ಬೆಂಗಳೂರು: ಮಕ್ಕಳಲ್ಲಿ ಹೆಚ್ಚುತ್ತಿರುವ ಡಿಜಿಟಲ್ ವ್ಯಸನ, ಮೊಬೈಲ್ ಬಳಕೆ ಚಟಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಮುತುವರ್ಜಿಯಿಂದಾಗಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ರಾಜ್ಯದ ಎಲ್ಲ ಸರ್ಕಾರಿ, ಅನುದಾನಿತ ಖಾಸಗಿ ಶಾಲೆಗಳಲ್ಲಿ ಪ್ರತಿ ದಿನ ಬೆಳಗ್ಗೆ ಪ್ರಾರ್ಥನೆ ವೇಳೆ ವಿದ್ಯಾರ್ಥಿಗಳಿಂದ 10-15 ನಿಮಿಷ ಕನ್ನಡ ದಿನಪತ್ರಿಕೆ ಓದಿಸುವುದು ಕಡ್ಡಾಯವಾಗಲಿದೆ. ಈ ಸಂಬಂಧ ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಇಂದಿನ ಡಿಜಿಟಲ್ ಯುಗದಲ್ಲಿ ಮಕ್ಕಳು ಇಂಟರ್ ನೆಟ್ ಶಿಕ್ಷಣ, ಮನರಂಜನೆ ಹಾಗೂ ಸಾಮಾಜಿಕ ಜಾಲತಾಣಗಳಿಗೆ ಹೆಚ್ಚಿನ ಸಮಯಾವಕಾಶ ನೀಡು ತ್ತಿದ್ದಾರೆ. ಇದರ ಜತೆಗೆ ಅತಿಯಾದ ಮೊಬೈಲ್ ಬಳಕೆಯಿಂದ ಮಕ್ಕಳಲ್ಲಿ ಜ್ಞಾಪಕ ಶಕ್ತಿ ಕೊರತೆ, ಶ್ರವಣದೋಷ ಮತ್ತು ದೈಹಿಕ ಚಟುವಟಿಕೆಗಳಲ್ಲಿ ಆಸಕ್ತಿ ಕುಂದುತ್ತಿದೆ. ಹೀಗಾಗಿ ಶಾಲೆಗಳಲ್ಲಿ ಪ್ರತಿ ದಿನ ಕನಿಷ್ಠ 10ರಿಂದ 15 ನಿಮಿಷ ದಿನಪತ್ರಿಕೆ ಓದುವ ಅಭ್ಯಾಸ ಬೆಳೆಸಿಕೊಂಡರೆ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ, ಪ್ರಚಲಿತ ವಿದ್ಯಮಾನಗಳ ಸಾಮಾನ್ಯ ಜ್ಞಾನ ವೃದ್ಧಿಸಿಕೊಳ್ಳುವ ಜತೆಯಲ್ಲೇ ಶಬ್ದಕೋಶ ಜ್ಞಾನ, ಭಾಷಾ ಶೈಲಿ ಮತ್ತು ಬರವಣಿಗೆಯ ಕೌಶಲ ಸುಧಾರಿಸಿಕೊಳ್ಳುವುದಕ್ಕೆ ಸಹಕಾರಿಯಾಗಲಿದೆ.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಶಾಲಾ ಶಿಕ್ಷಣ ಇಲಾಖೆಗೆ ಈ ಕುರಿತು ಶಿಫಾರಸು ಮಾಡಿತ್ತು. ಆ ಮನವಿಯ ಅಂಶಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಾಥಮಿಕ ಶಿಕ್ಷಣ ನಿರ್ದೇಶಕರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ಎಲ್ಲೆಲ್ಲಿ ಅನ್ವಯ?: ಎಲ್ಲ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆ, ಸರ್ಕಾರದ ವಿವಿಧ ಇಲಾಖೆಗಳಿಂದ ನಡೆಯುತ್ತಿರುವ ವಸತಿ ಶಾಲೆ, ನಿಲಯಗಳು/ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ನಿತ್ಯ ಕನ್ನಡ ದಿನಪತ್ರಿಕೆ ಓದುವುದು ಕಡ್ಡಾಯವಾಗಲಿದೆ.
ಕರ್ನಾಟಕ 3ನೇ ರಾಜ್ಯ
ನಿತ್ಯ ಶಾಲೆಗಳಲ್ಲಿ ದಿನಪತ್ರಿಕೆ ಓದುವುದನ್ನು ಉತ್ತರಪ್ರದೇಶ ಮತ್ತು ರಾಜಸ್ಥಾನ ಸರ್ಕಾರಗಳು ಈಗಾಗಲೇ ಜಾರಿಗೊಳಿಸಿವೆ. ಇದೀಗ 3ನೇ ರಾಜ್ಯವಾಗಿ ಕರ್ನಾಟಕ ಈ ಸಾಲಿಗೆ ಸೇರುತ್ತಿದೆ.
ಪ್ರಚಲಿತ ವಿದ್ಯಮಾನಗಳನ್ನು ತಿಳಿದುಕೊಳ್ಳುವ ಮೂಲಕ ಸಾಮಾನ್ಯ ಜ್ಞಾನ ವೃದ್ಧಿಸಿಕೊಳ್ಳಲು ಹಾಗೂ ಮಕ್ಕಳಲ್ಲಿ ಓದಿನ ಆಸಕ್ತಿ ಮೂಡಿಸಲು ದಿನಪತ್ರಿಕೆ ಓದು ಹೆಚ್ಚು ಸಹಕಾರಿಯಾಗಿದೆ. ಒಂದು ಬಾರಿ ಪತ್ರಿಕೆ ಓದುವುದನ್ನು ಆರಂಭಿಸಿದರೆ ಮಕ್ಕಳು ಮೊಬೈಲ್ನಿಂದ ದೂರ ಉಳಿಯಲು ಕಾರಣವಾಗಬಹುದು ಎಂಬುದು ಇಲಾಖೆ ಉದ್ದೇಶ.
| ಮಧು ಬಂಗಾರಪ್ಪ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ