ಆನೇಕಲ್ ನ್ಯಾಯಾಲಯಕ್ಕೆ ಆರೋಪಿ ಮೋಹನ್ ಬಾಬು ಎಂಬಾತನನ್ನು ಹಾಜರುಪಡಿಸಿದ ಪೊಲೀಸರು.
ಆನೇಕಲ್ : ಭಾನುವಾರ ಅಪಹರಣವಾಗಿ. ತಮಿಳುನಾಡಿನಲ್ಲಿ ಕೊಲೆಯಾಗಿದ್ದ ರಿಯಲ್ ಎಸ್ಟೇಟ್ ಏಜೆಂಟ್ ಗೋಪಿ ಅಂತ್ಯಕ್ರಿಯೆ ಆನೇಕಲ್ನಲ್ಲಿ ನೆರವೇರಿತು. ಮಂಗಳವಾರ ಬೆಳಗ್ಗೆ ತಮಿಳುನಾಡಿನ ಕೃಷ್ಣಗಿರಿ ಸರ್ಕಾರಿ ಆಸ್ಪತ್ರೆಯಿಂದ ಆನೇಕಲ್ ತಾಲೂಕಿನ ಗೋಪಿ ಅವರ ನಿವಾಸ ಹೊನ್ನಕಳಸಾಪುರಕ್ಕೆ ಪೊಲೀಸ್ ಭದ್ರತೆಯಲ್ಲಿ ಶವ ತರಲಾಯಿತು. ಬಳಿಕ ಗ್ರಾಮದ ರುದ್ರಭೂಮಿಯಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.
ಸಿಐಡಿ ತನಿಖೆಗೆ ಆದೇಶ-: ಸೋಮವಾರ ಆನೇಕಲ್ ಪೊಲೀಸ್ ಠಾಣೆ ಬಳಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಚಿಕ್ಕಬಳ್ಳಾಪುರ ಶಾಸಕ ಪ್ರದಿಪ್ ಈಶ್ವರ್ ಭೇಟಿ ನೀಡಿದ್ದರು, ಮಂಗಳವಾರ ಈ ಕುರಿತು ಸದನದಲ್ಲಿ ಪ್ರದಿಪ್ ಈಶ್ವರ್ ಪ್ರಸ್ತಾವನೆ ಮಾಡಿದ್ದರಿಂದ ಪ್ರಕರಣವನ್ನು ಸಿಐಡಿಗೆ ನೀಡಲು ಗೃಹ ಸಚಿವರು ಒಪ್ಪಿದ್ದಾರೆ.
ಗೋಪಿ ಕೊಲೆಗೆ ಸುಪಾರಿ ನೀಡಿ, ಈಗಾಗಲೇ ಬಂಧನವಾಗಿರುವ ರಿಯಲ್ ಎಸ್ಟೇಟ್ ಉದ್ಯಮಿ ಮೋಹನ್ ಬಾಬು ಮನೆಯು ಗೋಪಿ ಮನೆ ಎದುರಿಗೆ ಇರುವ ಕಾರಣ ಕೆಎಸ್ಆರ್ಪಿ ಗಡಿ ಹಾಗೂ ಆನೇಕಲ್ ಇನ್ಸ್ಪೆಕ್ಟರ್ ತಿಪ್ಪೇಸ್ವಾಮಿ ನೇತೃತ್ವದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಆರೋಪಿ ಮೋಹನ್ ಬಾಬು-ಗೆ ನ್ಯಾಯಾಧೀಶರು 14 ದಿನ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.
ಆರೋಪಿಗಳ ಪತ್ತೆಯಿಲ್ಲ: ಗೋಪಿಯನ್ನು ಕರ್ಪೂರು ಗ್ರಾಮದಲ್ಲಿ ಕಾರಿನಲ್ಲಿ ಅಪಹರಣ ಮಾಡಿದ ಬಳಿಕ ರಾಜ್ಯದ ಗಡಿ ತಮಿಳುನಾಡಿನ ಡೆಂಕಣಿಕೋಟೆಯ ಗಿರಿಯಾನಪಲ್ಲಿಯಲ್ಲಿ ಕೊಲೆ ಮಾಡಿ ಮೃತ ದೇಹವನ್ನು ಎಸೆದು ಹೋಗಿದ್ದರು, ಏಳು ತಂಡ ರಚನೆ ಮಾಡಿದ್ದ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಆದರೆ ಇದುವರೆಗೂ ಆರೋಪಿಗಳ ಪತ್ತೆ ಆಗಿಲ್ಲ.