ಚಿನ್ನಸ್ವಾಮಿ ಕ್ರೀಡಾಂಗಣ 
ರಾಜ್ಯ

ಆರ್‌ಸಿಬಿ ತವರು ಮೈದಾನ ಗೊಂದಲಕ್ಕೆ ಇಂದು ತೆರೆ?: ಇತರ ಫ್ರಾಂಚೈಸಿಗಳ ಆತಿಥ್ಯಕ್ಕೂ ಕೆಎಸ್‌ಸಿಎ ಆಸಕ್ತಿ

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಹಾಗೂ ಐಪಿಎಲ್ (IPL) ಪಂದ್ಯಗಳ ಆಯೋಜನೆಗೆ ರಾಜ್ಯ ಸರ್ಕಾರ ಷರತ್ತು ಬದ್ಧ ಅನುಮತಿ ನೀಡಿದರೂ, ಹಾಲಿ ಚಾಂಪಿಯನ್ ಆರ್‌ಸಿಬಿ (RCB) ತಂಡ ಮುಂಬರುವ 19ನೇ ಆವೃತ್ತಿಯಲ್ಲಿ ತನ್ನ ತವರು ಪಂದ್ಯಗಳನ್ನು ಬೆಂಗಳೂರಿನಲ್ಲಿ ಆಡುವ ನಿಲುವು ಇನ್ನೂ ಅಸ್ಪಷ್ಟವಾಗಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ, KSCA) ಉದ್ಯಾನನಗರಿಯಲ್ಲಿ ಐಪಿಎಲ್ ಪಂದ್ಯಗಳ ಆಯೋಜನೆಗೆ ಫ್ರಾಂಚೈಸಿ ಮನವೊಲಿಸುವ ಕಸರತ್ತು ನಡೆಸಿದ್ದು, ಆರ್‌ಸಿಬಿ ಆಡಲು ಒಪ್ಪದಿದ್ದರೆ ಇತರ ಮೂರು ಐಪಿಎಲ್ ಫ್ರಾಂಚೈಸಿಗಳು ತನ್ನ ತವರು ಪಂದ್ಯಗಳನ್ನು ಬೆಂಗಳೂರಿನಲ್ಲಿ ಆಡುವ ಆಸಕ್ತಿ ವ್ಯಕ್ತಪಡಿಸಿವೆ ಎನ್ನಲಾಗಿದೆ.
ಚಿನ್ನಸ್ವಾಮಿಯಲ್ಲಿ ಪಂದ್ಯಗಳ ಆಯೋಜನೆ ಕುರಿತು ಕಳೆದ ಕೆಲ ತಿಂಗಳಿನಿಂದ ತಲೆದೋರಿದ ಅನಿಶ್ಚತತೆಗೆ ಸರ್ಕಾರ ತಾತ್ಕಾಲಿಕ ರಿಲೀಫ್ ನೀಡಿದೆ. ಇದರೊಂದಿಗೆ ಉದ್ಯಾನನಗರಿಯಲ್ಲಿ ಅಂತಾರಾಷ್ಟ್ರೀಯ ಹಾಗೂ ಐಪಿಎಲ್ ಪಂದ್ಯಗಳನ್ನು ಮತ್ತೆ ಆಯೋಜಿಸುವ ಕೆಎಸ್‌ಸಿಎ ಪ್ರಯತ್ನಗಳು ಲಿಸಿವೆ. ಆದರೆ ಪ್ರಸ್ತುತ ಚಿನ್ನಸ್ವಾಮಿ ಕ್ರೀಡಾಂಗಣದ ಆವರಣದಲ್ಲಿ ನಡೆಯುತ್ತಿರುವ ದುರಸ್ತಿ (ಸಿವಿಲ್) ಕಾರ್ಯಗಳು ಪೂರ್ಣವಾಗುವವರೆಗೂ ಪ್ರೇಕ್ಷಕರ ಸಂಖ್ಯೆ ನಿರ್ಧರಿಸುವ ಅಂಶವನ್ನು ಸರ್ಕಾರ ಕಾಯ್ದಿರಿಸಿಕೊಂಡಿದೆ.
ಎಲ್ಲ ಕಾಮಗಾರಿಗಳು ಮುಗಿದ ನಂತರ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಆಯುಕ್ತ ಮಹೇಶ್ವರರಾವ್ ನೇತೃತ್ವದ ಸಮಿತಿಯು ಸ್ಥಳಕ್ಕೆ ಭೇಟಿ ನೀಡಿ, ವಸ್ತುಸ್ಥಿತಿ ಪರಿಶೀಲಿಸಿ ವರದಿ ಸಲ್ಲಿಸಲಿದೆ. ಇದರ ಆಧಾರದ ಮೇಲೆ ಪ್ರೇಕ್ಷಕರ ಸಂಖ್ಯೆ ನಿರ್ಧರಿತವಾಗಲಿದೆ. ಇದರಿಂದ ಕ್ರೀಡಾಂಗಣ ಭರ್ತಿಗೆ ಸಂಬಂಧಿಸಿದ ವಿಷಯ ಇನ್ನೂ ಅಸ್ಪಷ್ಟವಾಗಿಯೇ ಉಳಿದಿದ್ದು, ಆರ್‌ಸಿಬಿ ಫ್ರಾಂಚೈಸಿ ಗೊಂದಲದಲ್ಲಿ ಸಿಲುಕಿದೆ. ಟಿಕೆಟ್ ಮಾರಾಟವೂ ಫ್ರಾಂಚೈಸಿಗಳಿಗೆ ಪ್ರಮುಖ ಆದಾಯ ಮಾರ್ಗವಾಗಿರುವುದು ಇದಕ್ಕೆ ಕಾರಣ. ಮಾರ್ಚ್ 26ರಿಂದ 19ನೇ ಆವೃತ್ತಿ ಆರಂಭವಾಗಲಿದ್ದು, ಮುಂದಿನ ಕೆಲವು ವಾರ ಕೆಎಸ್‌ಸಿಎ ಪಾಲಿಗೆ ನಿರ್ಣಾಯಕ. ಡಿ.ಕುನ್ಹಾ ಸಮಿತಿ ಶಿಫಾರಸುಗಳನ್ನು ಪೂರೈಸಲು ಕೆಎಸ್‌ಸಿಎಗೆ ಮಾರ್ಚ್ 15ರ ಅಂತಿಮ ಗಡುವು ನೀಡಲಾಗಿದೆ.
ಕೆಕೆಆರ್, ಆರ್‌ಆರ್ ಆಸಕ್ತಿ?
ಐಪಿಎಲ್ 19ನೇ ಆವೃತ್ತಿಯ ವೇಳಾಪಟ್ಟಿ ಅಂತಿಮಗೊಳಿಸಲು ಎಲ್ಲ ಫ್ರಾಂಚೈಸಿಗಳು ತವರು ಮೈದಾನಗಳನ್ನು ನಿರ್ಧರಿಸಲು ಬಿಸಿಸಿಐ (BCCI) ಜ. 20ರ ಗಡುವು ವಿಧಿಸಿದೆ. ಇದರಿಂದ ಕೆಎಸ್‌ಸಿಎ, ಸರ್ಕಾರದಿಂದ ಪಂದ್ಯಗಳ ಆಯೋಜನೆಗೆ ಅನುಮತಿ ಪಡೆದುಕೊಂಡಿದೆ. ಆರ್‌ಸಿಬಿ ಹೊರತುಪಡಿಸಿ ಕೆಕೆಆರ್ (KKR), ರಾಜಸ್ಥಾನ ರಾಯಲ್ಸ್(RR) ಸಹಿತ ಇತರ ಮೂರು ಫ್ರಾಂಚೈಸಿಗಳೂ ಬೆಂಗಳೂರಿನಲ್ಲಿ ಆಡಲು ಆಸಕ್ತಿ ತೋರಿವೆ ಎನ್ನಲಾಗಿದೆ. ಇದರಿಂದಾಗಿ, ಆರ್‌ಸಿಬಿ ತಂಡ ಬೆಂಗಳೂರಿನಿಂದ ಹೊರನಡೆದರೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಸಲ ಐಪಿಎಲ್ ಪಂದ್ಯಗಳು ನಡೆಯುವ ಸಾಧ್ಯತೆಗಳಿವೆ.
ಕೆಕೆಆರ್ ತಂಡದ ಸಿಇಒ ಹಾಗೂ ಎಂಡಿ ವೆಂಕಿ ಮೈಸೂರು ಮೂಲತ ಕರ್ನಾಟಕದವರಾಗಿದ್ದು, ಬೆಂಗಳೂರಿನಲ್ಲಿ ಕೆಲ ಪಂದ್ಯಗಳನ್ನು ಆಡುವ ಆಸಕ್ತಿ ತೋರಿದ್ದಾರೆ. ರಾಜಸ್ಥಾನ ರಾಜ್ಯ ಕ್ರಿಕೆಟ್ ಸಂಸ್ಥೆಯ ಜತೆಗಿನ ಮ್ಯಾಚ್ ಫಿಕ್ಸಿಂಗ್ ಆರೋಪದ ತಿಕ್ಕಾಟದಿಂದ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ತನ್ನ ತವರು ಸ್ಟೇಡಿಯಂ ಬದಲಾಯಿಸಲು ನಿರ್ಧರಿಸಿದೆ. ಈಗಾಗಲೇ ಪುಣೆಯ ಎಂಸಿಎ ಜತೆಗೆ ಚಿನ್ನಸ್ವಾಮಿಯಲ್ಲೂ ಆಡಲು ಕಾರ್ಯತಂತ್ರ ರೂಪಿಸಿದೆ. ಯಾವುದೇ ಕ್ರೀಡೆಯಾದರು ಗಾರ್ಡನ್ ಸಿಟಿಯ ಜನರು ನೀಡುವ ಬೆಂಬಲದ ಜತೆಗೆ ಇತರ ರಾಜ್ಯಗಳಿಗೆ ಹೋಲಿಸಿದರೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಐಪಿಎಲ್ ಪಂದ್ಯಗಳ ಟಿಕೆಟ್‌ನ ಮುಖಬೆಲೆ (PRICE) ದುಬಾರಿ ಎನಿಸಿರುವುದರಿಂದ ಫ್ರಾಂಚೈಸಿಗಳು ಆಸಕ್ತಿ ತೋರಿವೆ.
ಇಂದು ಕೆಎಸ್‌ಸಿಎ-ಫ್ರಾಂಚೈಸಿ ಸಭೆ
ಮುಂಬರುವ ಆವೃತ್ತಿಯಲ್ಲಿ ಐಪಿಎಲ್ ಪಂದ್ಯಗಳ ಆಯೋಜನೆ ಕುರಿತು ಸೋಮವಾರ ಕೆಎಸ್‌ಸಿಎ ಹಾಗೂ ಆರ್‌ಸಿಬಿ ಫ್ರಾಂಚೈಸಿಯ ಪ್ರಮುಖರ ನಡುವೆ ಸಭೆ ನಿಗದಿಯಾಗಿದೆ. ಈ ಸಭೆಯಲ್ಲಿ ಆರ್‌ಸಿಬಿ ಫ್ರಾಂಚೈಸಿ ತವರು ಮೈದಾನದ ಗೊಂದಲಗಳಿಗೆ ತೆರೆ ಬೀಳುವ ನಿರೀಕ್ಷೆ ಇದೆ. ಕಾಲ್ತುಳಿತ ಘಟನೆಯ ನಂತರ ನಕಾರಾತ್ಮಕ ಘಟನೆಗಳಿಂದ ಬೆಂಗಳೂರಿನಲ್ಲಿ ಆಡಲು ಹಿಂದೇಟು ಹಾಕುತ್ತಿರುವ ಫ್ರಾಂಚೈಸಿ, ಕಾಲ್ತುಳಿತಕ್ಕೆ ಸಂಬಂಧಿಸಿದ ಪ್ರಕರಣವೂ ಜೀವಂತವಿರುವುದರಿಂದ ಕೊನೇ ಕ್ಷಣದಲ್ಲಿ ತವರು ಮೈದಾನ ಬದಲಾಯಿಸುವ ಯೋಜನೆ ಕೈ ಬಿಟ್ಟರೂ ಆಶ್ಚರ್ಯವಿಲ್ಲ. ಏಳು ತವರು ಪಂದ್ಯಗಳ ಪೈಕಿ ಆರಂಭಿಕ ಎರಡು ಪಂದ್ಯಗಳ ಹೊರತಾಗಿ, ಕೊನೇ ಐದು ಪಂದ್ಯಗಳನ್ನು ಬೆಂಗಳೂರಿನಲ್ಲಿ ಆಡುವ ಪ್ರಸ್ತಾವನೆಯನ್ನು ಫ್ರಾಂಚೈಸಿ, ಕೆಎಸ್‌ಸಿಎ ಮುಂದಿಟ್ಟಿದೆ ಎನ್ನಲಾಗಿದೆ.