- 173 ಹುದ್ದೆ ಭರ್ತಿಗೆ ಗುಲ್ಬರ್ಗ ವಿವಿ ಪ್ರಸ್ತಾವನೆ
- ಬೋಧಕರ ಕೊರತೆ ಮಾಹಿತಿ ಕೇಳಿದ ರಾಜ್ಯ ಸರ್ಕಾರ
ಕಲಬುರಗಿ: ಸಾರ್ವಜನಿಕ ವಿಶ್ವವಿದ್ಯಾಲಯಗಳಲ್ಲಿನ 1000 ಬೋಧಕರ ಹುದ್ದೆ ತರ್ಕಬದ್ಧಗೊಳಿಸಿ ಹಂತ-ಹಂತವಾಗಿ ಭರ್ತಿ ಮಾಡಲು ಸರ್ಕಾರ ನಿರ್ಧರಿಸಿದೆ. ಖಾಲಿ ಹುದ್ದೆಗಳ ಮಾಹಿತಿ ಒದಗಿಸುವಂತೆ ಸರ್ಕಾರ ಸೂಚಿಸಿರುವ ಹಿನ್ನೆಲೆಯಲ್ಲಿ 173 ಹುದ್ದೆ ಭರ್ತಿಗೆ ಗುಲ್ಬರ್ಗ ವಿವಿ ಕೋರಿಕೆ ಸಲ್ಲಿಸಿದ್ದು, ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ನೇಮಕ ಪ್ರಕ್ರಿಯೆಗೆ ಕೊನೆಗೂ ಚಾಲನೆ ಸಿಕ್ಕಂತಾಗಿದೆ.
ಗುಲ್ಬರ್ಗ ವಿವಿಯಲ್ಲಿ ಪ್ರಾಧ್ಯಾಪಕರ 26, ಸಹ ಪ್ರಾಧ್ಯಾಪಕರ 56, ಸಹಾಯಕ ಪ್ರಾಧ್ಯಾಪಕರ 124 ಸೇರಿ 206 ಹುದ್ದೆ ಮಂಜೂರಾಗಿವೆ. ಈ ಪೈಕಿ ಮೂವರು ಪ್ರಾಧ್ಯಾಪಕರು, ಐವರು ಸಹ ಪ್ರಾಧ್ಯಾಪಕ, 25 ಸಹಾಯಕ ಪ್ರಾಧ್ಯಾಪಕರು ಕಾರ್ಯನಿರ್ವಹಿಸುತ್ತಿದ್ದು, 173 ಶಿಕ್ಷಕರ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳಬೇಕಿದೆ ಎಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
173 ಹುದ್ದೆಗಳ ಪೈಕಿ ಕಲ್ಯಾಣ ಕರ್ನಾಟಕ ವೃಂದ (ಎಚ್ಕೆ) 135 ಹುದ್ದೆಗಳಿದ್ದು, ಉಳಿಕೆ ಮೂಲ ವೃಂದ (ನಾನ್ ಎಚ್ಕೆ) ಅಡಿ 39 ಇವೆ. ಈ ಎಲ್ಲ ಹುದ್ದೆ ಭರ್ತಿ ಮಾಡಿದರೆ ಮಾತ್ರ ಸುಮಾರು ನಾಲ್ಕು ದಶಕದ ವಿವಿ ಉಳಿಯಲು ಸಾಧ್ಯ. ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ಕೊರತೆಯ ಗಂಭೀರ ಸಮಸ್ಯೆಗೆ ಸಿಲುಕಿರುವ ವಿವಿ ಸಂಪೂರ್ಣ ಖಾಲಿಯಾಗಿದೆ. 200ಕ್ಕೂ ಹೆಚ್ಚು ಬೋಧಕರು ಇರಬೇಕಿದ್ದ ವಿವಿಯಲ್ಲಿ ಸದ್ಯ 29 ಉಳಿದಿದ್ದು, ಮೂರ್ನಾಲ್ಕು ತಿಂಗಳಲ್ಲಿ ಈ ಸಂಖ್ಯೆ 12ಕ್ಕೆ ಬಂದು ನಿಲ್ಲಲಿದೆ ಎಂಬುದು ಆತಂಕಕಾರಿ ಸಂಗತಿ.
ಈವರೆಗಿನ ಸರ್ಕಾರಗಳು ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶವನ್ನು ಕಡೆಗಣಿಸುತ್ತ ಬಂದಿವೆ ಎಂಬುದಕ್ಕೆ ಈ ವಿವಿ ಸ್ಥಿತಿಯೇ ನಿದರ್ಶನ. ಇನ್ನೊಂದು ವಿಚಿತ್ರವೆಂದರೆ ವಿವಿಯ 12 ವಿಭಾಗಗಳಿಗೆ ಕಾಯಂ ಶಿಕ್ಷಕರಿಲ್ಲ. ಎಂಟು ವಿಭಾಗಗಳಲ್ಲಿ ಒಬ್ಬರೇ ಕಾಯಂ ಶಿಕ್ಷಕರು ಕೆಲಸ ಮಾಡುತ್ತಿರುವುದು ಉನ್ನತ ಶಿಕ್ಷಣಕ್ಕೆ ಸರ್ಕಾರ ಎಷ್ಟೊಂದು ಪ್ರಾಧಾನ್ಯ ನೀಡುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.
ವಿಶ್ವವಿದ್ಯಾಲಯದ 38 ವಿಭಾಗಗಳ ಪೈಕಿ ಇತಿಹಾಸ, ಸಮಾಜಶಾಸ್ತ್ರ, ಎಂಎಸ್ಡಬ್ಲು, ಮಹಿಳಾ ಅಧ್ಯಯನ, ಅಂಬೇಡ್ಕರ್ ಅಧ್ಯಯನ, ದೃಶ್ಯಕಲಾ, ಸಂಗೀತ, ಮರಾಠಿ, ಸಂಸ್ಕೃತ ಮತ್ತು ಎಂಬಿಎ, ಸೂಕ್ಷ್ಮಜೀವಶಾಸ್ತ್ರ, ಗ್ರಂಥಾಲಯ ವಿಜ್ಞಾನ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಒಬ್ಬರೂ ಕಾಯಂ ಶಿಕ್ಷಕರಿಲ್ಲ. ಅರ್ಥಶಾಸ್ತ್ರ, ಅಪ್ಲೆಡ್ ಇಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್, ಪರಿಸರ ವಿಜ್ಞಾನ, ಮಟೇರಿಯಲ್ ಸೈನ್ಸ್, ಸಂಖ್ಯಾಶಾಸ್ತ್ರ, ಪ್ರಾಣಿಶಾಸ್ತ್ರ, ಕಾನೂನು, ಕನ್ನಡ, ಶಿಕ್ಷಣ ಮತ್ತು ದೈಹಿಕ ಶಿಕ್ಷಣ ವಿಭಾಗದಲ್ಲಿ ತಲಾ ಒಬ್ಬರು ಕಾಯಂ ಶಿಕ್ಷಕರಿದ್ದಾರೆ. ಶಿಕ್ಷಕರ 173 ಹುದ್ದೆ, ಶಿಕ್ಷಕೇತರ 283 ಸೇರಿ 456 ಹುದ್ದೆಗಳು ಖಾಲಿ ಇವೆ. ಸುಮಾರು ನಾಲ್ಕು ದಶಕದ ಇತಿಹಾಸ ಹೊಂದಿರುವ ವಿವಿಗೆ ಪ್ರಸಕ್ತ ಕಾಯಂ ಶಿಕ್ಷಕರೇ ಇಲ್ಲ ಎನ್ನುವಂಥ ಸ್ಥಿತಿ ನಿರ್ಮಾಣವಾಗಿದೆ. ಅತಿಥಿ ಶಿಕ್ಷಕರು, ಹೊರಗುತ್ತಿಗೆ ನೌಕರರು ಸೇರಿ 478 ಜನ ಕೆಲಸ ನಿರ್ವಹಿಸುತ್ತಿದ್ದಾರೆ.
ಸಿಎಂ ಡಿಕೆಶಿ ಗಂಭೀರ ಪರಿಗಣಿಸಲಿ
ವಿವಿ ಮುಖ್ಯ ಕ್ಯಾಂಪಸ್ನಲ್ಲಿ 165 ಅತಿಥಿ ಉಪನ್ಯಾಸಕರಿದ್ದು, 12 ಡಾಟಾ ಎಂಟ್ರಿ ಆಪರೇಟರ್ಸ್, 21 ಜನ ಆರೋಗ್ಯ ಕೇಂದ್ರ, ಶಾಲೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಸೆಕ್ಯೂರಿಟಿಗಾಗಿ 25 ಜನರಿದ್ದಾರೆ. ಡಿ.ಕೆ. ಶಿವಕುಮಾರ್ ಸರ್ಕಾರ ಇದನ್ನು ಗಂಭೀರ ಪರಿಗಣಿಸುವ ಮೂಲಕ ಖಾಲಿ ಹುದ್ದೆ ಭರ್ತಿ ಮಾಡಿ ಹಿಂದುಳಿದ ಭಾಗದ ಮಕ್ಕಳ ಉನ್ನತ ಶಿಕ್ಷಣಕ್ಕೆ ಅವಕಾಶ ಮಾಡಿಕೊಡಬೇಕಿದೆ.
ವಿಶ್ವವಿದ್ಯಾಲಯದಲ್ಲಿ ಬೋಧಕರ ಬಹುತೇಕ ಹುದ್ದೆ ಖಾಲಿಯಾಗಿವೆ. ರಾಜ್ಯ ಸರ್ಕಾರ ಶಿಕ್ಷಕರ ಖಾಲಿ ಹುದ್ದೆಗಳ ಮಾಹಿತಿ ಕೇಳಿದ್ದು, ಈಗಾಗಲೇ ಅಗತ್ಯ ಹುದ್ದೆ ಭರ್ತಿಗೆ ಪ್ರಸ್ತಾವನೆ ರವಾನಿಸಲಾಗಿದೆ. ಆದ್ಯತೆ ಆಧಾರದ ಮೇಲೆ ರಾಜ್ಯ ಸರ್ಕಾರ ಶ್ರೀ ಭರ್ತಿ ಮಾಡುವ ನಿರೀಕ್ಷೆ ಇದೆ.
— > ಪ್ರೊ.ಶಶಿಕಾಂತ ಎಸ್.ಉಡಿಕೇರಿ ಕುಲಪತಿ, ಗುಲ್ಬರ್ಗ ವಿವಿ
ರಾಜ್ಯ ಸರ್ಕಾರ ಸಾರ್ವಜನಿಕ ವಿಶ್ವವಿದ್ಯಾಲಯಗಳಲ್ಲಿನ 1000 ಬೋಧಕರ ಹುದ್ದೆ ಭರ್ತಿ ಮಾಡುವುದಾಗಿ ಹೇಳಿದೆ. ಹೀಗಾಗಿ ನಮ್ಮ ವಿವಿಗೆ ಕೇಳಿದ ಖಾಲಿ ಹುದ್ದೆಗಳ ಮಾಹಿತಿ ಉನ್ನತ ಶಿಕ್ಷಣ ಇಲಾಖೆಗೆ ಕಳುಹಿಸಲಾಗಿದೆ. ಶಿಕ್ಷಣದ ಗುಣಮಟ್ಟ ಕಾಯ್ದುಕೊಳ್ಳುವ ಅಗತ್ಯವಿದ್ದು, ಶೀಘ್ರದಲ್ಲಿ ಎಲ್ಲದಕ್ಕೂ ಸೂಕ್ತ ಪರಿಹಾರ ದೊರೆಯುವ ವಿಶ್ವಾಸವಿದೆ.
— > ಪ್ರೊ.ರಮೇಶ ಲಂಡನಕರ್ ಕುಲಸಚಿವ, ಗುಲ್ಬರ್ಗ ವಿವಿ