ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ಜಗದೀಶ್ವರಿ ಅ. ನಾಸಿ, ಸರಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ಪಾಲಕ ಸೈದಾ ಬಾಗವನ್, ಸಿದ್ದಾರ್ಥ್ ಚಿಮ್ಮುಯಿದ್ಲಾಯಿ, ಯಲ್ಲಾಲಿಂಗ ಡಾಂಗೆ ಉಪಸ್ಥಿತರಿದ್ದರು.
ಕಲಬುರಗಿ -ವಿದ್ಯಾರ್ಥಿಗಳು ಕೇವಲ ಅಂಕಗಳ ಬೆನ್ನತ್ತದೆ, ತಮ್ಮಲ್ಲಿರುವ ಸುಪ್ತ ಕಲಾ ಪ್ರತಿಭೆಯನ್ನು ಬೆಳೆಸಿಕೊಳ್ಳಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಬುರಗಿ ವಲಯ ಜಂಟಿ ನಿರ್ದೇಶಕ ಬಸವರಾಜ ಹೂಗಾರ್ ಅವರು ಹೇಳಿದರು.
ನಗರದಲ್ಲಿ ಶುಕ್ರವಾರ ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ವಿಶೇಷ ಘಟಕ ಯೋಜನೆಯಡಿ ಕಲಿಕಾ ತರಬೇತಿ ಪಡೆದ ಡಾ. ಬಿ.ಆರ್ ಅಂಬೇಡ್ಕರ್ ಸರಕಾರಿ ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯ ವಿದ್ಯಾರ್ಥಿನಿಯರಿಂದ ಸುಗಮ ಸಂಗೀತ ಗಾಯಕ ಕಾರ್ಯಕ್ರಮ ಹಾಗೂ ಗಿರಿಜನ ಉಪಯೋಜನೆಯಡಿ ಕಲಿಕಾ ತರಬೇತಿ ಪಡೆದ ಸರಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿನಿಯರಿಂದ ಜಾನಪದ ಗಾಯನ ಕಾರ್ಯಕ್ರಮ ಉದ್ಘಟಿಸಿ ಮಾತನಾಡಿದರು.
ಇತ್ತೀಚಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪೋಷಕರು ಮತ್ತು ಶಿಕ್ಷಣ ವ್ಯವಸ್ಥೆ ಮಕ್ಕಳನ್ನು ಕೇವಲ ಅಂಕಗಳಿಗಾಗಿ ಒತ್ತಡಕ್ಕೆ ಸಿಲುಕಿಸುತ್ತಿದೆ. ಇತ್ತೀಚೆಗೆ ಜೆ.ಇ.ಇ ಪರೀಕ್ಷೆಯಲ್ಲಿ 300ಕ್ಕೆ 300 ಅಂಕ ಪಡೆದ ವಿದ್ಯಾರ್ಥಿಯೊಬ್ಬನ ಉದಾಹರಣೆ ನೀಡಿದ ಅವರು, ಅಪಾರ ಅಂಕ ಗಳಿಸಿದರೂ ಸಂಭ್ರಮಿಸಲು ತಿಳಿಯದಷ್ಟು ಯಾಂತ್ರಿಕವಾಗುತ್ತಿರುವ ಬದುಕು ಆತಂಕಕಾರಿ ಎಂದು ಕಳವಳ ವ್ಯಕ್ತಪಡಿಸಿದರು.
ಬದುಕಿನಲ್ಲಿ ಎಷ್ಟೇ ಒತ್ತಡಗಳಿದ್ದರೂ ಅದನ್ನು ಎದುರಿಸುವ ಶಕ್ತಿಯನ್ನು ಸಂಗೀತ ಮತ್ತು ಕಲೆ ನೀಡುತ್ತದೆ. ಕಲೆ ಇಲ್ಲದ ಮನುಷ್ಯನ ಬದುಕು ಬರಡಾಗುತ್ತದೆ. ಸಂಗೀತಗಾರ ಅಥವಾ ಕಲಾವಿದ ಸಮಾಜವನ್ನು ನೋಡುವ ದೃಷ್ಟಿಕೋನವೇ ಭಿನ್ನವಾಗಿರುತ್ತದೆ. ಶಿಬಿರದಲ್ಲಿ ಕಲಿತದ್ದನ್ನು ಇಲ್ಲಿಗೇ ಬಿಡದೆ ಪ್ರತಿದಿನ ಅಭ್ಯಾಸ ಮಾಡಿ ಬೆಳೆಸಿಕೊಳ್ಳಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ತಿಳಿಸಿದರು.
ಡಾ. ಬಿಆರ್ ಅಂಬೇಡ್ಕರ್ ಸರಕಾರಿ ಮೆಟ್ರಿಕ ನಂತರದ ಬಾಲಕಿಯರ ವಸತಿ ನಿಲಯ ಪಾಲಕಿ ಸಂಗೀತ ಜಿ. ಅಕ್ಕಾ ಅವರು ಮಾತನಾಡಿ ಸಂಗೀತ ತರಬೇತಿ ಪಡೆದ ವಿದ್ಯಾರ್ಥಿನಿಯರು ಮುಂಬರುವ ದಿನಗಳಲ್ಲಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಿದ್ಧರಿದ್ದಾರೆ. ವಿದ್ಯಾರ್ಥಿನಿಯರ ಸುಪ್ತ ಪ್ರತಿಭೆಗೆ ಸೂಕ್ತ ವೇದಿಕೆ ಕಲ್ಪಿಸಿಕೊಡುವ ಭರವಸೆಯನ್ನು ನೀಡಿದರು.