Ready to provide quality education and facilities in schools 
ರಾಜ್ಯ

ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ, ಸೌಲಭ್ಯ ಕಲ್ಪಿಸಲು ಸಿದ್ಧ

ಶಿಡ್ಲಘಟ್ಟ: ಜಿಲ್ಲೆಯಾದ್ಯಂತ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಒದಗಿಸುವುದು, ಸೌಲಭ್ಯ ಒದಗಿಸುವ ಮೂಲಕ ಸಬಲೀಕರಣ ಮಾಡುವಲ್ಲಿ ಇಲಾಖೆಯು ಸದಾ ಸನ್ನದ್ಧವಾಗಿದೆ. ಈಗಾಗಲೇ ಅನೇಕ ಶಾಲೆಗಳಲ್ಲಿ ಇಂಗ್ಲೀಷ್​, ದ್ವಿಭಾಷಾ ಮಾಧ್ಯಮದಲ್ಲಿ ತರಗತಿ ನಡೆಸಲಾಗುತ್ತಿದೆ ಎಂದು ಜಿಪಂ ಸಿಇಒ ಡಾ.ನವೀನ್​ಭಟ್​ ತಿಳಿಸಿದರು.
ತಾಲೂಕಿನ ಸುಗಟೂರು ಗ್ರಾಮದ ಸರ್ಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿರುವ ಬೇಸಿಗೆ ಶಿಬಿರದಲ್ಲಿ ಶನಿವಾರ ಮಕ್ಕಳೊಂದಿಗೆ ಸಂವಾದ ನಡೆಸಿ ಮಾತನಾಡಿದರು.
ಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸಿಕೊಳ್ಳಲು ಈಗಾಗಲೇ ಜಿಲ್ಲೆಯಾದ್ಯಂತ ಬೇಸಿಗೆ ಶಿಬಿರ ನಡೆಸಲಾಗುತ್ತಿದೆ.ಶಿಡ್ಲಟ್ಟ ತಾಲೂಕಿನಲ್ಲಿ ಈಗ 3 ಶಾಲೆಗಳಲ್ಲಿ ಮಾತ್ರ ಶಿಬಿರ ನಡೆಸಲಾಗುತ್ತಿದ್ದು ಇನ್ನೂ ಹೆಚ್ಚಿನ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಶ್ರೀವೇ ಶಿಬಿರ ಆರಂಭಿಸಬೇಕು. ಇದೇ ತಿಂಗಳ 22 ರಂದು ಜಿಲ್ಲೆಯಾದ್ಯಂತ ದಾಖಲಾತಿ ಆಂದೋಲನ ಮಾಡಲಾಗುತ್ತಿದ್ದು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾತಿ ಮಾಡಿಕೊಳ್ಳಲು ಶಾಲೆಗಳಿಗೆ ಸೂಚಿಸಲಾಗಿದೆ ಎಂದರು.
ಸುಗಟೂರು ಶಾಲೆಯಲ್ಲಿನ ಭೌತಿಕ ಸೌಲಭ್ಯ ವೀಸಿ, ಶೈಕ್ಷಣಿಕ ಚಟುವಟಿಕೆಗಳೆಲ್ಲದರ ಮಾಹಿತಿ ಪಡೆದು ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ಶೈಕ್ಷಣಿಕ ವರ್ಷಾರಂಭದಿಂದಲೇ ಎಲ್​ಕೆಜಿ, ಯುಕೆಜಿ ಆರಂಭಿಸಲು ಅನುಮತಿ ಕೊಡಿಸುವ ಭರವಸೆ ನೀಡಿದರು. ಶಾಲೆಯಲ್ಲಿ ಗುಣಮಟ್ಟದ ಆಕರ್ಷಕ ಜಿರಾಫೆ ಡೆಸ್ಕ್​, ಪ್ರಯೋಗಾಲ ನೋಡಿ ಸಂತಸ ವ್ಯಕ್ತಪಡಿಸಿ ಮುಂದಿನ ಶೈಕ್ಷಣಿಕ ವರ್ಷದಿಂದ ಟಿವಿ, ಇಂಟರಾಕ್ಟೀವ್​ ಬೋರ್ಡ್​ಗಳ ಮೂಲಕ ಬೋಧಿಸುವ ಶಿಕ್ಷಕರಿಗೆ ಒಂದೇ ರೀತಿಯ ವೀಡಿಯೋ, ವಿಷಯ ಬೋಧನೆಗೆ ಒಂದು ಸಾಮಾನ್ಯ ವೇಳಾಪಟ್ಟಿ ತಯಾರಿಸಲಾಗುವುದು ಎಂದರು.
ಮುಖ್ಯಶಿಕ್ಷಕ ಎಚ್​.ಎಸ್​.ರುದ್ರೇಶಮೂರ್ತಿ ಮಾತನಾಡಿ, ಶಿಬಿರದಿಂದ ಮಕ್ಕಳಲ್ಲಿ ಮೌಲ್ಯಗಳು, ವ್ಯಕ್ತಿತ್ವ ನಿರ್ಮಾಣ, ದೇಶಭಕ್ತಿ, ದೇಶಾಭಿಮಾನ ಮೂಡಿಸಲು ಪೂರಕವಾದ ಅನೇಕ ಚಟುವಟಿಕೆಗಳನ್ನು ರೂಪಿಸಿಕೊಳ್ಳಲಾಗಿದೆ ಎಂದರು.
ಇಂಗ್ಲೀಷ್​ನಲ್ಲಿ ಭಾಷಣ, ವೇದಗಣಿತದ ಲೆಕ್ಕ ಮಾಡಿಸಿದರು. ಕರ್ನಾಟಕ ಭೂಪಟದಲ್ಲಿ ವಿವಿಧ ಸ್ಥಳಗಳನ್ನು ಗುರುತಿಸಲು ಹೇಳಿದರು.ಉಚಿತ ನೋಟ್​ಪುಸ್ತಕ, ಮೌಲ್ಯಶಿಕ್ಷಣದ ಕಿರು ಹೊತ್ತಿಗೆ, ಕರ್ನಾಟಕ ಮ್ಯಾಪ್​ ವಿತರಿಸಲಾಯಿತು.
ಬಿಆರ್​ಪಿ ವೇಣುಮಾಧವಿ, ಸಂಪನ್ಮೂಲ ವ್ಯಕ್ತಿ ಭರತನಾಟ್ಯ ಕಲಾವಿದೆ ಅನನ್ಯ, ಪಿಡಿಒ ಮಮತಾ, ಎಸ್​ಡಿಎಂಸಿ ಅಧ್ಯಕ್ಷ ವೆಂಕಟೇಶ್​, ಮುಖಂಡರಾದ ಸತೀಶ್​, ಶಿವಶಂಕರಪ್ಪ, ದೇವರಾಜು, ನಾರಾಯಣಸ್ವಾಮಿ, ಅಶೋಕ್​, ನಾಗೇಶ್​ಗೌಡ, ಶಿಕ್ಷಕ ಎ.ಬಿ.ನಾಗರಾಜ, ಮತ್ತಿತರರು ಇದ್ದರು.