ಅಲ್ಪಾವಧಿ ಸಂಬಂಧ ಕಾರಣಕ್ಕೆ ಜೀವನಾಂಶ ಕಡಿತ ಸಲ್ಲ: ಪತ್ನಿಗೆ 50 ಲಕ್ಷ ರೂ. ಶಾಶ್ವತ ಪರಿಹಾರ ಸೂಕ್ತ | ಕೌಟುಂಬಿಕ ನ್ಯಾಯಾಲಯದ ಆದೇಶ ಎತ್ತಿಹಿಡಿದ ಹೈಕೋರ್ಟ್

ಮದುವೆಯಾಗಿ ಕೇವಲ ಎರಡು ವರ್ಷಗಳು ಮಾತ್ರ ಕಳೆದಿದ್ದು, ಆ ಅವಧಿಯಲ್ಲಿ ಕೆಲವೇ ತಿಂಗಳುಗಳ ಕಾಲ ದಂಪತಿಗಳು ಒಟ್ಟಿಗೆ ವಾಸವಿದ್ದರು ಎಂಬ ಕಾರಣ ಮುಂದಿಟ್ಟುಕೊಂಡು ಪತ್ನಿಗೆ ನೀಡಬೇಕಾದ ಶಾಶ್ವತ ಜೀವನಾಂಶದಲ್ಲಿ ಕಡಿಮೆ ಮಾಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ವಿಜಯವಾಣಿ ಸುದ್ದಿಜಾಲ ಬೆಂಗಳೂರು : ಮದುವೆಯಾಗಿ ಕೇವಲ ಎರಡು ವರ್ಷಗಳು ಮಾತ್ರ ಕಳೆದಿದ್ದು, ಆ ಅವಧಿಯಲ್ಲಿ ಕೆಲವೇ ತಿಂಗಳುಗಳ ಕಾಲ ದಂಪತಿಗಳು ಒಟ್ಟಿಗೆ ವಾಸವಿದ್ದರು ಎಂಬ ಕಾರಣ ಮುಂದಿಟ್ಟುಕೊಂಡು ಪತ್ನಿಗೆ ನೀಡಬೇಕಾದ ಶಾಶ್ವತ ಜೀವನಾಂಶದಲ್ಲಿ ಕಡಿಮೆ ಮಾಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಪತ್ನಿಗೆ 50 ಲಕ್ಷ ರೂಪಾಯಿ ಜೀವನಾಂಶ ನೀಡಲು ಆದೇಶಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಪತಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಮೂರ್ತಿಗಳಾದ ಡಿ.ಕೆ. ಸಿಂಗ್ ಮತ್ತು ಎಚ್. ಶಾಂತಿ ಭೂಷಣ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಈ ಆದೇಶ ನೀಡಿದೆ.

ಶಾಶ್ವತ ಜೀವನಾಂಶವನ್ನು ಯಾವುದೇ ಯಾಂತ್ರಿಕ ಅಥವಾ ಗಣಿತ ಸೂತ್ರದ ಮೂಲಕ ನಿರ್ಧರಿಸಲು ಸಾಧ್ಯವಿಲ್ಲ. ಜೀವನಾಂಶವು ಪತಿಯ ಆರ್ಥಿಕ ಸ್ಥಿತಿ ಮತ್ತು ಪತ್ನಿಯು ಮದುವೆಯ ನಂತರ ಪತಿಯ ಮನೆಯಲ್ಲಿ ಅನುಭವಿಸುತ್ತಿದ್ದ ಜೀವನಮಟ್ಟವನ್ನು ಅವಲಂಬಿಸಿರಬೇಕು. ಮದುವೆಯ ಅವಧಿ ಅಲ್ಪಾವಧಿಯದ್ದಾಗಿತ್ತು ಎಂಬ ಕಾರಣಕ್ಕೆ ಕಡಿಮೆ ಜೀವನಾಂಶ ನೀಡಲು ಸಾಧ್ಯವಿಲ್ಲ. ಅಲ್ಲದೆ, ಪತಿಯ ಸೂಚನೆಯಂತೆ ಪತ್ನಿಯು ಉದ್ಯೋಗವನ್ನು ತೊರೆದಿದ್ದರು. ಇಬ್ಬರ ಆರ್ಥಿಕ ಪರಿಸ್ಥಿತಿ, ಪತ್ನಿಯ ವೃತ್ತಿ ಜೀವನದಲ್ಲಾದ ನಷ್ಟವನ್ನು ಪರಿಗಣಿಸಿ ಕೌಟುಂಬಿಕ ನ್ಯಾಯಾಲಯವು ನಿರ್ಧರಿಸಿದ್ದ 50 ಲಕ್ಷ ರೂ. ಜೀವನಾಂಶದ ಮೊತ್ತವು ಸರಿಯಾಗಿಯೇ ಇದೆ ಎಂದು ಪೀಠವು ಆದೇಶದಲ್ಲಿ ವಿವರಿಸಿದೆ.

ಪ್ರಕರಣದ ಹಿನ್ನೆಲೆ: ಮಂಗಳೂರು ಮೂಲದ ದಂಪತಿಯು 2021ರಲ್ಲಿ ವಿವಾಹವಾಗಿದ್ದರು. ಪತಿಯು ವಿದೇಶದಲ್ಲಿ ಉದ್ಯೋಗದಲ್ಲಿದ್ದ ಕಾರಣ ಪತ್ನಿಯು ತನ್ನ ಉದ್ಯೋಗ ತೊರೆದಿದ್ದರು. ಕೆಲ ತಿಂಗಳುಗಳ ಕಾಲ ವಿದೇಶದಲ್ಲಿ ನೆಲೆಸಿದ್ದ ದಂಪತಿ ನಡುವೆ ಮನಃಸ್ತಾಪ ಹೆಚ್ಚಾಗಿ ಬೇರ್ಪಟ್ಟಿದ್ದರು. ಭಾರತಕ್ಕೆ ಮರಳಿದ ಪತ್ನಿಯು ದಾಂಪತ್ಯ ಹಕ್ಕುಗಳ ಮರುಸ್ಥಾಪನೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಪ್ರತಿಯಾಗಿ ಅರ್ಜಿ ಸಲ್ಲಿಸಿದ್ದ ಪತಿ, ಕ್ರೌರ್ಯದ ಆಧಾರದಲ್ಲಿ ವಿಚ್ಛೇದನ ಕೋರಿದ್ದರು. ಪತ್ನಿಯ ಅರ್ಜಿ ತಿರಸ್ಕರಿಸಿದ್ದ ಕೌಟುಂಬಿಕ ನ್ಯಾಯಾಲಯ, ಪತಿಯ ಅರ್ಜಿ ಪರಿಗಣಿಸಿ ವಿಚ್ಛೇದನ ನೀಡಿತ್ತು. ಪತ್ನಿಗೆ 50 ಲಕ್ಷ ರೂಪಾಯಿ ಜೀವನಾಂಶ ನೀಡುವಂತೆ ಆದೇಶಿಸಿತ್ತು. ಜೀವನಾಂಶ ಆದೇಶವನ್ನು ಪ್ರಶ್ನಿಸಿ ಪತಿ ಮತ್ತು ಜೀವನಾಂಶವನ್ನು 3 ಕೋಟಿ ರೂ.ಗೆ ಏರಿಸಬೇಕು ಎಂದು ಪತ್ನಿ ಅರ್ಜಿ ಸಲ್ಲಿಸಿದ್ದರು. ಎರಡೂ ಅರ್ಜಿಗಳನ್ನು ವಜಾಗೊಳಿಸಿರುವ ನ್ಯಾಯಪೀಠ, ವಿಚಾರಣಾ ನ್ಯಾಯಾಲಯ ಆದೇಶವನ್ನು ಎತ್ತಿಹಿಡಿದೆ.