ಬೆಂಗಳೂರು: "ಐಪಿಎಲ್ ಫೈನಲ್ ಪಂದ್ಯವು ಬೆಂಗಳೂರಿನಲ್ಲೇ ನಡೆಯಬೇಕಿತ್ತು. ಆದರೆ ರಾಜಕೀಯ ಕಾರಣಗಳಿಗಾಗಿ ಪಂದ್ಯವನ್ನು ಗುಜರಾತ್‌ಗೆ ಸ್ಥಳಾಂತರಿಸುವ ಮೂಲಕ ಕರ್ನಾಟಕ ಹಾಗೂ RCB ಅಭಿಮಾನಿಗಳಿಗೆ ದೊಡ್ಡ ಅನ್ಯಾಯ ಮಾಡಲಾಗಿದೆ" ಎಂದು ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.
ಭಾನುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ರೋಚಕ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಗುಜರಾತ್ ಟೈಟನ್ಸ್ ಮಣಿಸಿ ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದ ಬೆನ್ನಲ್ಲೇ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಸಿಸಿಐ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ರಾಜಕೀಯದಿಂದಾಗಿ ಬೆಂಗಳೂರಿಗೆ ಸಿಗದ ಫೈನಲ್ ಭಾಗ್ಯ!
ಜೂನ್ 3 ರಂದು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಆರ್‌ಸಿಬಿ ಗೆಲುವನ್ನು ಸಂಭ್ರಮಿಸುತ್ತಲೇ ತಮ್ಮ ಅಸಮಾಧಾನ ಹೊರಹಾಕಿದರು. "ಈ ಮಹತ್ವದ ಪಂದ್ಯ ನಮ್ಮ ಬೆಂಗಳೂರಿನಲ್ಲಿ ನಡೆದಿದ್ದರೆ ಅಭಿಮಾನಿಗಳಿಗೆ ಹಬ್ಬದ ವಾತಾವರಣ ಇರುತ್ತಿತ್ತು. ಆದರೆ ರಾಜಕೀಯ ಹಸ್ತಕ್ಷೇಪದಿಂದಾಗಿ ಪಂದ್ಯವನ್ನು ಅಲ್ಲಿಗೆ ಕೊಂಡೊಯ್ಯಲಾಗಿದೆ. ಈ ಬಗ್ಗೆ ನಾನು ಈಗ ಜಾಸ್ತಿ ಮಾತನಾಡುವುದಿಲ್ಲ" ಎಂದರು. ಆದಾಗ್ಯೂ ತಂಡದ ಸಾಧನೆಯನ್ನು ಶ್ಲಾಘಿಸಿದ ಅವರು, "ಆರ್‌ಸಿಬಿ ಆಟಗಾರರು ಈ ಸೀಸನ್‌ನಲ್ಲಿ ಅದ್ಭುತವಾಗಿ ಆಡಿದ್ದಾರೆ. ಕರ್ನಾಟಕದ ಜನತೆ, ಆರ್‌ಸಿಬಿ ಅಭಿಮಾನಿಗಳು ಹಾಗೂ ರಾಜ್ಯ ಸರ್ಕಾರದ ಪರವಾಗಿ ಇಡೀ ತಂಡಕ್ಕೆ ನನ್ನ ಹೃತ್ಪೂರ್ವಕ ಶುಭ ಹಾರೈಕೆಗಳು" ಎಂದು ತಿಳಿಸಿದರು.
ಇತಿಹಾಸ ಸೃಷ್ಟಿಸಿದ ಆರ್‌ಸಿಬಿ: ಕೊಹ್ಲಿ ಫಿಫ್ಟಿ ಬಾರಿಸಿದ್ರೆ ಸೋಲೇ ಇಲ್ಲ!
ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಗುಜರಾತ್ ನೀಡಿದ್ದ 156 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ, 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ರನ್ ಮಷಿನ್ ವಿರಾಟ್ ಕೊಹ್ಲಿ ಕೇವಲ 25 ಎಸೆತಗಳಲ್ಲಿ ಬಿರುಗಾಳಿಯ ಅರ್ಧಶತಕ ಬಾರಿಸಿ, ಒಟ್ಟಾರೆ 42 ಎಸೆತಗಳಲ್ಲಿ 9 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ ಅಜೇಯ 75 ರನ್ ಚಚ್ಚಿದರು. ಇದು ಐಪಿಎಲ್ ಪ್ಲೇ-ಆಫ್ಸ್ ಇತಿಹಾಸದಲ್ಲೇ ಕೊಹ್ಲಿ ಅವರ ಗರಿಷ್ಠ ಸ್ಕೋರ್ ಆಗಿದೆ. ವಿಶೇಷವೆಂದರೆ, 2025ರ ಸೀಸನ್‌ನಿಂದ ಇಂದಿನವರೆಗೆ ವಿರಾಟ್ ಕೊಹ್ಲಿ ಅರ್ಧಶತಕ ಬಾರಿಸಿದ ಯಾವುದೇ ಪಂದ್ಯದಲ್ಲೂ ಆರ್‌ಸಿಬಿ ಸೋತಿಲ್ಲ ಎಂಬ ಅಪರೂಪದ ದಾಖಲೆ ಮುಂದುವರಿದಿದೆ.
ಕೊಹ್ಲಿಗೆ ಉತ್ತಮ ಸಾಥ್ ನೀಡಿದ ವೆಂಕಟೇಶ್ ಅಯ್ಯರ್ ಬಿರುಸಿನ 32 ರನ್ ಗಳಿಸಿ ತಂಡದ ಗೆಲುವನ್ನು ಸುಲಭಗೊಳಿಸಿದರು. ಈ ಗೆಲುವಿನೊಂದಿಗೆ ಆರ್‌ಸಿಬಿ ತಂಡವು ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಬಳಿಕ ಐಪಿಎಲ್ ಇತಿಹಾಸದಲ್ಲಿ ಸತತವಾಗಿ (ಬ್ಯಾಕ್ ಟು ಬ್ಯಾಕ್) ಟ್ರೋಫಿ ಡಿಫೆಂಡ್ ಮಾಡಿಕೊಂಡ ಮೂರನೇ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
ಜಿಟಿಗೆ ಮುಳುವಾದ ಸತತ ಪ್ರಯಾಣದ ಆಯಾಸ
2022ರ ಚಾಂಪಿಯನ್ಸ್ ಗುಜರಾತ್ ಟೈಟನ್ಸ್ ತಂಡಕ್ಕೆ ಆರ್‌ಸಿಬಿ ಬೌಲರ್‌ಗಳ ಕರಾರುವಾಕ್ ದಾಳಿ ಹಾಗೂ ಸತತ ಪ್ರಯಾಣದ ಆಯಾಸವೇ ಮುಳುವಾಯಿತು. ಕೇವಲ 6 ದಿನಗಳಲ್ಲಿ ಮೂರು ಬೇರೆ ಬೇರೆ ನಗರಗಳಲ್ಲಿ ಮೂರು ಪ್ರಮುಖ ಪಂದ್ಯಗಳನ್ನು ಆಡಬೇಕಾದ ಕಠಿಣ ವೇಳಾಪಟ್ಟಿ ಜಿಟಿ ತಂಡಕ್ಕಿತ್ತು. ಹವಾಮಾನ ವೈಪರೀತ್ಯದಿಂದಾಗಿ ಶನಿವಾರ ರಾತ್ರಿಯಷ್ಟೇ ಅಹಮದಾಬಾದ್ ತಲುಪಿದ್ದ ಶುಭಮನ್ ಗಿಲ್ ಪಡೆ, ಆರ್‌ಸಿಬಿ ಸಾಂಘಿಕ ಪ್ರದರ್ಶನದ ಮುಂದೆ ರನ್ನರ್-ಅಪ್ ಪ್ರಶಸ್ತಿಗೆ ತೃಪ್ತಿಪಡಬೇಕಾಯಿತು,(ಏಜೆನ್ಸೀಸ್).