ಡಾ. ಶಿವಲಿಂಗಯ್ಯ  
ರಾಜ್ಯ

ನೆಫ್ರೋ ಯುರಾಲಜಿ ಸಂಸ್ಥೆಯಲ್ಲಿ ದಾಖಲೆಯ ಚಿಕಿತ್ಸೆ

ಪ್ರಮುಖ ಮುಖ್ಯಾಂಶಗಳು

  • * 24 ಗಂಟೆಗಳ ಅವಧಿಯಲ್ಲಿ ಮೂರು ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿ
  • * 17 ದಿನಗಳಲ್ಲಿ 10 ಮೂತ್ರಪಿಂಡ (ಕಿಡ್ನಿ) ಕಸಿ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗಿದೆ
ಬೆಂಗಳೂರು: ಬೆಂಗಳೂರಿನ ನೆಫ್ರೋ ಯುರಾಲಜಿ ಸಂಸ್ಥೆಯ ವೈದ್ಯರು ಕೇವಲ 24 ಗಂಟೆಗಳಲ್ಲಿ ಮೂರು ಮೂತ್ರಪಿಂಡ (ಕಿಡ್ನಿ) ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸುವ ಮೂಲಕ ಸಾಧನೆ ಮಾಡಿದ್ದಾರೆ.
ವೈದ್ಯರ ದಿನಾಚರಣೆ ಅಂಗವಾಗಿ ಆರೋಗ್ಯ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಜೀವಸಾರ್ಥಕತೆ ಸಂಸ್ಥೆಯಡಿ ನೋಂದಾಯಿಸಿ ಕೊಂಡ ರೋಗಿಗಳಿಗೆ ಆದ್ಯತೆ ಅನುಸಾರ ಸಂಸ್ಥೆಯಲ್ಲಿ ಕಸಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಈ ಸಾಧನೆಯ ಹಾದಿಯಲ್ಲಿ ಸಂಸ್ಥೆಯಲ್ಲಿ 17 ದಿನಗಳಲ್ಲಿ 10 ಮೂತ್ರಪಿಂಡ (ಕಿಡ್ನಿ) ಕಸಿ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. ಚಿಕಿತ್ಸೆ ಪಡೆದಿರುವ ಎಲ್ಲ 10 ಮಂಡಿಯೂ ಚೇತರಿಸಿಕೊಳ್ಳುತ್ತಿದ್ದಾರೆ.
ಹಾಲಿ ವ್ಯವಸ್ಥೆಯಡಿ ತಿಂಗಳಿಗೆ ಮೂರರಿಂದ ನಾಲ್ಕು ಕಸಿ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದ ವೈದ್ಯರು, ಹಗಲಿರುಳು ಕಾರ್ಯಾಚರಣೆ ನಡೆಸಿದ ಪರಿಣಾಮ ಅಧಿಕ ಸಂಖ್ಯೆಯಲ್ಲಿ ಕಸಿ ಶಸ್ತ್ರಚಿಕಿತ್ಸೆ ಸಾಧ್ಯವಾಗಿದೆ. ಸಂಸ್ಥೆಯ ನಿರ್ದೇಶಕರಾದ ಡಾ. ಶಿವಲಿಂಗಯ್ಯ ಅವರ ನೇತೃತ್ವದಲ್ಲಿ ಪ್ರಾಧ್ಯಾಪಕ ಡಾ. ಎಂ. ನಾಗಭೂಷಣ, ಯುರಾಲಜಿ ವಿಭಾಗದ ಮುಖ್ಯಸ್ಥ ಡಾ. ಸಿ. ಜಿ. ಶ್ರೀಧರ ಅವರನ್ನು ಒಳಗೊಂಡ ತಂಡ ಈ ಸಾಧನೆ ಮಾಡಿದೆ. ರಾಜ್ಯದಲ್ಲಿ ಮೂತ್ರಪಿಂಡದ ವೈಲ್ಯಕ್ಕೆ ಒಳಾದವರಲ್ಲಿ ಐದು ಸಾವಿರಕ್ಕೂ ಅಧಿಕ ಮಂದಿ ಅಂಗಾಂಗ ಕಸಿಗೆ ಎದುರು ನೋಡುತ್ತಿದ್ದಾರೆ.
ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಯಲ್ಲಿ ಸಂಸ್ಥೆ ತನ್ನದೇ ಆದ ಸಾಧನೆ ಮಾಡಿದೆ. ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಬಡ ರೋಗಿಗಳಿಗೆ ಮೂತ್ರಪಿಂಡ ಕಸಿ ಚಿಕಿತ್ಸೆ ನಡೆಸಲು ಉದ್ದೇಶಿಸಲಾಗಿದೆ. ಜನವರಿಯಿಂದ ಈವರೆಗೂ (6 ತಿಂಗಳಲ್ಲಿ)35 ರೋಗಿಗಳಿಗೆ ಕಸಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ಸಂಸ್ಥೆ ನಿರ್ದೇಶಕ ಡಾ. ಶಿವಲಿಂಗಯ್ಯ ತಿಳಿಸಿದ್ದಾರೆ.