- ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಗಳು, ನಾಲ್ಕು ನಿಗಮಗಳ ಅಧಿಕಾರಿಗಳು ಮತ್ತು ಇಂಜಿನೀಯರ್‌ಗಳ ಸಭೆ
- ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿ
- ನಬಾರ್ಡ್ ಸಹಾಯ ಧನದಡಿ ಕೈಗೆತ್ತಿಕೊಂಡಿರುವ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ
ನಬಾರ್ಡ್ ಸಹಾಯ ಧನದಡಿ ಕೈಗೆತ್ತಿಕೊಂಡಿರುವ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ, ಅವುಗಳ ಪ್ರಯೋಜನವನ್ನು ಫಲಾನುಭವಿಗಳಿಗೆ ತಲುಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಗಳು, ನಾಲ್ಕು ನಿಗಮಗಳ ಅಧಿಕಾರಿಗಳು ಮತ್ತು ಇಂಜಿನೀಯರ್‌ಗಳ ಸಭೆಯಲ್ಲಿ ಮಾತನಾಡಿದ ಅವರು, ವಿವಿಧ ನೀರಾವರಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿ ರೈತರು ಹಾಗೂ ಫಲಾನುಭವಿಗಳಿಗೆ ತಲುಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಕೃಷ್ಣ ಮೇಲ್ದಂಡೆ ಯೋಜನೆ, ಭದ್ರಾ ಮೇಲ್ದಂಡೆ ಯೋಜನೆ, ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆ ಸೇರಿದಂತೆ ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿರುವ ಪ್ರಮುಖ ಯೋಜನೆಗಳ ಅನುಷ್ಠಾನ ಕುರಿತು ಸಮಗ್ರವಾಗಿ ಚರ್ಚಿಸಲಾಯಿತು.
ಕೆಎನ್‌ಎನ್‌ಎಲ್ ಅಡಿಯಲ್ಲಿ ನೀರಾವರಿ ಯೋಜನೆಗಳ ಜೊತೆಗೆ ಕೆರೆ ತುಂಬಿಸುವ ಯೋಜನೆಗಳು, ನಬಾರ್ಡ್ ಸಹಾಯಧನದಡಿ ಕೈಗೆತ್ತಿಕೊಂಡಿರುವ ಕಾಮಗಾರಿಗಳು, ವಿಶ್ವ ಬ್ಯಾಂಕ್ ನೆರವಿನ ಡ್ಯಾಂ ರಿಹ್ಯಾಬಿಲಿಟೇಶನ್ ಅಂಡ್ ಇಂಪ್ರೂವ್‌ಮೆಂಟ್ ಪ್ರೋಗ್ರಾಂ (ಡ್ರಿಪ್) ಹಾಗೂ ಕಾಲುವೆಗಳ ಅಧುನೀಕರಣ ಯೋಜನೆಗಳ ಪ್ರಗತಿಯನ್ನೂ ಸಚಿವರು ಪರಿಶೀಲಿಸಿದರು.
ಸಭೆಯಲ್ಲಿ ರಾಜ್ಯ ಜಲ ನೀತಿ 2022 ಹಾಗೂ ಕರ್ನಾಟಕ ನೀರಾವರಿ (ತಿದ್ದುಪಡಿ) ಕಾಯ್ದೆ2024ರ ಅನುಷ್ಠಾನದ ಬಗ್ಗೆಯೂ ಚರ್ಚೆ ನಡೆಯಿತು. ಈ ಕಾಯ್ದೆಯನ್ನು 2024ರಲ್ಲಿ ಜಾರಿಗೆ ತಂದು ಅಧಿಸೂಚನೆ ಹೊರಡಿಸಲಾಗಿದ್ದು, ಅಧಿಕಾರಿಗಳಿಗೆ ಈಗಾಗಲೇ ತರಬೇತಿ ನೀಡಲಾಗಿದೆ. ಇಲಾಖೆಯ ಎಲ್ಲ ಹಂತಗಳಲ್ಲಿ ಮುಂದಿನ ಮೂರು ತಿಂಗಳೊಳಗೆ ಕಡ್ಡಾಯವಾಗಿ ಕಾಯ್ದೆಯನ್ನು ಅನುಷ್ಠಾನಗೊಳಿಸುವಂತೆ ಸಚಿವರು ಸೂಚಿಸಿದರು.
ಇದೇ ವೇಳೆ ಇಲಾಖೆಯ ಯೋಜನೆಗಳ ಕಾರ್ಯಾಭಾರ, ಆಯವ್ಯಯ ಅನುದಾನ, ಬಾಕಿ ಬಿಲ್ಲುಗಳು ಹಾಗೂ ಖಾಲಿ ಹುದ್ದೆಗಳ ಕುರಿತು ಚರ್ಚೆ ನಡೆಯಿತು.
ಕೆಎನ್‌ಎನ್‌ಎಲ್‌ನಲ್ಲಿ ಸುಮಾರು ಶೇ.50ರಷ್ಟು ಹುದ್ದೆಗಳು ಖಾಲಿ ಇರುವುದನ್ನು ಗಮನಿಸಿದ ಸಚಿವರು, ವಿಶೇಷವಾಗಿ ಸಹಾಯಕ ಇಂಜಿನಿಯರ್ ಹುದ್ದೆಗಳನ್ನು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮೂಲಕ ಭರ್ತಿ ಮಾಡಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಪ್ರತಿ ವರ್ಷ ಇಲಾಖೆಯಲ್ಲಿ ಮಂಜೂರಾದ ಹುದ್ದೆಗಳಿಗೆ ಎದುರಾಗಿ ಕನಿಷ್ಠ ಶೇ.2ರಷ್ಟು ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ಕೈಗೊಳ್ಳುವಂತೆಯೂ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
*ಕೃಷ್ಣ ಮೇಲ್ದಂಡೆ ಯೋಜನೆ, ಭದ್ರಾ ಮೇಲ್ದಂಡೆ ಯೋಜನೆ, ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆ ಸೇರಿದಂತೆ ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿರುವ ಪ್ರಮುಖ ಯೋಜನೆಗಳ ಅನುಷ್ಠಾನ ಕುರಿತು ಸಮಗ್ರವಾಗಿ ಚರ್ಚಿಸಲಾಯಿತು.
-ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ