ಮೈಸೂರಲ್ಲಿ ದಾಖಲೆ ಉಷ್ಣಾಂಶ  
ರಾಜ್ಯ

ಸಾಂಸ್ಕೃತಿಕ ನಗರಿ ಮೈಸೂರಲ್ಲಿ ದಾಖಲೆ ಉಷ್ಣಾಂಶ- Record temperature

ಬೆಂಗಳೂರು: ಮಳೆ ಕೊರತೆ ಮುಂದುವರಿದಿರುವ ಬೆನ್ನಲ್ಲೇ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ತಾಪಮಾನ ಹೆಚ್ಚಳವಾಗಿದೆ. ಇದರಿಂದ ಮಳೆಗಾಲದಲ್ಲೂ ಬೇಸಿಗೆಯಲ್ಲಿ ಕಂಡುಬರುವ ಸುಡು ಬಿಸಿಲಿನ ವಾತಾವರಣಕ್ಕೆ ಜನರು ಹೈರಾಣುಗೊಳ್ಳುತ್ತಿದ್ದಾರೆ.
8 ವರ್ಷದ ಬಳಿಕ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸೋಮವಾರ 34.2 ಡಿ.ಸೆ. ಉಷ್ಣಾಂಶ ದಾಖಲಾಗಿದೆ. 2018ರ ಸೆ.15ರಂದು 34.2 ಡಿ.ಸೆ.ಉಷ್ಣಾಂಶ ವರದಿಯಾಗಿತ್ತು. ಅದಾದ ಬಳಿಕ 2ನೇ ಬಾರಿಗೆ ಸೆಪ್ಟೆಂಬರ್ ಅವಧಿಯಲ್ಲಿ ಮೈಸೂರಿನಲ್ಲಿ ಅಧಿಕ ಉಷ್ಣಾಂಶ ಕಂಡುಬಂದಿದೆ. ವಾಡಿಕೆಯಂತೆ ಗರಿಷ್ಠ ತಾಪಮಾನದಲ್ಲಿ 29 ಡಿ.ಸೆ. ಉಷ್ಣಾಂಶ ದಾಖಲಾಗಬೇಕಿತ್ತು. ಆದರೆ, 34.2 ಡಿ.ಸೆ.ದಾಖಲಾಗಿದ್ದು, ವಾಡಿಕೆಗಿಂತ 5.2 ಡಿ.ಸೆ.ಅಧಿಕವಾಗಿದೆ ಎಂದು ರಾಜ್ಯ ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೂ ವಾಡಿಕೆಕ್ಕಿಂತ 4.3 ಡಿ.ಸೆ. ದಾಖಲಾಗಿದೆ.ವಾಡಿಕೆಯಂತೆ ಗರಿಷ್ಠ ತಾಪಮಾನದಲ್ಲಿ 29.1 ಡಿ.ಸೆ. ವರದಿಯಾಗಬೇಕಿತ್ತು. ಆದರೆ, 33.4 ಡಿ.ಸೆ.ಉಷ್ಣಾಂಶವು ಕಂಡುಬಂದಿದೆ. ಬೆಂಗಳೂರು, ಬೀದರ್, ಗದಗ, ಕಲಬುರಗಿ, ರಾಯಚೂರು, ಬೆಳಗಾವಿ, ಹಾವೇರಿ, ಕೊಪ್ಪಳ, ಬಾಗಲಕೋಟೆ, ವಿಜಯಪುರ, ಚಿತ್ರದುರ್ಗ, ಧಾರವಾಡ, ಹೊನ್ನಾವರ, ಕಾರವಾರ ಮತ್ತು ಮಂಗಳೂರಿನಲ್ಲಿ ವಾಡಿಕೆಕ್ಕಿಂತ 4 ಡಿ.ಸೆ. ತಾಪಮಾನ ದಾಖಲಾಗಿದೆ.
‘ಎಲ್ ನಿನೋ’ ಪರಿಣಾಮದಿಂದ ಈಗಾಗಲೇ ಮುಂಗಾರು ದುರ್ಬಲವಾಗಿದೆ. ಇದರಿಂದ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನದಲ್ಲಿ ಹೆಚ್ಚಿನ ಉಷ್ಣಾಂಶ ಕಂಡುಬರುತ್ತಿದ್ದು, ಜನರಿಗೆ ಬಿಸಿಲು ಜತೆಗೆ ಸೆಖೆಯೂ ಅನುಭವವಾಗುತ್ತಿದೆ.
ಅಕ್ಟೋಬರ್ ಮತ್ತು ಡಿಸೆಂಬರ್ ವೇಳೆಗೆ ಬಿಸಿಲಿನ ತೀವ್ರತೆ ಇನ್ನಷ್ಟು ಜಾಸ್ತಿಯಾಗುವುದರಿಂದ ಅಂತರ್ಜಲ ಮಟ್ಟ ಮತ್ತಷ್ಟು ಕುಸಿತವಾಗಲಿದೆ. ಅಣೆಕಟ್ಟೆಗಳಲ್ಲಿ ನೀರು ಖಾಲಿಯಾಗಲಿದ್ದು, ಕುಡಿಯುವ ನೀರು, ಜಾನುವಾರುಗಳ ಮೇವಿಗೆ ಪರದಾಟವಾಗಲಿದೆ ಎಂದು ಹವಾಮಾನ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.