ವಿಜಯಪುರ ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ್‌ಗೆ ಆಮ್ ಆದ್ಮಿ ಪಕ್ಷದ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಭೋಗೇಶ ಸೋಲಾಪುರ, ಸಂಜು ಶೆಟಗಾರ, ಸುಶೀಲಾ ಮಿಣಜಗಿ ಮತ್ತಿತರರಿದ್ದಾರೆ. 
ರಾಜ್ಯ

ಗ್ಯಾಸ್ ಸಿಲಿಂಡರ್ ದರ ಕಡಿಮೆಗೊಳಿಸಿ

ಬಸವರಾಜ ಭೂಷಣ್ಣವರ

ಪ್ರಮುಖ ಮುಖ್ಯಾಂಶಗಳು

  • ಆಮ್ ಆದ್ಮಿಯಿಂದ ಜಿಲ್ಲಾಡಳಿತಕ್ಕೆ ಮನವಿ
  • ಕೇಂದ್ರ ಸರ್ಕಾರಕ್ಕೆ ಆಗ್ರಹ
ವಿಜಯಪುರ: ವಾಣಿಜ್ಯ ಗ್ಯಾಸ್ ಸಿಲಿಂಡರ್ ದರ ತಕ್ಷಣವೇ ಕಡಿಮೆಗೊಳಿಸುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಆಮ್ ಆದ್ಮಿ ಪಕ್ಷದ ಜಿಲ್ಲಾ ಘಟಕದ ಪದಾಧಿಕಾರಿಗಳು ಬುಧವಾರ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.
ಪಕ್ಷದ ಜಿಲ್ಲಾಧ್ಯಕ್ಷ ಭೋಗೇಶ ಸೋಲಾಪುರ ಮಾತನಾಡಿ, ಕೇಂದ್ರ ಸರ್ಕಾರ ವಾಣಿಜ್ಯ ಗ್ಯಾಸ್ ಸಿಲಿಂಡರ್ ಹಾಗೂ ಆಟೋ ಎಲ್‌ಪಿಜಿ ದರಗಳನ್ನು ನಿರಂತರವಾಗಿ ಹೆಚ್ಚಿಸುತ್ತಿರುವ ಕ್ರಮ ಖಂಡನೀಯ.
ಕೇಂದ್ರ ಸರ್ಕಾರ ಪಂಚ ರಾಜ್ಯಗಳ ಚುನಾವಣೆ ಬಳಿಕವೇ ಈ ಅನ್ಯಾಯಕರ ದರ ಏರಿಕೆಯು ಬಡ ಜನರ ಮೇಲೆ ಚಾಟಿ ಏಟು ಬೀಸಿದ್ದು, ಅದರಿಂದ ಸಾಮಾನ್ಯ ಜನರ ಬದುಕಿನ ಮೇಲೆ ಭಾರ ಬಿದ್ದಂತಾಗಿದೆ. ಅಲ್ಲದೇ, ಸಣ್ಣ ವ್ಯಾಪಾರಿಗಳು, ಹೋಟೆಲ್ ಉದ್ಯಮಿಗಳು ಹಾಗೂ ಆಟೋ ಚಾಲಕರನ್ನು ಸಂಕಷ್ಟದ ಅಂಚಿಗೆ ತಳ್ಳಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ದುಬಾರಿ ಬದುಕಿನ ಹೊರೆ ಹೊತ್ತಿರುವ ಜನರಿಗೆ ಈ ದರ ಏರಿಕೆ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ. ಆಟೋ ಚಾಲಕರು ದಿನನಿತ್ಯದ ಆದಾಯದಿಂದಲೇ ಜೀವನ ಸಾಗಿಸುವ ಪರಿಸ್ಥಿತಿಯಲ್ಲಿ ಇಂತಹ ದರ ಏರಿಕೆ ಅವರ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ ಎಂದು ಅಸಮಾಧಾನ ಹೊರ ಹಾಕಿದರಲ್ಲದೇ, ವಾಣಿಜ್ಯ ಗ್ಯಾಸ್ ಸಿಲಿಂಡರ್ ದರ, ಆಟೋ ಎಲ್‌ಪಿಜಿ ದರ ಕಡಿಮೆಗೊಳಿಸಬೇಕು ಎಂದು ಒತ್ತಾಯಿಸಿದರು.
ಪಕ್ಷದ ಮುಖಂಡರಾದ ಸಂಜು ಶೆಟಗಾರ, ಪ್ರಕಾಶ ಸಬರದ, ಕಿರಣ ಮೇಲಿನಕೇರಿ, ಸುಶೀಲಾ ಮಿಣಜಗಿ, ಜ್ಯೋತಿ ಮಿಣಜಗಿ ಮತ್ತಿತರರಿದ್ದರು.