ಮದ್ದೂರು ತಾಲೂಕಿನ ಗಡಿ ಗ್ರಾಮವಾದ ಯಡವನಹಳ್ಳಿಯ ರೈತ ಕವಿ ಕ್ರಾಂತಿಸಿಂಹ ಮನೆಯಲ್ಲಿ ಆರಂಭಿಸಿರುವ ಗ್ರಂಥಾಲಯವನ್ನು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಉದ್ಘಾಟಿಸಿದರು. ಸಿ.ಎಂ.ಕ್ರಾಂತಿಸಿಂಹ, ಚಿಕ್ಕಸ್ವಾಮಿ, ಕುಮಾರ್‌ಕೊಪ್ಪ, ಚಂದ್ರಶೇಖರ್, ಚನ್ನಮ್ಮಚನ್ನೇಗೌಡ ಇದ್ದರು. 
ರಾಜ್ಯ

ಪುಸ್ತಕ ಓದಿನಿಂದ ಗೌರವ, ಘನತೆ ಪ್ರಾಪ್ತಿ

* ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಅಭಿಮತ
* ಯಡವನಹಳ್ಳಿಯಲ್ಲಿ ಮನೆಗೊಂದು ಗ್ರಂಥಾಲಯ ಅನುಷ್ಠಾನ
ಮದ್ದೂರು: ಪ್ರತಿಯೊಂದು ಮನೆಯಲ್ಲಿಯು ಗ್ರಂಥಾಲಯಗಳು ಇರಲೇಬೇಕು. ಪುಸ್ತಕಗಳು ಬೌದ್ಧಿಕ ಆರೋಗ್ಯ ಕಾಪಾಡುವುದರ ಜತೆಗೆ ಸಮಾಜದಲ್ಲಿ ನಮಗೊಂದು ಘನತೆ ಮತ್ತು ಗೌರವ ತಂದುಕೊಡುತ್ತವೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ತಿಳಿಸಿದರು.
ತಾಲೂಕಿನ ಯಡವನಹಳ್ಳಿ ಗ್ರಾಮದಲ್ಲಿ ಭಾನುವಾರ ಕರ್ನಾಟಕ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ, ಮಂಡ್ಯ ಜಿಲ್ಲಾ ಜಾಗೃತಿ ಸಮಿತಿ ವತಿಯಿಂದ ಆಯೋಜಿಸಿದ್ದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭದಲ್ಲಿ ಗ್ರಂಥಾಲಯ ಉದ್ಘಾಟಿಸಿ ಮಾತನಾಡಿದರು.
ತಾಲೂಕಿನ ಗಡಿ ಗ್ರಾಮವಾದ ಯಡವನಹಳ್ಳಿಯ ರೈತ ಕವಿ ಸಿ.ಎಂ.ಕ್ರಾಂತಿಸಿಂಹ ನಿವಾಸದಲ್ಲಿ ಗ್ರಂಥಾಲಯ ಸ್ಥಾಪಿಸಿ ಗ್ರಾಮಿಣ ಭಾಗದ ಜನರಿಗೆ ಪ್ರೇರಣೆಯಾಗಿದ್ದಾರೆ. ಕರುನಾಡಿನ ಪ್ರತಿಯೊಂದು ಮನೆಯಲ್ಲಿಯೂ ಗ್ರಂಥಾಲಯ ಸ್ಥಾಪಿಸಬೇಕೆಂಬುದು ನನ್ನ ಆಶಯ ಎಂದರು.
ನಾ ಮೆಚ್ಚಿದ ಪುಸ್ತಕ ಕುರಿತು ಮಾತನಾಡಿದ ಮನ್ಮುಲ್ ಮಾಜಿ ನಿರ್ದೇಶಕ ಡಾ.ಕುಮಾರ್ ಕೊಪ್ಪ, ರೈತ ಕವಿ ಸಿ.ಎಂ.ಕ್ರಾಂತಿಸಿಂಹ ಬರೆದಿರುವ ಅರಿವಿನ ನಡೆ ಕವನ ಸಂಕಲನದಲ್ಲಿ 66 ಕವನಗಳಿವೆ ಒಂದಕ್ಕಿಂತ ಒಂದು ಉತ್ತಮವಾಗಿವೆ. ಈ ಪುಸ್ತಕ ಸಂಪೂರ್ಣ ಕನ್ನಡ ಮಯವಾಗಿರುವುದು ಇದರ ಹಿರಿಮೆಯಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಸಾಹಿತಿಗಳು ಯಾವಾಗಲೂ ಜೀವಪರವಾಗಿರಬೇಕು. ವಿದ್ಯಾರ್ಥಿ-ಯುವಜನರು ತಮ್ಮ ಮನೆಗಳಲ್ಲಿ ಗ್ರಂಥಾಲಯಗಳನ್ನು ಸ್ಥಾಪಿಸಬೇಕು ಎಂದು ಸಲಹೆ ನೀಡಿದರು.
ಮಂಡ್ಯದ ವಿಕಸನ ನಗರ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ನಿರ್ದೇಶಕ ಮಹೇಶ್ ಚಂದ್ರಗುರು ಮನೆಗೊಂದು ಗ್ರಂಥಾಲಯ ಕರಪತ್ರ ಬಿಡುಗಡೆಗೊಳಿಸಿದರು. ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ, ಕನ್ನಡ ಪುಸ್ತಕ ಪ್ರಾಧಿಕಾರದ ಜಿಲ್ಲಾ ಜಾಗೃತಿ ಸಮಿತಿ ಸಂಚಾಲಕ ಕಾರಸವಾಡಿ ಮಹಾದೇವ ಅಧ್ಯಕ್ಷತೆ ವಹಿಸಿದ್ದರು.
ಚನ್ನಮ್ಮಚನ್ನೇಗೌಡ, ಸಾಹಿತಿ ಸಿ.ಎಂ.ಕ್ರಾಂತಿಸಿಂಹ, ಜಾಗೃತಿ ಸಮಿತಿ ಸದಸ್ಯರಾದ ಚಿಕ್ಕಸ್ವಾಮಿ, ಅನಿಲ್ಕುಮಾರ್ ಅಬಲವಾಡಿ, ಚಂದ್ರಶೇಖರ, ಉಮೇಶ್, ಟಿ.ಎಂ.ರಾಜಶೇಖರ್, ಜಿ.ಆರ್. ನವೀನ್‌ಕುಮಾರ್ ಗ್ರಾಮಸ್ಥರಿದ್ದರು.