ಶಿಕ್ಷಕರ ನೇಮಕಾತಿ ಅಧಿಸೂಚನೆ  
ರಾಜ್ಯ

15 ಸಾವಿರ ಶಿಕ್ಷಕರ ನೇಮಕಾತಿ ಅಧಿಸೂಚನೆ ಪ್ರಕಟ: ಯಾವ ಜಿಲ್ಲೆಗೆ ಎಷ್ಟು ಹುದ್ದೆ? ಇಲ್ಲಿದೆ ಮಾಹಿತಿ

ಪ್ರಮುಖ ಮುಖ್ಯಾಂಶಗಳು

  • ಹಿಂದಿನ ನೇಮಕಾತಿಗೆ ಹೋಲಿಸಿದ್ದಲ್ಲಿ ಪ್ರಮುಖವಾಗಿ ಎರಡು ನಿಯಮಗಳನ್ನು ಬದಲಾವಣೆ ಮಾಡಲಾಗಿದೆ.
  • ವಿವಾಹಿತ ಮಹಿಳಾ ಅಭ್ಯರ್ಥಿಗಳು ತಂದೆ/ಪತಿಯ ಆದಾಯ ಪ್ರಮಾಣಪತ್ರವನ್ನು ಸಲ್ಲಿಸಬಹುದಾಗಿದೆ.
  • ಒಬ್ಬ ಅಭ್ಯರ್ಥಿಯು ಒಂದು ವೃಂದದಲ್ಲಿ ಒಂದೇ ಜಿಲ್ಲೆಯಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ.
ಬೆಂಗಳೂರು:

ಶಾಲಾ ಶಿಕ್ಷಣ ಇಲಾಖೆಯು ಸರ್ಕಾರಿ ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ 15 ಸಾವಿರ ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದೆ. ಹಿಂದಿನ ನೇಮಕಾತಿಗೆ ಹೋಲಿಸಿದ್ದಲ್ಲಿ ಪ್ರಮುಖವಾಗಿ ಎರಡು ನಿಯಮಗಳನ್ನು ಬದಲಾವಣೆ ಮಾಡಲಾಗಿದೆ. ವಿವಾಹಿತ ಮಹಿಳಾ ಅಭ್ಯರ್ಥಿಗಳು ತಂದೆ/ಪತಿಯ ಆದಾಯ ಪ್ರಮಾಣಪತ್ರವನ್ನು ಸಲ್ಲಿಸಬಹುದಾಗಿದೆ. ಮತ್ತೊಂದು ಅಂಶ, ಒಬ್ಬ ಅಭ್ಯರ್ಥಿಯು ಒಂದು ವೃಂದದಲ್ಲಿ ಒಂದೇ ಜಿಲ್ಲೆಯಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ.

2022ರ ನೇಮಕಾತಿ ಅಧಿಸೂಚನೆಯಲ್ಲಿ ಆದಾಯ ಪ್ರಮಾಣಪತ್ರದ ಸ್ಪಷ್ಟತೆ ಇಲ್ಲವಾದ್ದರಿಂದ ಸುಪ್ರೀಂಕೋರ್ಟ್‌ವರೆಗೂ ಪ್ರಕರಣ ದಾಖಲಾಗಿತ್ತು. ಹೀಗಾಗಿ, ಈ ಬಾರಿ ಆದಾಯ ಪ್ರಮಾಣಪತ್ರದಲ್ಲಿ ಮಿತಿ ಹೇರಿಲ್ಲ. ಕರ್ನಾಟಕ ನಾಗರಿಕ ಸೇವೆ- 1977 (ಸಾಮಾನ್ಯ ನೇಮಕಾತಿ) ನಿಯಮ 9ರ ಉಪನಿಯಮ (1ಬಿ) ಅನ್ವಯ ಪಾಲನೆ ಮಾಡಲಾಗುತ್ತದೆ ಎಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತ ವಿಕಾಸ್ ಕಿಶೋರ್ ಸುರಳ್ಕರ್ ಸ್ಪಷ್ಟಪಡಿಸಿದ್ದಾರೆ.
ಸಾಮಾನ್ಯ ವರ್ಗದವರಿಗೆ 40 ವರ್ಷ, ಒಬಿಸಿ 43 ಹಾಗೂ ಪರಿಶಿಷ್ಟರು ಮತ್ತು ಪ್ರವರ್ಗ-1, ಅಂಗವಿಕಲರಿಗೆ 45 ವರ್ಷ ನಿಗದಿ ಮಾಡಲಾಗಿದೆ.

ಒಂದು ವೃಂದದಲ್ಲಿ ಒಂದೇ ಅರ್ಜಿ:

ಆನ್‌ಲೈನ್‌ನಲ್ಲಿ ಒಂದೇ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅಭ್ಯರ್ಥಿಗಳು ಒಂದು ವೃಂದದ ಒಂದು ಹುದ್ದೆಗೆ ಒಂದು ಜಿಲ್ಲೆಯನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು. ಆದರೆ, ಒಂದೇ ಜಿಲ್ಲೆಯಲ್ಲಿ ಒಂದಕ್ಕಿಂತ ಹೆಚ್ಚು ವೃಂದದ ಹುದ್ದೆಗಳಿಗೂ ಅರ್ಜಿ ಸಲ್ಲಿಸಬಹುದು. ಬೇರೆ ಬೇರೆ ಜಿಲ್ಲೆಗಳಲ್ಲಿ ಬೇರೆ ಬೇರೆ ವೃಂದಕ್ಕೂ ಅರ್ಜಿ ನೀಡಬಹುದು.ಪ್ರತಿ ವೃಂದಕ್ಕೂ ಪ್ರತ್ಯೇಕ ಶುಲ್ಕ ನಿಗದಿ ಮಾಡಲಾಗಿದೆ. (ಉದಾ- ಪ್ರಾಥಮಿಕ ಶಾಲಾ ಶಿಕ್ಷಕ ಹುದ್ದೆಗೆ ಒಂದು ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಿದರೆ, ಮತ್ತೊಂದು ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸುವ ಹಾಗಿಲ್ಲ. ಆದರೆ, ಪ್ರೌಢ ಶಾಲಾ ಶಿಕ್ಷಕ ಹುದ್ದೆಗೆ ಮತ್ತೊಂದು ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಬಹುದು)

ಜಿಲ್ಲಾ ಹಂತದಲ್ಲಿ ನೇಮಕಾತಿ:

ಒಟ್ಟಾರೆ 15 ಸಾವಿರ ಹುದ್ದೆಗಳನ್ನು ಜಿಲ್ಲಾ ಹಂತದಲ್ಲಿ ಹಂಚಿಕೆ ಮಾಡಲಾಗಿದೆ. ಪ್ರಾಥಮಿಕ ಶಾಲೆಗಳಿಗೆ ಆಯಾ ಶೈಕ್ಷಣಿಕ ಜಿಲ್ಲಾವಾರು ಹಾಗೂ ಪ್ರೌಢ ಶಾಲೆಗಳಿಗೆ ವಿಭಾಗಾವಾರು ಅಧಿಸೂಚನೆ ಹೊರಡಿಸಲಾಗಿದೆ.

ಆ.18

ಎಲ್ಲ ಹುದ್ದೆಗಳಿಗೆ ಆ.18ರಿಂದ ಅರ್ಜಿ ಸಲ್ಲಿಸಬಹುದಾಗಿದ್ದು, ಸೆ.7 ಕೊನೆಯ ದಿನವಾಗಿದೆ. ಅ.5,6, 12, 13 ಹಾಗೂ 22, 23ರಂದು ಸ್ಪರ್ಧಾತ್ಮಕ ಪರೀಕ್ಷೆ ನಿಗದಿಯಾಗಿದೆ. ಪದವಿ, ಬಿ.ಇಡಿ ಹಾಗೂ ಟಿಇಟಿಗಳಲ್ಲಿ ಅರ್ಹತೆ ಪಡೆದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಯಾವ ವಿಷಯಗಳು?

ಕನ್ನಡ, ಆಂಗ್ಲ ಭಾಷೆ, ಕಲಾ ಶಿಕ್ಷಣ (ಕನ್ನಡ/ಇಂಗ್ಲಿಷ್ ಮಾಧ್ಯಮ), ಜೀವ ವಿಜ್ಞಾನ (ಕನ್ನಡ/ ಇಂಗ್ಲಿಷ್ ಮಾಧ್ಯಮ), ಗಣಕ ವಿಜ್ಞಾನ, ದೈಹಿಕ ಶಿಕ್ಷಣ (ಗ್ರೇಡ್-1).

ಅರ್ಜಿ ಸಲ್ಲಿಕೆ ಲಿಂಕ್


ಅರ್ಜಿ ಶುಲ್ಕ

ಸಾಮಾನ್ಯ, ಹಿಂದುಳಿದ ವರ್ಗದ ಅಭ್ಯರ್ಥಿಗಳು ಒಂದು ವೃಂದದ ಹುದ್ದೆಗೆ 750 ರೂ. ಒಂದೇ ವೃಂದದ ಎರಡು ಹುದ್ದೆಗೆ ಅರ್ಜಿ ಸಲ್ಲಿಸಿದಲ್ಲಿ 1,125 ರೂ. ಪಾವತಿಸಬೇಕು. ಪರಿಶಿಷ್ಟ, ಪ್ರವರ್ಗ-1, ಅಂಗವಿಕಲ ಅಭ್ಯರ್ಥಿಗಳಿಗೆ ಕ್ರಮವಾಗಿ 500 ಹಾಗೂ 750 ರೂ. ನಿಗದಿ ಮಾಡಲಾಗಿದೆ. ಎರಡಕ್ಕಿಂತ ಹೆಚ್ಚು ಹುದ್ದೆಗಳಿಗೆ ಹೆಚ್ಚುವರಿಯಾಗಿ ಪ್ರತಿ ವಿಷಯಕ್ಕೆ 375 ಹಾಗೂ 250 ರೂ. ಪಾವತಿಸಬೇಕಾಗುತ್ತದೆ.

ಹುದ್ದೆಗಳ ವಿವರ

ಜಿಲ್ಲಾವಾರು ಶಿಕ್ಷಕ ಹುದ್ದೆಗಳು